ಎಂಎಲ್ಸಿಗೆ ಬಸವರಾಜ ಅರ್ಹ: ಸದಾಶಿವಪ್ಪ
ಪಿರಿಯಾಪಟ್ಟಣ: ಮಾಜಿ ಶಾಸಕ ಎಚ್.ಸಿ. ಬಸವರಾಜು ಅವರನ್ನು ವಿಧಾನ ಪರಿಷತ್ತಿಗೆ ಆಯ್ಕೆ ಮಾಡುವಂತೆ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಸಿ.ಸಿ. ಸದಾಶಿವಪ್ಪ ಮನವಿ ಮಾಡಿದ್ದಾರೆ.
ಸರಳ ಸಜ್ಜನಿಕೆಯ ವ್ಯಕ್ತಿಯಾಗಿರುವ ಎಚ್.ಸಿ. ಬಸವರಾಜು ಅವರು ಮಾಜಿ ಮಂತ್ರಿ ದಿವಂಗತ ಎಚ್.ಎಂ. ಚನ್ನಬಸಪ್ಪ ಅವರ ಪುತ್ರ. ಒಮ್ಮೆ ಶಾಸಕರಾಗಿ ಉತ್ತಮ ಆಡಳಿತ ನೀಡಿದ ಅನುಭವ ಹೊಂದಿದ್ದಾರೆ. ಅಲ್ಲದೆ ಬಸವರಾಜು ಅವರ ಆಡಳಿತಾವಧಿಯಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಾಗಿವೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಕೆ. ವೆಂಕಟೇಶ್ ಅವರ ಗೆಲವಿಗೂ ಕಾರಣರಾಗಿದ್ದಾರೆ ಎಂದು ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೀರಶೈವ ಸಮುದಾಯ ಹಿಂದಿನಿಂದಲೂ ಕಾಂಗ್ರೆಸ್ ಬೆಂಬಲಿಸುತ್ತಾ ಬಂದಿದ್ದರೂ ಮಾಜಿ ಶಾಸಕ ಎಚ್.ಸಿ. ಬಸವರಾಜು ಅವರಿಗೊಂದು ಅವಕಾಶ ಕಲ್ಪಿಸಿಕೊಡಬೇಕು ಎಂದು ಕೋರಿದರು. ವೀರಶೈವ ಸಮುದಾಯದ ಮುಖಂಡರಾದ ಪಿ.ಎನ್. ಚಂದ್ರಶೇಖರ್, ಕೆ.ಎಲ್. ಸುರೇಶ್, ಪಾಲಾಕ್ಷ, ನಂಜುಂಡಸ್ವಾಮಿ ಇದ್ದರು.