ರೈತರ ಸಮಸ್ಯೆ ಪರಿಹರಿಸಲು ಆಗ್ರಹಿಸಿ ಧರಣಿ
ಮೈಸೂರು: ಮುಖ್ಯಮಂತ್ರಿಯವರ ತವರು ಜಿಲ್ಲೆ ಮೈಸೂರಿನಲ್ಲಿ ರೈತರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರಿ ಕಚೇರಿಗಳು ನಿಷ್ಕ್ರಿಯವಾಗಿವೆ. ಜಿಲ್ಲಾಡಳಿತವನ್ನು ಬಡಿದೆಬ್ಬಿಸಲು ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯವರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಧರಣಿ ನಡೆಸಿದರು.
ಮೈಸೂರು ತಾಲೂಕು ಜಯಪುರ ಹೋಬಳಿ ಗೋಪಾಲಪುರ, ಮುಳ್ಳೂರು, ಡಿ.ಸಾಲುಂಡಿ, ನಗರ್ತಹಳ್ಳಿ, ತಳೂರು, ಧನಗಳ್ಳಿ, ಕೆಂಚಲಗೂಡು, ಸಿಂಧುವಳ್ಳಿ, ದಡದಹಳ್ಳಿ ಮತ್ತು ಕೆ. ಸಾಲುಂಡಿ ಗ್ರಾಮಗಳಿಗೆ ಈಗಾಗಲೇ ಮಂಜೂರಾಗಿರುವ ಕಬಿನಿ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಹಣ ಬಿಡುಗಡೆಗೊಳಿಸಬೇಕು. ತಕ್ಷಣ ಕಾಮಗಾರಿ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಒತ್ತುವರಿ ತೆರವು: ಜಯಪುರ ಹೋಬಳಿ ಕೆಂಚಲಗೂಡು ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿರುವ ಜಮೀನನ್ನು ಕೂಡಲೇ ತೆರವುಗೊಳಿಸಬೇಕು. ವಿಮಾನ ನಿಲ್ದಾಣಕ್ಕೆ ಮನೆ ಮತ್ತು ನಿವೇಶನ ಕಳೆದುಕೊಂಡಿರುವ 29 ಕುಟುಂಬಗಳಿಗೆ ಜಿಲ್ಲಾಡಳಿತ ಒಪ್ಪಿರುವಂತೆ ಕೂಡಲೇ ಪರಿಹಾರ ನೀಡಬೇಕು. ಮೈಸೂರು ಸುತ್ತಮುತ್ತ ಕೃಷಿಯೇತರ ಉದ್ದೇಶಕ್ಕೆ ಭೂ ಪರಿವರ್ತನೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಮುಖಂಡರಾದ ಕೆ.ಎಸ್. ನಂಜುಂಡೇಗೌಡ, ಎಂ.ಎಸ್. ಅಶ್ವತ್ಥನಾರಾಯಣರಾಜೇ ಅರಸ್, ಕೆ.ಎಂ.ಪುಟ್ಟಸ್ವಾಮಿ, ಬನ್ನೂರು ಕೃಷ್ಣಪ್ಪ, ಮಹೇಶ್ ಪ್ರಭು, ನರಸರಾಜ್, ಸರಗೂರು ನಟರಾಜ್, ಜೋಗನಾಯಕ, ಕೆ.ಕೆಂಪೇಗೌಡ, ಕರೀಗೌಡ, ಜಕ್ಕಳ್ಳಿ ಲಿಂಗೇಗೌಡ, ಶಂಭುಲಿಂಗಸ್ವಾಮಿ, ನಟರಾಜ್, ಬೆಂಕಿಪುರ ಚಿಕ್ಕಣ್ಣ, ಹಾರೋಹಳ್ಳಿ ಪಾಪೇಗೌಡ, ಧನಗಳ್ಳಿ ಲಿಂಗರಾಜು, ಕೆಂಚಲಗೂಡು ಮರಂಕಯ್ಯ, ನಾಗನಹಳ್ಳಿ ಮಹದೇವಪ್ಪ, ಮಂಡಕಳ್ಳಿ ಮಹೇಶ್, ಕಿರಾಳು ಜಲೇಂದ್ರ ಇದ್ದರು.