ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಅಂತರ ಶಿಸ್ತೀಯ ಅಧ್ಯಯನ ಅಗತ್ಯ

Rashmi Kasaragodu
Updated On : 9 May 2014, 11:42 am

ಕ.ಪ್ರ.ವಾರ್ತೆ    ಮೈಸೂರು    ಮೇ 9
ಸಾಹಿತ್ಯದ ಅಂತರ ಶಿಸ್ತೀಯ ಅಧ್ಯಯನ ನಡೆಯಬೇಕು ಎಂದು ಶ್ರೀ ಬಸವ ಅಧ್ಯಯನ ಪೀಠದ ಸಂದರ್ಶನ ಪ್ರಾಧ್ಯಾಪಕ ಡಾ.ಬರಗೂರು ರಾಮಚಂದ್ರಪ್ಪ ಹೇಳಿದರು.
ಶ್ರೀ ಬಸವ ಅಧ್ಯಯನ ಪೀಠ, ಮಾನಸ ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ಮತ್ತು ಡಾ. ರಾಜಕುಮಾರ್ ಫಿಲಂ ಇನ್ಸ್ಟಿಟ್ಯೂಟ್ನ ಸಂಯುಕ್ತ ಆಶ್ರಯದಲ್ಲಿ ಬಸವಣ್ಣನವರ ಕುರಿತ ಹೊನ್ನಪ್ಪ ಭಾಗವತರ ಜಗಜ್ಯೋತಿ ಬಸವೇಶ್ವರ ಚಲನಚಿತ್ರ ಪ್ರದರ್ಶನ ಮತ್ತು ಪ್ರತಿಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನ ದ್ವೀಪ ಆಗಬಾರದು. ನಮ್ಮ ಜ್ಞಾನದ ಪರಿಮಿತಿ ಮತ್ತೊಂದು ದ್ವೀಪಕ್ಕೂ ವಿಸ್ತರಿಸಬೇಕು. ಆದ್ದರಿಂದ ಸಾಹಿತ್ಯದ ಅಂತರ ಶಿಸ್ತೀಯ ಅಧ್ಯಯನ ಅಗತ್ಯ. ಆರಂಭದಲ್ಲಿ ರಂಗಭೂಮಿ ಮತ್ತು ಸಾಹಿತ್ಯ ಜೊತೆಯಾಗಿತ್ತು. ಸಾಹಿತ್ಯ ಏಕ ವ್ಯಕ್ತಿಯಿಂದ ರೂಪಿತವಾದರೆ, ಸಿನೆಮಾ ಒಕ್ಕೂಟ ಕಲೆ ಆಗಿದೆ. ಆದ್ದರಿಂದ ಸಾಹಿತ್ಯವನ್ನು ರಾಜಕೀಯ, ಸಿನೆಮಾ, ರಂಗಭೂಮಿಯ ನೆಲೆಯಲ್ಲೂ ಅಧ್ಯಯನ ಮಾಡಬೇಕು. ಸಾಹಿತ್ಯದ ಬಸವಣ್ಣ, ಸಿನೆಮಾದ ಬಸವಣ್ಣ ಮತ್ತು ಆ ಕಾಲದ ತೌಲನಿಕ ಅಧ್ಯಯನ ಆಗಬೇಕಿದೆ ಎಂದರು.
1962 ರಲ್ಲಿ ಬಿಡುಗಡೆಯಾದ ಕರುಣೆಯೆ ಕುಟುಂಬದ ಕಣ್ಣು ಮೊದಲ ಲಿಖಿತ ಸಾಹಿತ್ಯ ಆಧರಿಸಿದ ಸಿನೆಮಾ. ಸತಿ ಸುಲೋಚನ ಮತ್ತು ಭಕ್ತಧ್ರುವ ಸಿನೆಮಾಗಳು ಕನ್ನಡದ ಮೊದಲ ಸಿನೆಮಾ ಆದರೂ ಅವು ಪುರಾಣಿಕ ಪಾತ್ರದಿಂದ ಪ್ರೇರಣೆ ಪಡೆಯಲಿಲ್ಲ. ಪುರಾಣದ ಪ್ರಧಾನ ಧಾರೆಗೆ ಬದಲಾಗಿ, ಉಪ ಧಾರೆಯ ಆಧಾರದ ಮೇಲೆ ಚಲನಚಿತ್ರಗಳು ಬಂದಿವೆ. ಸತಿ ಸುಲೋಚನ ಸೀತೆ ಅಥವಾ ಧಮಯಂತಿ ಅಲ್ಲ. ಆಕೆ ಒಬ್ಬ ರಾಕ್ಷಸನ ಮಗನ ಹೆಂಡತಿ. ಆದರೂ ಮಹಿಳೆಯಲ್ಲಿನ ವಾತ್ಸಲ್ಯ, ಶೀಲ, ಪಾತಿವ್ರತ್ಯವನ್ನೇ ಪ್ರಧಾನವಾಗಿ ಹೊಂದಿತ್ತು. ಭಕ್ತಧ್ರುವ ಸಿನೆಮಾ ಭಕ್ತಿಯನ್ನು ಪ್ರಧಾನವಾಗಿ ಹೊಂದಿತ್ತು. ಈ ಎರಡೂ ಸಿನೆಮಾದಲ್ಲಿನ ಪಾತಿವ್ರತ್ಯ ಮತ್ತು ಭಕ್ತಿಯ ವಿಷಯಗಳು ಸಮಾರು ಕಾಲು ಶತಮಾನಗಳ ಕಾಲ ಕನ್ನಡ ಚಿತ್ರರಂಗವನ್ನು ಆಳಿದೆ ಎಂದು ತಿಳಿಸಿದರು.
ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ.ಆರ್. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಡಾ. ರಾಜ್ಕುಮಾರ್ ಫಿಲಂ ಇನ್ಸ್ಟಿಟ್ಯೂಟ್ನ ವ್ಯವಸ್ಥಾಪಕ ನಿರ್ದೇಶಕ ನಟರಾಜ್ ಶಿವು ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement