ತಂತ್ರಜ್ಞಾನ ಸದ್ಬಳಕೆ ಅಗತ್ಯ: ಪ್ರೊ.ಚಿದಾನಂದಗೌಡ
ಮೈಸೂರು: ಬದಲಾಗುತ್ತಿರುವ ತಂತ್ರಜ್ಞಾನ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕುವೆಂಪು ವಿವಿ ವಿಶ್ರಾಂತ ಕುಲಪತಿ ಪ್ರೊ.ಕೆ. ಚಿದಾನಂದಗೌಡ ಹೇಳಿದರು.
ಸರ್ಕಾರಿ ಆಯುರ್ವೇದ ಕಾಲೇಜು ಬುಧವಾರ ಆಯೋಜಿಸಿದ್ದ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ತಂತ್ರಜ್ಞಾನ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ನಾವು ಕಾಲಕ್ಕೆ ತಕ್ಕಂತೆ ಹೊಸ ಹೊಸ ತಂತ್ರಜ್ಞಾನವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಹಿಂದೆಲ್ಲ ತಾಳೆಗರಿಯಲ್ಲಿನ ಹಸ್ತಪ್ರತಿಗಳ ಮೂಲಕ ಅಧ್ಯಯನ ಮಾಡಲಾಗುತ್ತಿತ್ತು. ಪ್ರಸ್ತುತ ಪುಸ್ತಕಗಳನ್ನು ಅವಲಂಬಿಸಿದ್ದೇವೆ. ನಮ್ಮ ಮುಂದಿನ ಪೀಳಿಗೆ ಸಿಡಿ, ಡಿವಿಡಿಗಳ ಮೂಲಕ ಪಠ್ಯಕ್ರಮಗಳನ್ನು ಓದುತ್ತಾರೆ. ಅಂತಹ ದಿನ ದೂರ ಉಳಿದಿಲ್ಲ ಎಂದು ಹೇಳಿದರು.
ಮೈಸೂರು ವಿವಿ ಸಿಪಿಡಿಪಿಎಸ್ ನಿರ್ದೇಶಕ ಪ್ರೊ.ನಿರಂಜನ ವಾನಳ್ಳಿ ಮಾತನಾಡಿದರು. ಪ್ರಾಂಶುಪಾಲ ಡಾ.ಸತ್ಯನಾರಾಯಣ ಭಟ್, ಸಂಘದ ಅಧ್ಯಕ್ಷ ಎನ್.ಎಸ್. ಹನುಮಂತಪ್ಪ ಇದ್ದರು.