ಹುಲಿ ಚರ್ಮ, ಮೂಳೆ ಮಾರಾಟಗಾರನ ಸೆರೆ
ಪಿರಿಯಾಪಟ್ಟಣ: ಹುಲಿ ಚರ್ಮ, ಕಡವೆ ಚರ್ಮ ಹಾಗೂ ಹುಲಿ ತಲೆಬುರುಡೆ ಸೇರಿದಂತೆ ಇತರೆ ಮೂಳೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬೆಂಗಳೂರಿನ ಸಿಐಡಿ ಅರಣ್ಯ ಘಟಕದ ಪೊಲೀಸರು ಬಂಧಿಸಿ ಮಾಲನ್ನು ವಶಪಡಿಸಿಕೊಂಡಿದ್ದಾರೆ.
ತಾಲೂಕಿನ ಮುತ್ತೂರು ಗ್ರಾಮದ ನಿವಾಸಿ ಸುರೇಶ ಬಂಧಿತ ಆರೋಪಿ. ಖಚಿತ ಮಾಹಿತಿ ಮೇರೆಗೆ ಸುರೇಶನ ಬಳಿ ಹುಲಿ ಚರ್ಮ, ಕಡವೆ ಚರ್ಮ ಹಾಗೂ ಹುಲಿಯ ತಲೆ ಬುರುಡೆ ಸೇರಿದಂತೆ ಹುಲಿಯ ಇತರೆ ಮೂಳೆಗಳಿರುವ ಬಗ್ಗೆ ಮಾಹಿತಿ ಪಡೆದ ಬೆಂಗಳೂರು ಸಿಐಡಿ ಅರಣ್ಯ ಘಟಕದ ಪೊಲೀಸರು ಮಾಲನ್ನು ಖರೀದಿಸುವ ಸೋಗಿನಲ್ಲಿ ಬಂದು ಮೂತ್ತೂರು ಗ್ರಾಮದ ಉರ್ದು ಶಾಲೆಯ ಬಳಿ ಸುರೇಶನನ್ನು ಭೇಟಿಯಾಗಿ ಆತನಿಂದ ಮಾರಾಟಕ್ಕೆ ತಂದಿದ್ದ ಹುಲಿ ಮತ್ತು ಕಡವೆ ಚರ್ಮ ಹಾಗೂ ಹುಲಿ ಮೂಳೆಗಳನ್ನು ವಶಪಡಿಸಿಕೊಂಡಿದ್ದಾರೆ. ಸುರೇಶ ತನಗೆ ಲಿಂಗಾಪುರ ಗ್ರಾಮದ ರಾಮಚಂದ್ರು ಹಾಗೂ ಕಾಟಿ ಎಂಬ ವ್ಯಕ್ತಿಗಳು ಈ ಮಾಲನ್ನು ಮಾರಾಟಕ್ಕೆ ನೀಡಿದ್ದಾರೆ ಎಂದು ಸಿಐಡಿ ಪೊಲೀಸರಿಗೆ ತಿಳಿಸಿದ್ದಾನೆ. ಸಿಐಡಿ ಅರಣ್ಯ ಘಟಕದ ಬೆಂಗಳೂರು ಕೇಂದ್ರದ ಐಜಿ ಅರುಣ್ ಚಕ್ರವರ್ತಿ, ಡಿವೈಎಸ್‌ಪಿ ಬಿ.ಎನ್. ಶಾಮಣ್ಣ ಮಾರ್ಗದರ್ಶನದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ವೆಂಕಟಶೆಟ್ಟಿ, ಎಸ್‌ಐ ಲಕ್ಷ್ಮಿನರಸಿಂಹಯ್ಯ, ಸಿಬ್ಬಂದಿ ಎಂ.ಎಸ್. ರಾಮಮೂರ್ತಿ, ಮುಕುಂದ, ರಾಜಶೇಖರ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.