ಆಹಾರ ಕಲಬೆರಕೆಗೆ ಕ್ರಮ ಅಗತ್ಯ
ಕ.ಪ್ರ.ವಾರ್ತೆ ಮೈಸೂರು ಮೇ 13
ಆಹಾರ ಕಲಬೆರಕೆ ಕುರಿತು ಸಚಿವರು ಕೇವಲ ಬೆದರಿಕೆ ಹಾಕಿದರೆ ಸಾಲದು, ಇಲಾಖೆ ಅಧಿಕಾರಿಗಳು ಅಪರಾಧಕ್ಕೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ವಸಂತಕುಮಾರ್ ಮೈಸೂರುಮಠ ಆಗ್ರಹಿಸಿದ್ದಾರೆ.
ಹಿಂದಿನಿಂದಲೂ ಇರುವ ಕಾನೂನು ಕಟ್ಟಳೆಗಳನ್ನು ವರ್ತಕರು ಧಿಕ್ಕರಿಸಿ ಆಹಾರ ಪದಾರ್ಥಗಳ ಕಲಬೆರಕೆಯನ್ನು ಮುಂದುವರಿಸಿಕೊಂಡು ಸಾಕಷ್ಟು ಲಾಭ ಮಾಡುತ್ತಿದ್ದಾರೆ. ಸಾಮಾನ್ಯರು ಕಲಬೆರಕೆ ಪದಾರ್ಥಗಳನ್ನು ಕೊಳ್ಳುತ್ತಿದ್ದಾರೆ. ಏಕೆಂದರೆ, ನಮ್ಮ ಇಂದಿನ ಆಹಾರ ಸಂರಕ್ಷಣೆ ವ್ಯವಸ್ಥೆಯಲ್ಲಿ ನಂಬಿಕೆ ಎಲ್ಲ. ಕಲಬೆರಕೆ ಪತ್ತೆ ಹಚ್ಚಲು ನಗರ ಪಾಲಿಕೆಗಳಲ್ಲಿ ಅಥವಾ ಗ್ರಾಪಂ, ತಾಪಂಗಳಲ್ಲಿ ಸಾಕಷ್ಟು ನುರಿತ ಸಿಬ್ಬಂದಿ ಇಲ್ಲ. ಜನ ಸಾಮಾನ್ಯರು ಕಲಬೆರಕೆ ಪದಾರ್ಥಗಳನ್ನು ಕೊಂಡೊಯ್ದು ಅದರ ಬಗ್ಗೆ ವೈಜ್ಞಾನಿಕವಾಗಿ ತಪಾಸಣೆ ಮಾಡಲು ಮೈಸೂರಿನಲ್ಲಿ ಅಥವಾ ತಾಲೂಕು ಮಟ್ಟಗಳಲ್ಲಿ ಸರಿಯಾದ ತಪಾಸಣೆ ಕೇಂದ್ರ ಇಲ್ಲ ಎಂದು ಅವರು ತಿಳಿಸಿದ್ದಾರೆ.
