ಮೇಲೂರಿನಲ್ಲಿ ಆಯುರ್ವೇದ ಆಸ್ಪತ್ರೆ
ಕ.ಪ್ರ.ವಾರ್ತೆ ಭೇರ್ಯ ಮೇ 12
ಗ್ರಾಮೀಣ ಪ್ರದೇಶದ ಜನರ ಆರೋಗ್ಯ ದೃಷ್ಟಿಯಿಂದ ಮೇಲೂರಿನ ಆರ್ಯುವೇದಿಕ್ ಆಸ್ಪತ್ರೆಯನ್ನು ಒಂದು ಕೋಟಿ ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಿಸಲಾಗಿದ್ದು, ನೂತನ ಕಟ್ಟಡದ ಕಾಮಗಾರಿ ಪ್ರಗತಿಯಲ್ಲಿದೆ. ಅತಿ ಶೀಘ್ರದಲ್ಲಿ ಅದನ್ನು ಉದ್ಘಾಟಿಸುವುದಾಗಿ ಶಾಸಕ ಸಾ.ರಾ. ಮಹೇಶ್ ಹೇಳಿದರು.
ಕೆ.ಆರ್. ನಗರ ತಾಲೂಕಿನ ಮಿರ್ಲೆ ಹೋಬಳಿಯ ಮೇಲೂರು ಗ್ರಾಮದಲ್ಲಿ ಸೋಮವಾರ ಶ್ರೀ ಹಂಪೆ ವಿರೂಪಾಕ್ಷೇಶ್ವರ ಸ್ವಾಮಿ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿ ಗ್ರಾಮದಲ್ಲೂ ಧಾರ್ಮಿಕ ಕೇಂದ್ರಗಳು ನಿರ್ಮಾಣಗೊಳ್ಳುತ್ತಿರುವುದು ಉತ್ತಮ ಬೆಳವಣಿಗೆ. ದೇವಾಲಯಗಳು ನೆಮ್ಮದಿ ನೀಡುವ ತಾಣಗಳು ಎಂದ ಶಾಸಕರು, ಮೇಲೂರು ಗ್ರಾಮದಲ್ಲಿ ಶಾಸಕರ ನಿಧಿಯಿಂದ ಸಮುದಾಯ ಭವನ ನಿರ್ಮಾಣಕ್ಕೆ ಎರಡು ಲಕ್ಷ ರು. ಅನುದಾನ ನೀಡುವುದಾಗಿ ತಿಳಿಸಿದರು. ಗ್ರಾಮವನ್ನು ಸುವರ್ಣ ಗ್ರಾಮ ಯೋಜನೆ ವ್ಯಾಪ್ತಿಗೊಳಪಡಿಸಲಾಗಿದ್ದು, ಪದವಿಪೂರ್ವ ಕಾಲೇಜು, ಪ್ರೌಢಶಾಲೆ ಇತರೆ ಸೌಲಭ್ಯ ಕಲ್ಪಿಸಲಾಗಿದೆ ಎಂದರು. ಗ್ರಾಪಂ ಅಧ್ಯಕ್ಷ ರಾಮೇಗೌಡ, ತಾಲೂಕು ಜೆಡಿಎಸ್ ವಕ್ತಾರ ಕೆ.ಎಲ್. ರಮೇಶ್, ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಉಪಾಧ್ಯಕ್ಷ ಮತ್ತು ಕಾಂಗ್ರೆಸ್ ಮುಖಂಡ ಸಿ.ಪಿ. ರಮೇಶ್, ತಾಪಂ ಮಾಜಿ ಉಪಾಧ್ಯಕ್ಷ ಕೃಷ್ಣೇಗೌಡ, ಉಪನ್ಯಾಸಕ ನಾಗಭೂಷಣ ಆರಾಧ್ಯ, ತೇ.ಸಿ. ವಿಶ್ವೇಶ್ವರಯ್ಯ, ನಿವೃತ್ತ ಶಿಕ್ಷಕ ಲಿಂಗಪ್ಪ, ಕುಮಾರ್ ಹಾಗೂ ಗ್ರಾಮದ ಮುಖಂಡರು ಇದ್ದರು.