ಗೊಬ್ಬರ ಖರೀದಿಸುವಾಗ ಎಚ್ಚರ
ಪಿರಿಯಾಪಟ್ಟಣ: ತಾಲೂಕಿನಲ್ಲಿ ಕೆಲವರು ತಂಬಾಕು ರೈತರಿಗೆ ಸಿಎಎನ್ ಗೊಬ್ಬರ ಎಂದು ತಿಳಿಸಿ ಬೇರೆ ಗೊಬ್ಬರವನ್ನು ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ರೈತರು ಈ ಬಗ್ಗೆ ಜಾಗೃತರಾಗಿರುವಂತೆ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಕೆ.ರಾಜು ಹೇಳಿದ್ದಾರೆ.
ತಂಬಾಕು ಬೆಳೆಗೆ ಸಿಎಎನ್ ರಸಗೊಬ್ಬರದ ಸರಬರಾಜು ಹಾಗೂ ಉತ್ಪಾದನೆ ಸ್ಥಗಿತಗೊಂಡಿದ್ದು, ಮಾರುಕಟ್ಟೆಯಲ್ಲಿ ಸಿಎಎನ್ ರಸಗೊಬ್ಬರ ಲಭ್ಯವಿರುವುದಿಲ್ಲ ಹಾಗೂ ತಂಬಾಕು ಮಂಡಳಿಯಿಂದಲೂ ವಿತರಣೆಯಾಗುತ್ತಿಲ್ಲ. ರೈತರು ಸಿಎಎನ್ ಗೊಬ್ಬರವೆಂದು ಬೇರೆ ಗೊಬ್ಬರ ಖರೀದಿಸಿ ತಮ್ಮ ಬೆಳೆಯನ್ನು ಹಾಳು ಮಾಡಿಕೊಳ್ಳಬಾರದು. ಈ ಬಗ್ಗೆ ಎಚ್ಚರ ವಹಿಸಬೇಕಿದೆ. ಉತ್ತಮ ಗುಣಮಟ್ಟದ ತಂಬಾಕು ಉತ್ಪಾದನೆಗಾಗಿ ತಂಬಾಕು ಮಂಡಳಿಯಿಂದ ಶಿಫಾರಸು ಮಾಡಿ ವಿತರಿಸುತ್ತಿರುವ ಎಸ್ಒಪಿ, ಸಿಂಗಪ್ ಸೂಪರ್ ಫಾಸ್ಫೇಟ್ ಹಾಗೂ ಅಮೋನಿಯಂ ಸಲ್ಫೇಟ್ ರಸಗೊಬ್ಬರವನ್ನೇ ರೈತರು ಉಪಯೋಗಿಸುವಂತೆ ಮನವಿ ಮಾಡಿದ್ದಾರೆ.
2014-15ನೇ ಸಾಲಿಗೆ ಮುಂಗಾರು ಹಂಗಾಮಿಗೆ ರೈತರಿಗೆ ಸಹಾಯಧನದಲ್ಲಿ ವಿತರಿಸಲು ತಾಲೂಕಿನ ಎಲ್ಲ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಸುಕಿನ ಜೋಳ ಬಿತ್ತನೆ ಬೀಜ, ಹಸಿರೆಲೆ ಗೊಬ್ಬರ, ಲಘು ಪೋಷಕಾಂಶಗಳಾದ ಝಿಂಕ್ಸಲ್ಫೇಟ್, ಜಿಪ್ಸಂ, ಬೋರಾಕ್ಸ್ ಗೊಬ್ಬರ, ಟಾರ್ಪಾಲಿನ್, ಸ್ಪ್ರೇಯರ್ ಹಾಗೂ ಸಸ್ಯ ಸಂರಕ್ಷಣಾ ಔಷಧಗಳನ್ನು ದಾಸ್ತಾನಿಕರಿಸಲಾಗಿದ್ದು, ಅರ್ಜಿ, ಆರ್ಟಿಸಿ ದಾಖಲಾತಿ ನೀಡಿ ರೈತರ ವಂತಿಗೆಯನ್ನು ಪಾವತಿಸಿ, ಕೃಷಿ ಪರಿಕರಗಳನ್ನು ಪಡೆಯುವಂತೆ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಹಾಗೂ ಹೋಬಳಿ ರೈತ ಸಂಪರ್ಕ ಕೇಂದ್ರದ ಕಚೇರಿ ಸಿಬ್ಬಂದಿಯನ್ನು ಸಂಪರ್ಕಿಸಲು ಕೋರಿದ್ದಾರೆ.