ನೇಪಥ್ಯಕ್ಕೆ ಸರಿದ ಮೂಲಸೌಕರ್ಯ
ಭೇರ್ಯ ಮಹೇಶ್
ಕ.ಪ್ರ.ವಾರ್ತೆ ಭೇರ್ಯ ಮೇ 7
ಕೆ.ಆರ್. ನಗರ ತಾಲೂಕು ಕುಲುಮೆಹೊಸೂರು ಗ್ರಾಮ ಕನಿಷ್ಠ ಮೂಲಸೌಲಭ್ಯಗಳಿಂದ ವಂಚಿತವಾಗಿದ್ದು, ಇಲ್ಲಿನ ಜನತೆ ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.
ಚರಂಡಿ ಅವ್ಯವಸ್ಥೆ, ಕೊಳಚೆ, ದುರ್ನಾತ ಹಾಗೂ ಕಲ್ಲೆದ್ದ ರಸ್ತೆ ಇಲ್ಲಿನ ಜನರ ನೆಮ್ಮದಿಗೆ ಭಂಗ ತಂದಿದ್ದು, ಅವ್ಯವಸ್ಥೆ ನಡುವೆ ಜೀವನ ಸಾಗಿಸುವಂತಾಗಿದೆ. ಕರ್ಪೂರವಳ್ಳಿ ಗ್ರಾಪಂ ವ್ಯಾಪ್ತಿಯ ಈ ಗ್ರಾಮದಲ್ಲಿ ಸುಮಾರು 160 ಮನೆಗಳಿದ್ದು, 900ಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆದರೆ ಅಧಿಕಾರಿಗಳು ಹಾಗೂ ಗ್ರಾಪಂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಅಭಿವೃದ್ಧಿ ಮರೀಚಿಕೆಯಾಗಿದೆ ಎನ್ನುತ್ತಾರೆ ಸ್ಥಳೀಯರು.
ಚರಂಡಿ ಅವ್ಯವಸ್ಥೆ: ಚರಂಡಿ ಅವ್ಯವಸ್ಥೆಯಿಂದ ಜನರು ಮೂಗುಮುಚ್ಚಿ ಓಡಾಡುವಂತಾಗಿದೆ. ಹಲವೆಡೆ ಚರಂಡಿಯೇ ಇಲ್ಲ. ಇರುವ ಕೆಲವೇ ಕೆಲ ಚರಂಡಿಗಳು ಕೆಸರು, ಕಸಕಡ್ಡಿಯಿಂದ ಮುಚ್ಚಿದ್ದು, ಮೂಲಸ್ವರೂಪ ಕಳೆದುಕೊಂಡಿವೆ. ಇದರಿಂದಾಗಿ ಕೊಳಚೆ ನೀರು ಅಲ್ಲಲ್ಲಿ ಸಂಗ್ರಹಗೊಂಡು ದುರ್ವಾಸನೆ ಬೀರುತ್ತಿದ್ದು, ರಸ್ತೆ ಮೇಲೂ ಹರಿಯುತ್ತಿದೆ. ಕೊಳಚೆ ನೀರಿನಿಂದ ಮನೆ ಪ್ರವೇಶಿಸುವ ಸೊಳ್ಳೆಗಳಿಂದ ಇಲ್ಲಿನ ಜನರು ಪದೇ ಪದೇ ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮಳೆಗಾಲದಲ್ಲಂತೂ ಸಂಪೂರ್ಣ ರಾಡಿಯಾಗುವ ರಸ್ತೆಗಳಿಗೆ ಕೊಳಚೆ ಸೇರ್ಪಡೆಯಾಗಿ ಇಡೀ ಗ್ರಾಮದ ನೈರ್ಮಲ್ಯ ಹದಗೆಡಲಿದ್ದು, ತಗ್ಗುಪ್ರದೇಶದ ಮನೆಗಳಿಗೆ ನುಗ್ಗುವ ನೀರು ಅವಾಂತರ ಸೃಷ್ಟಿಸಲಿದೆ. ಗ್ರಾಮದಲ್ಲಿನ ಎಲ್ಲ ರಸ್ತೆಗಳಲ್ಲೂ ಕಲ್ಲುಗಳು ಎದ್ದಿದ್ದು, ಮಕ್ಕಳು, ವೃದ್ಧರು ಎಡವಿ ಗಾಯಗೊಂಡಿದ್ದಾರೆ. ಮಳೆ ಬಿದ್ದಾಗಲ್ಲಂತೂ ರಸ್ತೆಯಲ್ಲಿ ನೀರು ನಿಲ್ಲುವುದರಿಂದ ಪಾದಚಾರಿಗಳು ಹಾಗೂ ವಾಹನ ಸವಾರರು ಹರಸಾಹಸ ಪಡಲೇಬೇಕು. ಮಳೆ ನೀರಿನ ರಭಸಕ್ಕೆ ಅಲ್ಲಲ್ಲಿ ರಸ್ತೆಗಳು ಕೊರಕಲು ಬಿದ್ದಿವೆ. ಮೆಟ್ಲಿಂಗ್ ಮಾಡಲು ಅವಕಾಶವಿದ್ದರೂ ಸಂಬಂಧಿಸಿದವರು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ಗ್ರಾಮಸ್ಥರು.
