ಸೀಟ್ ಬೆಲ್ಟ್ ಕಡ್ಡಾಯ ಸರಿಯಲ್ಲ
ಮೈಸೂರು: ಕಾರಿನ ಚಾಲಕರಿಗೆ ಸೀಟ್ ಬೆಲ್ಟ್ ಕಡ್ಡಾಯ ಮಾಡಲು ಹೊರಟಿರುವುದು ಒಂದು ಅವೈಜ್ಞಾನಿಕ ಕ್ರಮ ಎಂದು ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ. ಪ್ರೇಮ್ಕುಮಾರ್ ಟೀಕಿಸಿದ್ದಾರೆ.
ಪೊಲೀಸ್ ಆಯುಕ್ತರು ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಹಲವಾರು ರೀತಿಯ ಯೋಚನೆ, ಯೋಜನೆ ಹಾಗೂ ಪ್ರಯೋಗಗಳಲ್ಲಿ ತೊಡಗಿರುವುದು ನಿಜವಾಗಲು ಸ್ತುತ್ಯಾರ್ಹ. ಆದರೆ ಕೆಲವೊಂದು ವಿಷಯಗಳಲ್ಲಿ ನಗರದ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ. ಅದನ್ನು ತಪ್ಪಿಸಬೇಕಾದ ಜವಾಬ್ದಾರಿಯೂ ಆಯುಕ್ತರ ಮೇಲಿದೆ ಎಂದು ಹೇಳಿದ್ದಾರೆ.
ನಗರದಲ್ಲಿ ಕಾರಿನಲ್ಲಿ ವೇಗವಾಗಿ ಸಂಚರಿಸಲು ಅವಕಾಶಗಳೇ ಇಲ್ಲದಂತಾಗಿದೆ. ಜೆಎಲ್ಬಿ ರಸ್ತೆಯಲ್ಲಿ 8 ಕಡೆ ಸಂಚಾರಿ ದೀಪವಿದೆ, 4 ಕಡೆ ರಸ್ತೆ ಡುಬ್ಬವಿದೆ, ಈ ರಸ್ತೆಯಲ್ಲಿ 20-30 ಕಿ.ಮೀ. ಗಂಟೆಗಿಂತ ವೇಗವಾಗಿ ಹೋಗಲು ಸಾಧ್ಯವಿಲ್ಲ. ಇನ್ನು ನಗರಪಾಲಿಕೆ ಜಸ್ಕೋ ಹಾಗೂ ಇತರೆ ಖಾಸಗಿ ಕಂಪನಿಗಳಿಗೆ ಕಂಡಕಂಡಲ್ಲಿ ರಸ್ತೆ ಅಗೆಯಲು ಬಿಟ್ಟು ವಾಹನಗಳು ನಿಧಾನಗತಿಯಲ್ಲಿ ಚಲಿಸಲು ಪರೋಕ್ಷವಾಗಿ ಸಹಕಾರ ಕೊಡುತ್ತಿದೆ. ಆದ್ದರಿಂದ ಸೀಟ್ ಬೆಲ್ಟ್ ಕಡ್ಡಾಯ ಯಾವ ರೀತಿಯಲ್ಲಿಯೂ ಸರಿ ಇಲ್ಲ ಎಂದು ತಿಳಿಸಿದ್ದಾರೆ.
ದ್ವಿಚಕ್ರ ವಾಹನ ಸವಾರರಿಗೆ ಶಿರಸ್ತ್ರಾಣ ಕಡ್ಡಾಯ ಮಾಡಿರುವುದರಿಂದ ಧಾರ್ಮಿಕ ಹಕ್ಕಿಗೆ ಧಕ್ಕೆಯಾಗಿದೆ. ಮಹಿಳೆಯರಿಗೆ ತಲೆ ಬಾಚಿಕೊಂಡು ಹೂ ಮುಡಿದು ವಾಹನದಲ್ಲಿ ಓಡಾಡಲು ಕಷ್ಟವಾಗುತ್ತಿದೆ. ಅದೇ ರೀತಿ ಕುಂಕುಮ, ವಿಭೂತಿ, ಮುದ್ರೆ ಇತ್ಯಾದಿಗಳನ್ನು ಧರಿಸುವವರಿಗೆ ಹೆಲ್ಮೆಟ್ ಹಾಕುವುದು ಕಿರಿಕಿರಿಯಾಗಿದೆ. ಆದ್ದರಿಂದ ಕೆಲವು ವಿಚಾರಗಳನ್ನು ಕಡ್ಡಾಯ ಮಾಡುವ ಬದಲು ಐಚ್ಛಿಕವಾಗಿರಿಸುವುದೇ ಸರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.