ಆಸ್ತಿ ತೆರಿಗೆ ಜಾಲತಾಣ ಮುಚ್ಚಿ: ಮೈಗ್ರಾಪ ಆಗ್ರಹ
ಮೈಸೂರು: ನಗರ ಪಾಲಿಕೆ ಆಸ್ತಿ ತೆರಿಗೆ ಜಾಲತಾಣವನ್ನು ಮುಚ್ಚುವಂತೆ ಮೈಸೂರು ಗ್ರಾಹಕರ ಪರಿಷತ್‌ನ ಪ್ರೊ.ಬಿ.ಎಸ್. ಶಂಕರ್ ಒತ್ತಾಯಿಸಿದ್ದಾರೆ.
ನಿರ್ವಹಿಸಲು ಮತ್ತು ಆಸ್ತಿ ತೆರಿಗೆ ಲೆಕ್ಕ ಹಾಕುವಲ್ಲಿ ಅನೇಕ ತಪ್ಪುಗಳನ್ನು ಮಾಡುವ ಜಾಲತಾಣವನ್ನು ನಗರ ಪಾಲಿಕೆ ಮುಚ್ಚುವುದೆ ಒಳಿತು. ಭೂಮಿ ಬೆಲೆಯ ಆಧಾರದ ಮೇಲೆ ತೆರಿಗೆ ಪಾವತಿಸಬೇಕು. ಜಿಲ್ಲಾ ನೋಂದಣಾಧಿಕಾರಿಗಳು ನಗರವನ್ನು ನೂರಾರು ಭಾಗವಾಗಿ ವಿಭಜಿಸಿ, ಪ್ರತಿ ಭಾಗದಲ್ಲೂ ಪ್ರತಿ ಚದರಡಿ ನೆಲಕ್ಕೆ ಮಾರುಕಟ್ಟೆ ಬೆಲೆ ಎಷ್ಟು ಎಂದು ನಿಗದಿಪಡಿಸುತ್ತಾರೆ. ಗಣಕ ಯಂತ್ರಕ್ಕೆ ನಿಮ್ಮ ಆಸ್ತಿ ಎಲ್ಲಿದೆ ಎಂದು ನಮೂದಿಸಿದರೆ ಅಲ್ಲಿನ ಮಾರುಕಟ್ಟೆ ಬೆಲೆ ತಿಳಿಸಬೇಕು. ಆದರೆ ನಗರ ಪಾಲಿಕೆಯ ಗಣಕದಲ್ಲಿ ನಿಮ್ಮ ಆಸ್ತಿ ಎಲ್ಲಿದೆ ಎಂಬುದನ್ನು ತಿಳಿಸುವುದೆ ಸಾಧ್ಯವಿಲ್ಲ. ಆದರೆ ಈಗಿನ ಗಣಕ ತಂತ್ರಾಂಶದಲ್ಲಿ ನಗರ ಪಾಲಿಕೆಯ ವಾರ್ಡ್, ಬ್ಲಾಕ್ ಮತ್ತು ರಸ್ತೆಗಳನ್ನು ಕಲಸುಮೇಲೋಗರ ಮಾಡಲಾಗಿದೆ. ಇದರಿಂದ ನಮ್ಮ ಆಸ್ತಿ ಗುರುತಿಸುವುದೆ ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ. ಈಗಿನ ತೆರಿಗೆ ಪದ್ಧತಿಯಲ್ಲಿ ಆಸ್ತಿಯ ಬೆಲೆಯೆಂದರೆ ಕಟ್ಟಡದ ಬೆಲೆ ಮತ್ತು ಕಟ್ಟಡವು ಆವರಿಸಿರುವ ಭೂಮಿಯ ಬೆಲೆ. ಆದರೆ ಆಸ್ತಿ ತೆರಿಗೆ ಜಾಲತಾಣದಲ್ಲಿ ಪ್ರತಿಯೊಂದು ಅಂತಸ್ತಿನ ಕೆಳಗೆ ಇರುವ ಭೂಮಿಯ ಬೆಲೆಯನ್ನು ಒಟ್ಟು ಆಸ್ತಿಯ ಬೆಲೆಗೆ ಪ್ರತ್ಯೇಕವಾಗಿ ಸೇರಿಸಲಾಗುತ್ತಿದೆ. ಇದರಿಂದ ಆಸ್ತಿಯ ಬೆಲೆ ನಿಜವಾದ ಬೆಲೆಗಿಂತ ಹೆಚ್ಚಾಗುತ್ತಿದೆ ಮತ್ತು ತೆರಿಗೆಯ ಮೊತ್ತ ಹೆಚ್ಚುತ್ತಿದೆ. ಗಣಕವು ವಿವರಣೆಯಿಲ್ಲದೆ ಎಷ್ಟೋ ಕೆಲಸ ಮಾಡುತ್ತದೆ ಮತ್ತು ನಿಮ್ಮ ಬಾಧ್ಯತೆ ಹೆಚ್ಚಿಸುತ್ತಿದೆ ಎಂಬ ಭಾವನೆ ಉಂಟುಮಾಡುತ್ತದೆ. ಗಣಕವು ಪ್ರಸಕ್ತ ಸಾಲಿಗೆ ಮಾತ್ರ ಲೆಕ್ಕ ಮಾಡುತ್ತದೆ. ಹಿಂದಿನ ವರ್ಷಗಳಿಗೆ ತೆರಿಗೆ ಕಟ್ಟದ ಮಾಲೀಕರು ಅದನ್ನು ಬಳಸಲು ಸಾಧ್ಯವಿಲ್ಲ. ಏಕೆಂದರೆ ಅದು ಕಳೆದ ವರ್ಷಗಳ ತೆರಿಗೆಗಳ ಪ್ರಿಂಟೌಟ್ ಕೊಡುವುದಿಲ್ಲ. ಆದ್ದರಿಂದ ನಗರ ಪಾಲಿಕೆ ತನ್ನ ಆಸ್ತಿ ತೆರಿಗೆ ಜಾಲತಾಣವನ್ನು ತೆಗೆಯಬೇಕು ಎಂದು ಆಗ್ರಹಿಸಿದ್ದಾರೆ.