ನಗರ ಪ್ರದೇಶದಲ್ಲಿನ ಗ್ರಾಹಕ ಜಾಗೃತಿ ವೇದಿಕೆಗಳು, ಪರಿಷತ್ತುಗಳು ಅಥವಾ ಸಂಘ ಸಂಸ್ಥೆಗಳು ವರ್ಷಕ್ಕೆ ಎರಡು ಬಾರಿ ವಿಶ್ವ ಸಂಸ್ಥೆಯವರು ಮತ್ತು ನಮ್ಮ ನಾಡಿನವರು ಆಯೋಜಿಸುವ ಗ್ರಾಹಕ ದಿನಗಳನ್ನು ಆಚರಿಸಿ, ಬೆಣ್ಣೆಯಲ್ಲಿ, ಮೆಣಸಿನ ಕಾಳಿನಲ್ಲಿ, ಟೀ ಸೊಪ್ಪಿನಲ್ಲಿ ಕಲಬೆರಕೆಗಳ ಬಗ್ಗೆ ಒಂದು ದಿನದ ಮಟ್ಟಿಗೆ ಜನರಿಗೆ ಅರಿವು ಮೂಡಿಸಿದ್ದೇವೆ ಎಂದು ಬೆನ್ನು ತಟ್ಟಿಕೊಂಡು ಮಾಧ್ಯಮಗಳಲ್ಲಿ ಪ್ರಚಾರ ಗಳಿಸಿದರೆ ಸಾಲದು. ಅಂತಹ ವೇದಿಕೆಗಳಲ್ಲೂ ನುರಿತ ನಿಪುಣರು ಒಬ್ಬರೋ ಇಬ್ಬರೋ ಇದ್ದು ವೇದಿಕೆಯ ಉಳಿದವರೆಲ್ಲರೂ ಆಡಂಬರಕ್ಕೆ ಇರುವುದನ್ನು ನೋಡಿರುವುದಾಗಿ ಅವರು ತಿಳಿಸಿದ್ದಾರೆ.
ಕನಿಕರವಿಲ್ಲದೆ, ನಿರ್ದಾಕ್ಷಿಣ್ಯವಾಗಿ ಲಾಭಕ್ಕಾಗಿ ಜನರ ಆರೋಗ್ಯಕ್ಕೆ ಹಾನಿಕರಾವಾದ ಕಲಬೆರಕೆಯಲ್ಲಿ ತೊಡಗಿರುವ ಮಾಲ್, ಮಳಿಗೆ ಗುರುತಿಸಿ, ಅವುಗಳ ಮಾಲೀಕರು ಮಾಡುತ್ತಿರುವ ಅಪರಾಧಕ್ಕೆ ತಕ್ಕ ಶಿಕ್ಷೆ ನೀಡಿ ಜನರ ಮನಸ್ಸಿನಲ್ಲಿ ನಂಬಿಕೆ ಮೂಡಿಸುವ ಕಾಲ ಬಂದಿದೆ. ಅಲ್ಲದೆ ಇಲಾಖೆಗಳಲ್ಲಿ ಸಾಕಷ್ಟು ನುರಿತ ಆಹಾರ ನಿರೀಕ್ಷಕರನ್ನು ಅಥವಾ ವಿಜ್ಞಾನಿಗಳನ್ನು ಮತ್ತು ಅವರು ತಪಾಸಣೆ ಮಾಡಲು ಅನುಕೂಲವಾಗುವ ಮೂಲಭೂತ ಸೌಲಭ್ಯ ಮತ್ತು ಸಲಕರಣೆಗಳನ್ನೂ ತಾಲೂಕು ಮತ್ತು ನಗರ ಪ್ರದೇಶಗಳಲ್ಲಿ ಒದಗಿಸುವ ವ್ಯವಸ್ಥೆ ಮಾಡಬೇಕು. ನಗರದಲ್ಲಿ ಒಂದು ತಪಾಸಣೆ ಕೇಂದ್ರ ತೆಗೆಯುವ ಒದಗಿಸುವ ಉದ್ದೇಶದಿಂದ ಸಾರ್ವಜನಿಕರ ತೆರಿಗೆ ಹಣದಿಂದ ರು. 50 ಲಕ್ಷ ವೆಚ್ಚ ಮಾಡಿ ತಿಲಕನಗರದಲ್ಲಿ ನಿರ್ಮಿಸಲಾಗಿದೆ. ಇದರ ಉದ್ಘಾಟನೆ ಅಥವಾ ಆಹಾರ ಕಲಬೆರಕೆ ಪತ್ತೆ ಹಚ್ಚವ ಸಲಕರಣೆ ಅಳವಡಿಕೆ ಇನ್ನೂ ಆಗಿಲ್ಲ ಎಂದು ಆರೋಪಿಸಿದ್ದಾರೆ.