ಬಸ್ ವಿರಳ: ಈ ಮಾರ್ಗದಲ್ಲಿ ಸಾರಿಗೆ ಬಸ್ಗಳ ಸಂಚಾರ ವಿರಳವಾಗಿದ್ದು, ರೋಗಿಗಳು, ವಿದ್ಯಾರ್ಥಿಗಳು ಪರದಾಡುವಂತಾಗಿದೆ. ಆಗೊಮ್ಮೆ, ಈಗೊಮ್ಮೆ ಬರುವ ಬಸ್ನಲ್ಲಿ ಕೆಲವೊಮ್ಮೆ ಕಾಲಿಡಲು ಜಾಗವಿರುವುದಿಲ್ಲ. ಬಸ್ ಹತ್ತಲಾಗದೆ ವಿದ್ಯಾರ್ಥಿಗಳು ಕಿ.ಮೀ. ಗಟ್ಟಲೆ ನಡೆದು ಶಾಲೆ-ಕಾಲೇಜಿಗೆ ಹೋಗಬೇಕು. ವೃದ್ಧರು ಹಾಗೂ ರೋಗಿಗಳು ದುಃಸ್ಥಿತಿಯಲ್ಲಿರುವ ಖಾಸಗಿ ವಾಹನಗಳಲ್ಲಿ ದುಪ್ಪಟ್ಟು ಹಣ ತೆತ್ತು ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಗ್ರಾಮಕ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರ, ಪಶು ಚಿಕಿತ್ಸಾಲಯ ಹಾಗೂ ಪ್ರೌಢಶಾಲೆ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿರುವ ಗ್ರಾಮಸ್ಥರು ಹತ್ತು-ಹಲವು ಸಮಸ್ಯೆಗಳು ಹಾಸುಹೊದ್ದು ಮಲಗಿದ್ದರೂ ಸಂಬಂಧಿಸಿದವರು ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಶೀಘ್ರವೇ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಚರಂಡಿಯಲ್ಲಿನ ಕೊಳಚೆ ದುರ್ವಾಸನೆ, ಕಲ್ಲೆದ್ದ ರಸ್ತೆಗಳು ನಿತ್ಯ ಕಾಡುತ್ತಿವೆ. ಹಲವು ಬಾರಿ ಮನವಿ ಮಾಡಿದರೂ ಸಂಬಂಧಿಸಿದವರು ಸಮಸ್ಯೆ ನಿವಾರಣೆಗೆ ಆಸಕ್ತಿ ತೋರಿಲ್ಲ.
ಟಿ ಕೆ. ಮಹದೇವ್, ಗ್ರಾಮಸ್ಥ
ಕುಲುಮೆಹೊಸೂರು ಗ್ರಾಮದಲ್ಲಿ ಅಗತ್ಯ ಇರುವೆಡೆ 13ನೇ ಹಣಕಾಸು ಯೋಜನೆಯ ಅನುದಾನದಲ್ಲಿ ಹಂತಹಂತವಾಗಿ ಚರಂಡಿ ನಿರ್ಮಾಣ ಜತೆಗೆ ಘನತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವುದು. ವಿಶೇಷ ಅನುದಾನದಡಿ ರಸ್ತೆಗಳನ್ನು ಮೆಟ್ಲಿಂಗ್ ಮಾಡಲಾಗುವುದು.
ಟಿ ಮಂಜುನಾಥ್, ಗ್ರಾಪಂ ಪಿಡಿಒ