ಪೇದೆ ನೇಮಕ: ದೈಹಿಕ ಸಾಮರ್ಥ್ಯ ಪರೀಕ್ಷೆ ಆರಂಭ
ಮೈಸೂರು: ಮೈಸೂರು ನಗರ ಪೊಲೀಸ್ ಆಯುಕ್ತರ ಘಟಕದ ಸಿಪಿಸಿ/ ಮಹಿಳಾ ಪಿಸಿ ಹುದ್ದೆಗಳಿಗೆ ನೇಮಕಾತಿಗಾಗಿ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆಯು ರೇಸ್ಕೋರ್ಸ್ ಹಿಂಭಾಗದಲ್ಲಿರುವ ಸಿಎಆರ್ ಮೈದಾನದಲ್ಲಿ ಬುಧವಾರ ಆರಂಭವಾಯಿತು.
ಪೊಲೀಸ್ ಇಲಾಖೆಗೆ 8 ಸಾವಿರ ಪೇದೆಗಳ ನೇಮಕಾತಿ ಪಕ್ರಿಯೆಗೆ ಚಾಲನೆ ಸಿಕ್ಕಿದ್ದು, ಮೈಸೂರು ನಗರ ಘಟಕದ 29 ಮಹಿಳಾ ಪೇದೆ ಸೇರಿದಂತೆ 145 ಸಿಪಿಸಿ ಹುದ್ದೆಗಳ ನೇಮಕಕ್ಕೆ ರಾಜ್ಯದ ವಿವಿಧ ಭಾಗದಿಂದ 12 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಅಭ್ಯರ್ಥಿಗಳ ದೈಹಿಕ ಪರೀಕ್ಷೆಯು ಜೂ.9 ರವರೆಗೆ ವಿವಿಧ ದಿನಾಂಕಗಳಲ್ಲಿ ನಡೆಯಲಿದೆ.
ಪ್ರತಿ ದಿನ 500 ಅಭ್ಯರ್ಥಿಗಳಿಗೆ ದೈಹಿಕ ಅರ್ಹತಾ ಪರೀಕ್ಷೆ ನಡೆಯಲಿದ್ದು, ಇದಕ್ಕಾಗಿ ನೂರಕ್ಕೂ ಹೆಚ್ಚಿನ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬೆಳಗಾವಿ, ಗುಲ್ಬರ್ಗ, ಯಾದವಗಿರಿ, ಬೀದರ್ನಿಂದಲೂ ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಆಗಮಿಸಿದ್ದರು. ಪುರುಷರಿಗೆ 6.5 ನಿಮಿಷದಲ್ಲಿ 1600 ಮೀ. ಓಟ, ಲಾಂಗ್ ಜಂಪ್ ಅಥವಾ ಹೈ ಜಂಪ್, ಗುಂಡು ಎಸೆತ, 165 ಸೆಂ.ಮೀ. ಎತ್ತರ, ಎದೆ ಉಬ್ಬಿಸಿದಾಗ 86 ಸೆಂ.ಮೀ. ವಿಸ್ತೀರ್ಣದ ಅರ್ಹತೆ ನಿಗದಿ ಆಗಿದೆ. ಮಹಿಳೆಯರಿಗೆ 400 ಮೀ. ಓಟ ಮಾತ್ರ ಇತ್ತು.
ಜೂ.4 ರವರೆಗೆ ಪುರುಷರು ಹಾಗೂ ಜೂ.5 ರಿಂದ 9 ರವರೆಗೆ ಮಹಿಳಾ ಅಭ್ಯರ್ಥಿಗಳ ದೈಹಿಕ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳು ಮೊದಲ ಹಂತ ಓಟದಲ್ಲಿ ಅರ್ಧ ಜನ ಕಡಿಮೆಯಾಗಲಿದ್ದು, ನಂತರ ನಡೆಯುವ ದೈಹಿಕ ಪರೀಕ್ಷೆಗಳಿಗೆ ಹಾಜರಾಗುತ್ತಾರೆ. ಯಾರಿಗಾದರೂ ತೊಂದರೆಯಾದರೆ, ತಕ್ಷಣ ಆರೋಗ್ಯ ಸೇವೆ ನೀಡಲು ವೈದ್ಯರು ಮತ್ತು ಸಿಬ್ಬಂದಿ ನಿಯೋಜಿಸಲಾಗಿದೆ ಎಂದು ಡಿಸಿಪಿ ಎ.ಎನ್. ರಾಜಣ್ಣ ತಿಳಿಸಿದರು.
ನಗರ ಘಟಕದಲ್ಲಿರುವ 145 ಹುದ್ದೆಗಳಿಗೆ ರಾಜ್ಯದ ವಿವಿಧ ಭಾಗಗಳಿಂದ 12 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ಮೈಸೂರು ಜಿಲ್ಲಾ ಮೀಸಲು ಪಡೆಯಲ್ಲಿ ಖಾಲಿ ಇರುವ 71 ಹುದ್ದೆಗಳಿಗೆ ಕೇವಲ 3 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದಾರೆ. ನಗರ ವ್ಯಾಪ್ತಿಯಲ್ಲಿ ಕೆಲವೇ ಕಿ.ಮೀ. ಅಂತರದಲ್ಲಿರುವ ಠಾಣೆಗಳಿಗೆ ವರ್ಗವಾದರೂ ನಗರದಲ್ಲೇ ನೆಲೆಸಬಹುದು. ಜಿಲ್ಲೆಯಲ್ಲಿ ನೇಮಕವಾದರೆ ದೂರದ ಹಳ್ಳಿಗೆ ಹೋಗಬೇಕಾಗುತ್ತದೆ ಎಂಬ ಉದ್ದೇಶದಿಂದ ನಗರಕ್ಕೆ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿದರು.