ರಾಮದೇವ್ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ಮೈಸೂರು ಮೇ 12
ಯೋಗ ಗುರು ಬಾಬಾ ರಾಮ್ದೇವ್ ಬಂಧನಕ್ಕೆ ಒತ್ತಾಯಿಸಿ ಮೈಸೂರು ವಿಭಾಗೀಯ ಪ.ಜಾತಿ ಮತ್ತು ಪ.ವರ್ಗಗಳ ಅನುದಾನಿತ ಹಾಗೂ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಸದಸ್ಯರು ಪುರಭವನ ಎದುರಿನ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟಿಸಿದರು.
ಭಾರತೀಯ ಸಂಸ್ಕೃತಿಗೆ ಶ್ರೇಷ್ಠ ಎನ್ನುವವರ ಮಗ್ಗುಲ ಬಳಿ ಅಸ್ಪೃಶ್ಯತೆ, ಜಾತಿ ಭೇದ, ಲಿಂಗತಾರತಮ್ಯ, ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಪಂಕ್ತಿಭೇದಗಳಿವೆ. ಅಸಲಿ ಜಾತ್ಯತೀತವಾದಿಗಳು, ಡೋಂಗಿ ಬಾಬಾಗಳು ಮತ್ತು ತಿಳಿಗೇಡಿ ದೈವಾರಾಧಕರೆಲ್ಲರೂ ಅಸ್ಪೃಶ್ಯರು, ಆದಿವಾಸಿ, ಬುಡಕಟ್ಟು ಜನರನ್ನು ಗೌರವದಿಂದ ನೋಡಬೇಕು ಎಂಬ ಕನಿಷ್ಠ ಸೌಜನ್ಯವನ್ನೂ ಹೊಂದಿಲ್ಲ. ಬಾಬಾ ರಾಮದೇವ ಎಂಬ ಸ್ವಯಂ ಘೋಷಿತ ಯೋಗಗುರು, ಸಾವಿರಾರು ಕೋಟಿಗಳ ಒಡೆಯ, ಆರೋಗ್ಯದ ಹೆಸರಿನಡಿ ಮುಗ್ಧ ರೋಗಿಗಳನ್ನು ಸುಲಿಯುವ ಹಗಲು ದರೋಡೆಕೋರ ಎಂದು ಆರೋಪಿಸಿದರು.
ಎಐಸಿಸಿ ಉಪಾಧ್ಯಕ್ಷ ರಾಹುಲ್ಗಾಂಧಿ ದಲಿತರ ಹೆಣ್ಣು ಮಕ್ಕಳೊಂದಿಗೆ ಮಧುಚಂದ್ರಕ್ಕಾಗಿ ಉತ್ತರ ಪ್ರದೇಶದಲ್ಲಿ ಪ್ರವಾಸ ಮಾಡುತ್ತಾರೆ ಎಂದು ಅನಾಗರಿಕ ಹೇಳಿಕೆ ನೀಡಿದ್ದಾರೆ. ಬಾಬಾ ರಾಮದೇವ್ ಮಾನಸಿಕ ಅಸ್ವಸ್ಥನಂತೆ ಕಾಣುತ್ತಾರೆ. ಕೂಡಲೆ ರಾಮದೇವ್ ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಮೇಯರ್ಗಳಾದ ನಾರಾಯಣ್, ಅನಂತ, ಒಕ್ಕೂಟದ ಗೌರವಾಧ್ಯಕ್ಷ ಶಾಂತರಾಜು ಇದ್ದರು.