ಕಾರಾಗೃಹ ಸಿಬ್ಬಂದಿಗೂ ಉಚಿತ ಪಡಿತರ
ಬಿ. ಶೇಖರ್ ಗೋಪಿನಾಥಂ
ಮೈಸೂರು: ರಾಜ್ಯದ ವಿವಿಧ ಜಿಲ್ಲೆಗಳ ಜೈಲುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಉಚಿತ ಪಡಿತರ ಭಾಗ್ಯ ಲಭಿಸಿದೆ. ಜೊತೆಗೆ ರಾತ್ರಿ ವೇಳೆ ಜೈಲಿನಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಉಚಿತ ಊಟ ಹಾಗೂ ಹಗಲಿನಲ್ಲಿ ಕಾರ್ಯ ನಿರ್ವಹಿಸುವವರಿಗೆ ಎರಡು ಕಪ್ ಟೀ ಉಚಿತವಾಗಿ ಸಿಗಲಿದೆ.
ರಾಜ್ಯದ 102 ಕಾರಾಗೃಹಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 1684 ಸಿಬ್ಬಂದಿಗೆ ಉಚಿತ ಪಡಿತರ ಸೌಲಭ್ಯ ಲಭಿಸಿದ್ದು, ಈ ವ್ಯವಸ್ಥೆಯು ಜನವರಿಯಿಂದಲೇ ಅನ್ವಯವಾಗುವಂತೆ ಸಿಬ್ಬಂದಿಗೆ ವಿತರಿಸಲಾಗುತ್ತಿದೆ. ಸಾರ್ವಜನಿಕ ವಿತರಣಾ ಪದ್ಧತಿಯಡಿ ಪ್ರತಿ ಕಾರ್ಡ್‌ಗೆ ಪ್ರತಿ ತಿಂಗಳು 15 ಕೆ.ಜಿ. ಅಕ್ಕಿ ಮತ್ತು 3 ಕೆ.ಜಿ. ಗೋದಿ ಉಚಿತವಾಗಿ ಜೈಲು ಸಿಬ್ಬಂದಿಗೆ ದೊರೆಯಲಿದೆ.
ಜೈಲು- ಊಟ- ಸಮಸ್ಯೆ: ಕಾರಾಗೃಹ ಇಲಾಖೆಯಲ್ಲಿ ಒಟ್ಟು 102 ವಿವಿಧ ಜೈಲುಗಳಿದ್ದು, ಸುಮಾರು 14 ಸಾವಿರ ಬಂದಿಗಳು ದಾಖಲಾಗಿದ್ದಾರೆ. ಬಂದಿಗಳ ಸುರಕ್ಷತೆ, ಆಹಾರ ವಿತರಣೆ ಸೇರಿದಂತೆ ಎಲ್ಲ ಕರ್ತವ್ಯಗಳನ್ನು ಪ್ರತಿ ದಿನ 24 ಗಂಟೆಯೂ ಹಗಲು- ರಾತ್ರಿ ಪಾಳಿಯಲ್ಲಿ ಕಾವಲು ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ.
ಜೈಲು ಸಿಬ್ಬಂದಿ ಕರ್ತವ್ಯದ ಅವಧಿ ಮೀರಿ ಕಾರ್ಯನಿರ್ವಹಿಸುತ್ತಿದ್ದು, ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆ ಇಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಕಾವಲು ಸಮಯದಲ್ಲಿ ಸಿಬ್ಬಂದಿ ಊಟ, ಟೀಗಾಗಿ ಹೊರಗೆ ಹೋಗಲು ಅವಕಾಶ ಇಲ್ಲ. ಹೀಗಾಗಿ ಹಗಲಿನಲ್ಲಿ ಕಾರ್ಯನಿರ್ವವಹಿಸುವವರಿಗೆ 2 ಕಪ್ ಟೀ ಹಾಗೂ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ 1 ಊಟ ಉಚಿತವಾಗಿ ನೀಡಲು ವಾರ್ಷಿಕವಾಗಿ ಅಂದಾಜು 64.87 ಲಕ್ಷ ವೆಚ್ಚವಾಗಲಿದೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ಕರ್ನಾಟಕದ ಕಾರಾಗೃಹಗಳ ಮಹಾನಿರೀಕ್ಷಕರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಎಲ್ಲ ಕಾರಾಗೃಹಗಳ ಕಾವಲು ಸಿಬ್ಬಂದಿಗೆ ರಾತ್ರಿ ವೇಳೆ ಊಟ ಹಾಗೂ ಹಗಲಿನಲ್ಲಿ 2 ಕಪ್ ಟೀಯನ್ನು ಉಚಿತವಾಗಿ ನೀಡಲು ಸರ್ಕಾರವು ತಾತ್ಕಾಲಿಕವಾಗಿ ಒಪ್ಪಿದೆ. ಅಲ್ಲದೆ, ಮುಂದಿನ ವೇತನ ಆಯೋಗದ ರಚನೆ ಸಂದರ್ಭದಲ್ಲಿ ಇದನ್ನು ಪರಿಗಣಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಕಾರಾಗೃಹ ಇಲಾಖೆಗೆ ಸೂಚಿಸಿದೆ.
ಜಾರಿಯಾಗಿದೆ...
ಕಾರಾಗೃಹ ಸಿಬ್ಬಂದಿಗೆ ಸರ್ಕಾರದಿಂದ ಉಚಿತ ಪಡಿತರ ದೊರೆತಿದ್ದು, ಜನವರಿಯಿಂದ ಅನ್ವಯವಾಗುವಂತೆ ಎಲ್ಲ ಸಿಬ್ಬಂದಿಗೆ ಪಡಿತರ ವಿತರಿಸಲಾಗುತ್ತಿದೆ. ಜೈಲಿನಲ್ಲಿ ಹಗಲು ಕಾರ್ಯನಿರ್ವಹಿಸುವವರಿಗೆ 2 ಕಪ್ ಟೀ ಹಾಗೂ ರಾತ್ರಿ ಕಾರ್ಯ ನಿರ್ವಹಿಸುವವರಿಗೆ 1 ಊಟ ಉಚಿತವಾಗಿ ನೀಡಲಾಗುತ್ತಿದೆ. ಸಿಬ್ಬಂದಿಗಾಗಿ ಪ್ರತ್ಯೇಕವಾಗಿ ಊಟ ಮತ್ತು ಟೀ ತಯಾರಿಸುವ ವ್ಯವಸ್ಥೆ ಮಾಡಲಾಗಿದೆ.
ಟಿ ಪಿ.ಎನ್. ಜಯಸಿಂಹ, ಮುಖ್ಯ ಅಧೀಕ್ಷಕ,
ಮೈಸೂರು, ಕೇಂದ್ರ ಕಾರಾಗೃಹ