ಕಾಂಗ್ರೆಸ್ ಮುಖಂಡ ಬ್ರಾಡ್ವೇ ಶಿವಣ್ಣ ನಿಧನ
ಮೈಸೂರು: ಕಾಂಗ್ರೆಸ್ ಮುಖಂಡ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ ಬ್ರಾಡ್ವೇ ಶಿವಣ್ಣ (69) ಶುಕ್ರವಾರ ನಿಧನರಾದರು.
ಚಾಮುಂಡಿಪುರಂನ ಸಾರ್ವಜನಿಕ ಹಾಸ್ಟೆಲ್ ರಸ್ತೆಯ ನಿವಾಸಿ ಶಿವಣ್ಣ ಅವರು ಎಂಡಿಎ ಮಾಜಿ ಸದಸ್ಯರಾಗಿ, ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರಾಗಿದ್ದ ಶಿವಣ್ಣ ಚಾಮುಂಡಿಪುರಂನಲ್ಲಿ ಬ್ರಾಡ್ವೇ ಟೈಲರಿಂಗ್ ತೆರೆದಿದ್ದರಿಂದ ಅವರನ್ನು ಬ್ರಾಡ್ವೇ ಹೆಸರಿನೊಂದಿಗೆ ಗುರುತಿಸಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶಿವಣ್ಣ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಇತ್ತೀಚೆಗೆ ಶಿವಣ್ಣ ಅವರ ನೂತನ ಮನೆಯ ಗೃಹಪ್ರವೇಶಕ್ಕೂ ಸಹ ಮುಖ್ಯಮಂತ್ರಿಗಳು ತೆರಳಿದ್ದರು.
ಈ ವೇಳೆ ಶಾಸಕ ಎಂ.ಕೆ.ಸೋಮಶೇಖರ್, ನಗರ ಕಾಂಗ್ರೆಸ್ ಅಧ್ಯಕ್ಷ ಸಿ. ದಾಸೇಗೌಡ, ಮಾಜಿ ಉಪ ಮೇಯರ್ ಸಿದ್ದರಾಜು, ಮುಖಂಡ ದಿನೇಶ್ ಕೊಪ್ಪಲ್ ಇದ್ದರು.