ನಗರದಲ್ಲೂ ನ್ಯಾಷನಲ್ ಕೋ ಆಪ್ ಬ್ಯಾಂಕ್
ಮೈಸೂರು: ಬೆಂಗಳೂರಿನ ಗಾಂಧಿ ಬಜಾರ್ ಮುಖ್ಯರಸ್ತೆಯಲ್ಲಿರುವ ದಿ ನ್ಯಾಷನಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್ನ ನೂತನ ಶಾಖೆಯು ಮೈಸೂರಿನ ಕುವೆಂಪುನಗರದ ಪಂಚಮಂತ್ರ ರಸ್ತೆ ಜ್ಞಾನಗಂಗಾ ಶಾಲೆ ಎದುರಿನಲ್ಲಿ ಮೇ 9ರ ಬೆಳಗ್ಗೆ 10.15ಕ್ಕೆ ಉದ್ಘಾಟನೆಯಾಗಲಿದೆ.
ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದ ಉದ್ಘಾಟಿಸುವರು. ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಎಟಿಎಂ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಶಾಸಕರಾದ ಜಿ.ಟಿ. ದೇವೇಗೌಡ, ಎಂ.ಕೆ. ಸೋಮಶೇಖರ್, ನಗರಪಾಲಿಕೆ ಸದಸ್ಯ ಕೆ.ವಿ. ಮಲ್ಲೇಶ್ ಭಾಗವಹಿಸುವರು. ಬ್ಯಾಂಕ್ನ ಅಧ್ಯಕ್ಷ ಎಚ್.ಆರ್. ಸುರೇಶ್ ಅಧ್ಯಕ್ಷತೆ ವಹಿಸುವರು. ಸಂಸದ, ದಿ.ಟಿ.ಆರ್. ಶಾಮಣ್ಣ, ಸಹಕಾರಿ ದಿ.ವೈ.ವಿ. ಕೇಶವಮೂರ್ತಿ, ಮಾಜಿ ಸಚಿವ ಹಾಗೂ ಸಂಸದ ದಿ. ವಿ.ಎಸ್. ಕೃಷ್ಣಯ್ಯರ್ ನೇತೃತ್ವದಲ್ಲಿ ಈ ಬ್ಯಾಂಕ್ ಅನ್ನು ಬೆಂಗಳೂರಿನಲ್ಲಿ 1976, ಫೆ.29ರಲ್ಲಿ ಅಂದಿನ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಉದ್ಘಾಟಿಸಿದ್ದರು. ಕರ್ನಾಟಕದಲ್ಲಿರುವ 265 ಸಹಕಾರ ಬ್ಯಾಂಕ್ಗಳಲ್ಲಿ ಈ ಬ್ಯಾಂಕ್ 3ನೇ ಸ್ಥಾನ ಹೊಂದಿದೆ. 90 ಕೋಟಿಗಳಿಗೂ ಮೀರಿ ಸ್ವಂತ ಬಂಡವಾಳ ಕ್ರೋಡೀಕರಿಸಲಾಗಿದ್ದು, 39 ವರ್ಷಗಳಿಂದ ಸತತವಾಗಿ ಎ ಆಡಿಟ್ ವರ್ಗೀಕರಣದಲ್ಲಿದೆ ಮತ್ತು ಪ್ರಾರಂಭದಿಂದಲೂ ಲಾಭ ಗಳಿಸುತ್ತಿದೆ. ಸತತವಾಗಿ 5 ವರ್ಷಗಳಿಂದ ರಾಜ್ಯ ಸರ್ಕಾರದಿಂದ ಮತ್ತು ರಾಜ್ಯ ಸಹಕಾರ ಮಹಾಮಂಡಳದಿಂದ ಅತ್ಯುತ್ತಮ ಪಟ್ಟಣ ಸಹಕಾರಿ ಬ್ಯಾಂಕ್ ಪ್ರಶಸ್ತಿ ಬಂದಿದೆ. 2007ರ ಜೂನ್ನಲ್ಲಿ ರಾಜ್ಯದ ಸಹಕಾರ ಚಳವಳಿಯ ಶತಮಾನೋತ್ಸವ ವೇಳೆ ರಾಜ್ಯದ ಅತ್ಯುತ್ತಮ ಸಹಕಾರಿ ಬ್ಯಾಂಕ್ ಪ್ರಶಸ್ತಿ ಪ್ರದಾನವಾಗಿದೆ. 2008 ರಲ್ಲಿ ಬೆಂಗಳೂರಿನ ಗಾಂಧಿ ಬಜಾರ್ನಲ್ಲಿ ಬ್ಯಾಂಕಿನ ಸ್ವಂತ ನಿವೇಶನದಲ್ಲಿ ಆಧುನಿಕ ಸೌಕರ್ಯಗಳನ್ನೊಳಗೊಂಡ 18000 ಚದರಡಿ ವಿಸ್ತೀರ್ಣದ ಬೃಹತ್ ಕಟ್ಟಡದಲ್ಲಿ ಆಡಳಿತ ಕಚೇರಿ ಮತ್ತು ಮುಖ್ಯ ಶಾಖೆ ಹೊಂದಿದೆ. ಬ್ಯಾಂಕಿನ ಒಟ್ಟು ಸ್ಥಿರಾಸ್ತಿಯ ಮಾರುಕಟ್ಟೆ ಮೌಲ್ಯ 30 ಕೋಟಿ ಮೀರಿರುತ್ತದೆ.
ಪ್ರೋತ್ಸಾಹಧನ, ಸನ್ಮಾನ: ಕಳೆದ 25 ವರ್ಷಗಳಿಂದ ಸದಸ್ಯರ ಮಕ್ಕಳಿಗೆ ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ತರಗತಿಗಳಲ್ಲಿ ಹೆಚ್ಚಿನ ಅಂಕ ಗಳಿಸಿದವರಿಗೆ ಪ್ರೋತ್ಸಾಹಧನ ನೀಡಿ ಸನ್ಮಾನಿಸುತ್ತಿದೆ. ಸದಸ್ಯ ಮತ್ತು ಅವರ ಕುಟುಂಬದವರ ರಾಷ್ಟ್ರೀಯ, ಅಂತಾರಾಷ್ಟ್ರೀಯ ಸಾಧನೆಗಳನ್ನು ಗುರುತಿಸಿ ಸತ್ಕರಿಸುವುದು. ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಆರ್ಥಿಕವಾಗಿ ಹಿಂದುಳಿದ ಸುಮಾರು 100 ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ವಿತರಿಸುತ್ತಿದೆ. ಶಾಲೆಗಳ ಉಪಯೋಗಕ್ಕಾಗಿ ಪೀಠೋಪಕರಣ ನೀಡುತ್ತಿದೆ. ಪ್ರವಾಹ ಸಂತ್ರಸ್ತರಿಗೆ 3 ಲಕ್ಷ ದೇಣಿಗೆ ನೀಡಿದೆ. ಪ್ರಸಕ್ತ ಬೆಂಗಳೂರಿನ ವಿವಿಧ ಪ್ರತಿಷ್ಠಿತ ಬಡಾವಣೆಯಲ್ಲಿ 12 ಶಾಖೆಗಳ ಮೂಲಕ 2 ಲಕ್ಷ ಗ್ರಾಹಕರಿಗೆ ಗುಣಮಟ್ಟದ ಬ್ಯಾಂಕಿಂಗ್ ಸೇವೆ ನೀಡುತ್ತಿದೆ.