ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ರೈತರಿಗೆ ಆಧಾರ್ ಮಾದರಿ ಸಂಖ್ಯೆ

Vishwanath S
Updated On : 7 May 2014, 12:13 pm

ಮೈಸೂರು: ರೈತಪರ ಯೋಜನೆಗಳ ಯಶಸ್ಸಿಗೆ ಕೃಷಿಕರ ಕುರಿತು ಪ್ರಾಥಮಿಕ ಮಾಹಿತಿ ಅತ್ಯಂತ ಅವಶ್ಯಕವೆಂದು ಪರಿಗಣಿಸಿರುವ ಸರ್ಕಾರವು, ಕೆ- ಕಿಸಾನ್ ಯೋಜನೆಯಡಿ ರೈತರು ಮತ್ತು ಕೃಷಿ ಭೂಮಿ ಬಗ್ಗೆ ಸಂಪೂರ್ಣವಾಗಿ ಸಂಗ್ರಹಿಸಿದ ವಿವರಗಳ ಆಧಾರದ ಮೇಲೆ ಆಧಾರ್ ಮಾದರಿಯಲ್ಲಿ ರೈತರಿಗೂ ಒಂದು ಅಧಿಕೃತ ಸಂಖ್ಯೆ ನೀಡಲು ಯೋಜಿಸಿದೆ.
ಕೃಷಿ ಇಲಾಖೆಯ ಕೆ-ಕಿಸಾನ್ ಕರ್ನಾಟಕ ಕೃಷಿ ಮಾಹಿತಿ ಸೇವೆಗಳು ಮತ್ತು ನೆಟ್‌ವರ್ಕಿಂಗ್ ಯೋಜನೆಯು ಸರ್ಕಾರದ ಯೋಜನೆಗಳನ್ನು ನೇರವಾಗಿ ರೈತರಿಗೆ ತಲುಪಿಸುವ ವಿನೂತನ ಯೋಜನೆಯಾಗಿದ್ದು, ಮೊದಲ ಹಂತದಲ್ಲಿ ಎಲ್ಲ ಕಸಬಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪೂರ್ಣವಾಗಿ ಕಂಪ್ಯೂಟರೀಕರಣಗೊಳಿಸಲಾಗಿದ್ದು, ಮುಂದಿನ ಹಂತದಲ್ಲಿ ಉಳಿದ ಎಲ್ಲಾ ರೈತ ಸಂಪರ್ಕ ಕೇಂದ್ರಗಳನ್ನು ಸಹ ಕಂಪ್ಯೂಟರೀಕರಣಗೊಳಿಸಲಾಗುವುದು.
ಮೇ 5 ರಿಂದ ಮಾಹಿತಿ ಸಂಗ್ರಹಣೆ ಕಾರ್ಯ ಆರಂಭವಾಗಿದ್ದು, ರೈತ ಅನುವುಗಾರರ ಮುಖಾಂತರ ಕಸಬಾ ಹೋಬಳಿ ವ್ಯಾಪ್ತಿಯ ರೈತರ ಮಾಹಿತಿ ಸಂಗ್ರಹಿಸಿ ಕೃಷಿ ಪರಿಕರ ಪೂರೈಕೆ ವ್ಯವಸ್ಥೆ ಸಾಫ್ಟ್‌ವೇರ್‌ಗೆ ಅಳವಡಿಸುವ ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಕೃಷಿ ಪರಿಕರಗಳಿಗೆ ಸಂಬಂಧಪಟ್ಟ ಎಲ್ಲ ವಹಿವಾಟುಗಳನ್ನು ಈ ಸಾಫ್ಟ್‌ವೇರ್ ಮೂಲಕ ಮಾಡಲು ಅನುವಾಗುವಂತೆ ಕಂಪ್ಯೂಟರೀಕರಣ ಮಾಡಲಾಗಿದ್ದು, ಈ ಕುರಿತು ಮುಖ್ಯ ತರಬೇತುದಾರರಿಗೆ ತರಬೇತಿ ನೀಡಿದೆ. ತರಬೇತಿ ಹೊಂದಿದ ತರಬೇತುದಾರರು ಜಿಲ್ಲೆಯ ಕಸಬಾ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ರೈತ ಅನುವುಗಾರರಿಗೆ ತರಬೇತಿ ನೀಡುವರು.
ರೈತರಿಂದ ಮಾಹಿತಿ ಸಂಗ್ರಹಿಸುವ ವೇಳೆ ಭೂಹಿಡುವಳಿ ವಿವರಗಳ ಜೊತೆಗೆ ಪಹಣಿ ಪ್ರತಿಯು ಅವಶ್ಯವಿರುವುದರಿಂದ ಜಿಲ್ಲಾ ವ್ಯಾಪ್ತಿಯ ತಾಲೂಕಿನ ತಹಸೀಲ್ದಾರ್ ಮತ್ತು ಸಿಬ್ಬಂದಿ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸಿ. ಸಿಖಾ ತಿಳಿಸಿದ್ದಾರೆ. ಈ ಬಗ್ಗೆ ರೈತ ಸಮುದಾಯಕ್ಕೆ ಅರಿವು ಮೂಡಿಸುವಂತೆಯೂ ಅವರು ಕಂದಾಯ ಹಾಗೂ ಕೃಷಿ ಸಂಬಂಧಿತ ಇಲಾಖಾ ಅಧಿಕಾರಿಗಳಿಗೆ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement