ಮೈಸೂರಲ್ಲಿ ನ್ಯಾಯಾಧಿಕರಣ ಪೀಠದ ಕಲಾಪ ಆರಂಭ
ಮೈಸೂರು: ಕಾನೂನು ಬಾಹಿರ ಚಟುವಟಿಕೆ (ತಡೆ) ನ್ಯಾಯಾಧಿಕರಣ ಪೀಠದ ಕಲಾಪವು ಮೈಸೂರಿನ ನಜರ್ಬಾದ್ನಲ್ಲಿರುವ ಸರ್ಕಾರಿ ಅತಿಥಿಗೃಹದಲ್ಲಿ ಬುಧವಾರ ಆರಂಭವಾಯಿತು. ದೆಹಲಿ ಹೈಕೋರ್ಟ್ನ ನ್ಯಾಯಾಧೀಶರಾದ ಸುರೇಶ್ ಕೈಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಲಾಪದಲ್ಲಿ, ಕೇಂದ್ರ ಸರ್ಕಾರ ಹೊರಡಿಸಿರುವ ಅಧಿಸೂಚನೆಯಂತೆ ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ 1967ರ ಸೆಕ್ಷನ್ 3(1) ಪ್ರಕಾರ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ಮೆಂಟ್ ಆಫ್ ಇಂಡಿಯಾ (ಸಿಮಿ) ಇದನ್ನು ಕಾನೂನು ಬಾಹಿರ ಸಂಸ್ಥೆ ಎಂದು ಪರಿಗಣಿಸುವ ಬಗ್ಗೆ ವಿಚಾರಣೆ ನಡೆಯಿತು. ಈ ವಿಷಯದ ಬಗ್ಗೆ ಸಾಕ್ಷಿ ನೀಡಲು ಅಫಿಡವಿಟ್ ಸಲ್ಲಿಸಿದವರಿಗೆ ಮಾತ್ರ ವಿಚಾರಣೆಗೆ ಹಾಜರಾಗಲು ಅವಕಾಶವಿತ್ತು. ಪೀಠದ ಕಲಾಪ ಹಿನ್ನೆಲೆಯಲ್ಲಿ ಸರ್ಕಾರಿ ಅತಿಥಿಗೃಹ ಸುತ್ತಮುತ್ತ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು. ಪ್ರಕರಣ ಸಂಬಂಧಿಸಿದಂತೆ ಅಫಿಡವಿಟ್ ಸಲ್ಲಿಸಿದವರಿಗೆ ಮಾತ್ರ ಅತಿಥಿಗೃಹಕ್ಕೆ ಪ್ರವೇಶ ಕಲ್ಪಿಸಲಾಯಿತು. ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಪೀಠದ ಕಲಾಪವು ಗುರುವಾರ ಸಹ ಮುಂದುವರಿಯಲಿದೆ.