ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮಧ್ಯಾಹ್ನದ ಬಳಿಕ ಬಿಡುವು ನೀಡಿದ ಮಳೆ

Rashmi Kasaragodu
Updated On : 9 May 2014, 11:43 am

ಮೈಸೂರು: ಅರಬ್ಬಿ ಸಮುದ್ರದಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ಕಳೆದೆರಡು ದಿನಗಳಿಂದ ಮೈಸೂರಿನಲ್ಲಿ ಬಿದ್ದ ಮಳೆ ಶುಕ್ರವಾರ ಮಧ್ಯಾಹ್ನದ ಬಳಿಕ ಬಿಡುವು ನೀಡಿತು.
ಬುಧವಾರ ತಡರಾತ್ರಿಯಿಂದಲೆ ಆರಂಭವಾದ ತುಂತುರು ಮಳೆ, ಮೋಡಕವಿದ ವಾತಾವರಣ ಮತ್ತು ಚುಮು ಚುಮು ಚಳಿ ಶುಕ್ರವಾರ ಮಧ್ಯಾಹ್ನದವರೆಗೂ ಮುಂದುವರಿಯಿತು. ಎರಡು ದಿನಗಳಿಂದ ಮನೆಯಿಂದ ಹೊರ ಬರಲಾಗದ ಪರಿಸ್ಥಿತಿಯನ್ನು ಮಳೆ ಸೃಷ್ಟಿಸಿತ್ತು. ಕೊಡಗಿನ ವಾತಾವರಣವನ್ನು ಮೈಸೂರಿನಲ್ಲಿ ನಿರ್ಮಿಸಿದ್ದ ಮಳೆಯಿಂದಾಗಿ ಕೆಲವರು ಬೇಸರಪಟ್ಟಿದ್ದರೆ, ಮತ್ತೆ ಕೆಲವರು ಬೇಸಿಗೆಯಲ್ಲಿನ ತಂಪಾದ ವಾತಾವರಣದ ಸವಿಯನ್ನು ಸವಿದರು.
ಬೇಸಿಗೆಯ ಬಿಸಿಲ ಝಳದಿಂದ ಕಾದು ಕೆಂಪೇರಿದ್ದ ಭೂಮಿಗೆ ಈಗ ತಂಪಿನ ಸಿಂಚನವಾದಂತೆ ಆಗಿದೆ. ನಗರದ ಎಲ್ಲಾ ರಸ್ತೆಗಳಲೆಲ್ಲಾ ನೀರಿನಿಂದ ಕೂಡಿದ್ದವು. ನಗರದ ಗುಂಡಿಬಿದ್ದ ಅನೇಕ ರಸ್ತೆಗಳಲ್ಲಿ ನೀರು ತುಂಬಿ ಸಾರ್ವಜನಿಕರು ತಿರುಗಾಡುವುದು ತ್ರಾಸದಾಯಕ ಎನಿಸಿತು. ಆದರೂ ಈ ಬಿರುಬೇಸಿಗೆಯಲ್ಲಿ ಮಳೆ ಬೇಡ ಎನಿಸಲಿಲ್ಲ. ಒಣಗಿದ್ದ ಮರಗಳ ಕೊಂಬೆಗಳು ಧರೆಯನ್ನಪ್ಪಿಕೊಂಡವು, ಒಣಗಿ ಹೋಗುವುದರಲ್ಲಿದ್ದ ಗಿಡ ಮರಗಳು ಚಿಗುರೊಡೆದವು.
ಮರ ಗಿಡಗಳ ರೆಂಬೆ, ಕೊಂಬೆಗಳು ಧರೆಗುರುಳಿದ ಪರಿಣಾಮ ನಗರದ ಅನೇಕ ಬಡಾವಣೆಗಳಿಗೆ ವಿದ್ಯುತ್ ಅಡಚಣೆ ಮತ್ತು ಕೇಬಲ್ಗಳು ತುಂಡರಿಸಿದ್ದರಿಂದ ಟಿವಿ ಪ್ರಸಾರಕ್ಕೆ ತೊಂದರೆ ಆಯಿತು. ಅನೇಕ ಕಡೆ ದೂರವಾಣಿ ಸಂಪರ್ಕವೂ ಕಡಿತಗೊಂಡಿತ್ತು. ಗುರುವಾರ ವಿದ್ಯುತ್ ಸ್ಪರ್ಶದಿಂದ ಎರಡು ಎಮ್ಮೆ ಮೃತಪಟ್ಟವು. ಉಳಿದಂತೆ ಯಾವುದೆ ಅನಾಹುತ ಸಂಭವಿಸಿಲ್ಲ.
ಶುಕ್ರವಾರ ಮಧ್ಯಾಹ್ನ 12 ರವರೆಗೂ ಬಿದ್ದ ಮಳೆ ನಂತರ ಮರೆ ಆಯಿತು. ಎರಡು ದಿನದಿಂದ ಕಣ್ಮರೆ ಆದಂತಿದ್ದ ಸೂರ್ಯ ಇಂದು ಭುವಿಯನ್ನು ಕಣ್ಬಿಟ್ಟು ನೋಡಿದ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement