ಯೂತ್ ರೆಡ್ ಕ್ರಾಸ್ ವಿಶೇಷ ಶಿಬಿರ
ಮೈಸೂರು: ಎಂಎಂಕೆ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕದ ಒಂದು ದಿನದ ವಾರ್ಷಿಕ ವಿಶೇಷ ಶಿಬಿರ ಶ್ರೀರಂಗಪಟ್ಟಣದಲ್ಲಿ ನಡೆಯಿತು.
ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕದ ಸಂಯೋಜನಾಧಿಕಾರಿ ಎಚ್.ವಿ. ಪ್ರಶಾಂತ್ ಜೈನ್ ಶಿಬಿರಾಧಿಕಾರಿ ಆಗಿದ್ದರು. ಜೆಎಸ್‌ಎಸ್ ವೈದ್ಯಕೀಯ ಕಾಲೇಜಿನ ರೆಸಿಡೆಂಟ್ ಡಾ.ಶಿಶಿರ ಎಸ್. ರಾನಡೆ ಜನ ಸಾಮಾನ್ಯರಲ್ಲಿ ಕಂಡುಬರುವ ಸಾಂಕ್ರಾಮಿಕ ರೋಗಗಳು ಮತ್ತು ಅವು ಹರಡುವ ಕುರಿತು ತಿಳಿಸಿಕೊಟ್ಟರು.
ಮೈಸೂರಿನ ಆಶೋದಯ ಸಮಿತಿ ಮತ್ತು ಸಿಬಿಒ ಸಂಸ್ಥೆಯ ರತ್ನ ಅವರು ಎಚ್‌ಐವಿ ಕುರಿತು ವಿವರಿಸಿ, ರೋಗಿಗಳನ್ನು ಮಾನವೀಯತೆಯಿಂದ ಕಾಣುವಂತೆ ಕಿವಿಮಾತು ಹೇಳಿದರು. ಅಗ್ನಿಶಾಮಕಾಧಿಕಾರಿ ದೇವರಾಜು ಅಗ್ನಿ ಆಕಸ್ಮಿಕ ಸಂದರ್ಭದಲ್ಲಿ ಕೈಗೊಳ್ಳಬಹುದಾದ ಮುನ್ನೆಚ್ಚರಿಕೆ ಕ್ರಮದ ಕುರಿತು ಮಾಹಿತಿ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ವಿ.ದಾಮೋದರಗೌಡ, ಕಾಲೇಜಿನ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಸಿ.ವೈ. ಕವಿತಾ, ಶ್ರೀರಂಗಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಮಾಧವಗೌಡ ಉಜಿರೆ, ಯುತ್ ರೆಡ್ ಕ್ರಾಸ್ ಘಟಕದ 50 ಮಂದಿ ವಿದ್ಯಾರ್ಥಿನಿಯರು ಇದ್ದರು.