ಆರ್ಟಿಐ, ಆರ್ಟಿಇ ಕಾರ್ಯಕರ್ತರ ವೇದಿಕೆ ಅಸ್ತಿತ್ವಕ್ಕೆ
ಮೈಸೂರು: ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ನಡೆಯುವ ಭ್ರಷ್ಟಾಚಾರ ಬಯಲಿಗೆಳೆಯುವ ಮಾಹಿತಿ ಹಕ್ಕು ಕಾರ್ಯಕರ್ತರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಆರ್ಟಿಐ, ಆರ್ಟಿಇ ಕಾರ್ಯಕರ್ತರ ವೇದಿಕೆಯನ್ನು ಅಸ್ತಿತ್ವಕ್ಕೆ ತರಲಾಗಿದೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಎರಡು ನೀತಿಗಳು ಸಾಮಾನ್ಯ ಜನರಿಗೆ ಅದರಲ್ಲೂ ಬಡವರ್ಗದವರಿಗೆ ಸಾಕಷ್ಟು ಅನುಕೂಲ ಮಾಡಿಕೊಟ್ಟಿವೆ. ಭ್ರಷ್ಟಾಚಾರದ ನಿರ್ಮೂಲನೆಗೆ ಆರ್ಟಿಐ ಸಹಕರಿಸಲಿದ್ದು, ಇದರಿಂದ ಭ್ರಷ್ಟಾಚಾರ ತಹಬದಿಗೆ ಬಂದಿದೆ. ಮಾಹಿತಿ ಪಡೆಯುವ ಸಂದರ್ಭದಲ್ಲಿ ಕಾರ್ಯಕರ್ತರ ಮೇಲೆ ಹಲ್ಲೆಯಾಗುವ ಅಥವಾ ಬೆದರಿಕೆಯೊಡ್ಡುವ ಪ್ರಕರಣಗಳು ಅಲ್ಲಲ್ಲಿ ಕಂಡುಬರುತ್ತಿವೆ. ಇಂತಹ ಸಂದರ್ಭದಲ್ಲಿ ಅವರಿಗೆ ನೈತಿಕ ಬೆಂಬಲ ತುಂಬಲು ಈ ವೇದಿಕೆ ಹುಟ್ಟುಹಾಕಲಾಗಿದೆ ಎಂದು ವೇದಿಕೆ ರಾಜ್ಯಾಧ್ಯಕ್ಷ ಎಚ್.ಎಸ್. ಆನಂದ್ ಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಮಾಜ ಸುಧಾರಣೆಗಾಗಿ ಹಗಲಿರುಳು ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡುವ ಆರ್ಟಿಐ ಕಾರ್ಯಕರ್ತರಿಗೆ ಅಭದ್ರತೆ ಕಾಡುತ್ತಿದೆ. ಕೆಲವು ಅಧಿಕಾರಿಗಳು ಮಾಹಿತಿ ನೀಡದೆ ಕಾರ್ಯಕರ್ತರನ್ನು ಬೆದರಿಸುತ್ತಿದ್ದಾರೆ. ಪ್ರಜಾಪ್ರಭುತ್ವ ಅಣಕಿಸುವ ಇಂತಹ ಪ್ರವೃತ್ತಿ ಒಂದಲ್ಲ ಒಂದು ದಿನ ಕೊನೆಗಾಣಲಿದೆ. ಅದಕ್ಕಾಗಿ ಆರ್ಟಿಐ ಕಾರ್ಯಕರ್ತರ ರಕ್ಷಣೆಗೆ ಇಡೀ ಸಮಾಜದ ಪ್ರಜ್ಞಾವಂತ ನಾಗರಿಕರು ಧಾವಿಸಬೇಕು ಎಂದು ಮನವಿ ಮಾಡಿದರು.
ಈಗ ಅಸ್ತಿತ್ವಕ್ಕೆ ಬಂದಿರುವ ವೇದಿಕೆಯು ತನ್ನದೇ ಆದ ಕಾರ್ಯವ್ಯಾಪ್ತಿ ಹೊಂದಿದ್ದು, ಕೇಂದ್ರ ಸ್ಥಾನ ಬೆಂಗಳೂರಿನಲ್ಲಿದೆ. ಆರ್ಟಿಐ ಹಾಗೂ ಆರ್ಟಿಇ ಕಾರ್ಯಕರ್ತರಿಗೆ ತಿಂಗಳಿಗೆ ಸಾವಿರ ರು. ಸಹಾಯಧನ, ಬಸ್ ಹಾಗೂ ರೈಲು ಪಾಸ್ಗಳನ್ನು ವಿತರಣೆ ಮಾಡುವ ಜತೆಗೆ ಅಗತ್ಯ ಮಾಹಿತಿಗಾಗಿ ದಾಖಲಾತಿಗಳನ್ನು ಉಚಿತವಾಗಿ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ವೇದಿಕೆಯ ಸದಸ್ಯತ್ವ ಬಯಸುವ ಆರ್ಟಿಐ ಹಾಗೂ ಆರ್ಟಿಇ ಕಾರ್ಯಕರ್ತರು ಮೊ. 94485 48023, 99453 53704 ಸಂಪರ್ಕಿಸಬಹುದು.
ರಾಜ್ಯ ಉಪಾಧ್ಯಕ್ಷ ಸಿಂ.ಬಾಲಕೃಷ್ಣ ಸಂಗಾಪುರ, ರಾಜ್ಯ ಸಂಚಾಲಕ ಬಿ.ಜೆ. ಮೋಹನ್ರಾಜ್, ರಾಜ್ಯ ಸಮನ್ವಯ ಕಾರ್ಯದರ್ಶಿ ಮಧುಮತಿ ಇದ್ದರು.