ಅಪರಾಧ ಪ್ರಕರಣ ತಗ್ಗಿವೆ ಬುದ್ಧಿ!
ಕ.ಪ್ರ.ವಾರ್ತೆ ಮೈಸೂರು ಮೇ 11
ಮೈಸೂರು ನಗರ ಪೊಲೀಸರು ತೆಗೆದುಕೊಂಡಿರುವ ಮುಂಜಾಗ್ರತೆ ಕ್ರಮಗಳಿಂದ ನಗರದಲ್ಲಿ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಕೆ ಆಗಿವೆ ಎಂದು ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ತಿಳಿಸಿದ್ದಾರೆ.
ಅಪರಾಧ ಪ್ರಕರಣಗಳ ಪತ್ತೆ ಹಾಗೂ ಅವುಗಳ ತಡೆಗೆ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಏಪ್ರಿಲ್ ಅಂತ್ಯಕ್ಕೆ ಹೋಲಿಕೆ ಮಾಡಿದರೆ ಅಪರಾಧ ಪ್ರಕರಣಗಳು ಗಣನೀಯವಾಗಿ ಇಳಿಕೆಯಾಗಿದೆ. 2012ರಲ್ಲಿ ಏಪ್ರಿಲ್ ಅಂತ್ಯದವರೆಗೆ 376, 2013ರಲ್ಲಿ 271 ಅಪರಾಧ ಪ್ರಕರಣಗಳು ದಾಖಲಾಗಿದ್ದವು. 2014ರ ಏಪ್ರಿಲ್ ಅಂತ್ಯದವರೆಗೆ ಅಪರಾಧ ಪ್ರಕರಣಗಳ ವರದಿಯಲ್ಲಿ ಇಳಿಕೆ ಕಂಡು ಬಂದಿದ್ದು, ಒಟ್ಟು 233 ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.
ಅಪರಾಧ ಮುಕ್ತ ನಗರ: ಮೈಸೂರನ್ನು ಅಪರಾಧಗಳ ಮುಕ್ತ ನಗರವನ್ನಾಗಿಸಲು ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕನ್ನ ಕಳವು, ವಾಹನ ಕಳವು ಮತ್ತು ಸಾಮಾನ್ಯ ಕಳವು ಪ್ರಕರಣಗಳ ತಡೆಗೆ ಪರಿಣಾಮಕಾರಿಯಾಗಿ ಹಗಲು ಮತ್ತು ರಾತ್ರಿ ಗಸ್ತನ್ನು ನಿರ್ವಹಿಸಲಾಗುತ್ತಿದೆ. ಗಸ್ತಿಗೆ ಸಿಬ್ಬಂದಿ ಜತೆಗೆ ಚೀತಾ, ಕೋಬ್ರಾ, ಪಿಸಿಆರ್ ಮತ್ತು ಗರುಡಾ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸರ ಅಪಹರಣ ತಡೆಗೆ ಶುಭೋಧಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ, ಸಂಚಾರಿ, ಅಶ್ವರೋಹಿ ದಳ ಹಾಗೂ ಸಿಎಆರ್ ಪಡೆದ ಅಧಿಕಾರಿ ಮತ್ತು ಸಿಬ್ಬಂದಿ, ಪೊಲೀಸ್ ಇಲಾಖೆಯ ದ್ವಿಚಕ್ರ ವಾಹನಗಳ ತಂಡವನ್ನು ಬಳಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ದರೋಡೆ, ಸುಲಿಗೆ ಮತ್ತು ಅಪಹರಣದಂತಹ ಅಪರಾಧಗಳ ತಡೆಗೆ ಸುರಕ್ಷಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದ್ವಿಚಕ್ರ ವಾಹನಗಳ ಕಳವು ತಡೆಗೆ ವಾಣಿಜ್ಯ ಸ್ಥಳಗಳ ಬಳಿ ಸಮವಸ್ತ್ರದಲ್ಲಿ ಮತ್ತು ಮಫ್ತಿಯಲ್ಲಿ ಸಿಬ್ಬಂದಿ ನೇಮಿಸಲಾಗುತ್ತಿದೆ. ಅಲ್ಲದೇ ಲಾಕ್ ಮಾಡದೇ ಪಾರ್ಕಿಂಗ್ ಮಾಡಿರುವ ವಾಹನಗಳನ್ನು ಪೊಲೀಸ್ ಠಾಣೆಗೆ ತಂದು, ಮಾಲೀಕರಿಗೆ ಈ ಬಗ್ಗೆ ತಿಳಿವಳಿಕೆ ನೀಡಿ ನಂತರ ವಾಹನಗಳನ್ನು ಮಾಲೀಕರಿಗೆ ನೀಡಲಾಗುತ್ತಿದೆ. ನಗರದ ಮತ್ತು ನೆರೆ ಹೊರೆ ಜಿಲ್ಲೆಗಳ ಎಂಒ ಆಸಾಮಿಗಳನ್ನು ಪರಿಶೀಲಿಸಿ, ಅವರ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ. ಕಳವು ಮಾಲುಗಳನ್ನು ಸ್ವೀಕರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
ಅಪರಾಧ ಪ್ರಕರಣಗಳ ಅಂಕಿ ಅಂಶ (ಏಪ್ರಿಲ್ ಅಂತ್ಯವರೆಗೆ)
ಪ್ರಕರಣಗಳು 2012 2013 2014
ಕೊಲೆ 8 9 9
ಡಕಾಯಿತಿ 0 2 3
ಸುಲಿಗೆ 16 17 15
ಸರ ಅಪಹರಣ 76 50 32
ಹಗಲು ಕಳವು 7 1 2
ರಾತ್ರಿ ಕಳವು 33 31 24
ಮನೆಯಲ್ಲಿ ಕಳವು 18 18 18
ಸಾಮಾನ್ಯ ಕಳವು 80 35 36
ವಾಹನ ಕಳವು 137 107 93
ಜಾನುವಾರ ಕಳವು 1 1 1
ಒಟ್ಟು 376 271 233