ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಕುಡಿವ ನೀರು ಪೂರೈಸಿ

Rashmi Kasaragodu
Updated On : 14 May 2014, 1:07 am

ಕ.ಪ್ರ.ವಾರ್ತೆ    ಕೆ.ಆರ್. ನಗರ    ಮೇ 13
ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮೋಟಾರುಗಳ ದುರಸ್ತಿಗೆ 8 ತಿಂಗಳ ಅವಧಿಯಲ್ಲಿ ಪುರಸಭೆಯಿಂದ 19 ಲಕ್ಷ ವ್ಯಯ ಮಾಡಿದ್ದರೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ನೀರು ಸರಬರಾಜು ಜವಾಬ್ದಾರಿಯನ್ನು ಜಲಮಂಡಳಿಗೆ ವಹಿಸಲು ಆಡಳಿತ ಮಂಡಳಿ ನಿರ್ಣಯ ಕೈಗೊಳ್ಳಬೇಕು ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಅಧ್ಯಕ್ಷೆ ಪಾರ್ವತಿ ನಾಗರಾಜು ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ನೀರು ನಿರ್ವಹಣೆಯನ್ನು ಜಲ ಮಂಡಳಿಗೆ ವಹಿಸುವುದರಿಂದ ಪುರಸಭೆಗೆ ಖರ್ಚಿನ ಜತೆಗೆ ಜವಾಬ್ದಾರಿಯೂ ಕಡಿಮೆ ಆಗುತ್ತದೆ. ಸದಸ್ಯರು ಅಭಿವೃದ್ಧಿ ಕೆಲಸಗಳನ್ನು ಮಾಡುವಾಗ ಪಕ್ಷಭೇದ ಮರೆತು ಜನತೆಯ ಹಿತದೃಷ್ಟಿಯಿಂದ ಒಂದಾಗಿ ಉತ್ತಮ ಕೆಲಸ ಮಾಡಿ ಎಂದು ಸಲಹೆ ನೀಡಿದರು.
ಸದಸ್ಯ ಕೆ.ಬಿ.ಸುಬ್ರಹ್ಮಣ್ಯ ಮಾತನಾಡಿ, ಆಡಳಿತ ಮಂಡಳಿ ಇಲ್ಲದ ಸಮಯದಲ್ಲಿ ಅಧಿಕಾರಿಗಳು ನೀರು ಸರಬರಾಜು ಮಾಡಲು ವಿಫಲಗೊಂಡಿದ್ದಾರೆ. ಈಗ ನೂತನ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿರುವುದರಿಂದ 6 ತಿಂಗಳು ಕಾಲಾವಕಾಶ ನೀಡಿದರೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ. ನಂತರವೂ ಅಸಮರ್ಪಕ ನೀರು ಸರಬರಾಜು ಆಗದಿದ್ದರೆ ಜಲಮಂಡಳಿಗೆ ವಹಿಸೋಣ ಎಂದರು. ಇದಕ್ಕೆ ಶಾಸಕರು ಸಮ್ಮತಿಸಿದರು.
ನೀಲನಕ್ಷೆ ತಯಾರು: ಪಟ್ಟಣದ ಪುರಸಭಾ ಬಯಲು ರಂಗಮಂದಿರದ ಸುತ್ತ 3.5 ಕೋಟಿ ವೆಚ್ಚದಲ್ಲಿ 80 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲು ನೀಲನಕ್ಷೆ ತಯಾರಿಸಲಾಗಿದೆ. ಇದನ್ನು ಪ್ರಕಟಿಸಿದ ಬಳಿಕ ಸಾರ್ವಜನಿಕರ ಸಲಹೆ ಮತ್ತು ಸೂಚನೆಯಂತೆ ಕಾಮಗಾರಿ ಮಾಡುವ ಬಗ್ಗೆ ತೀರ್ಮಾನಿಸೋಣ ಎಂದಾಗ ಸದಸ್ಯರೆಲ್ಲಾ ಒಪ್ಪಿದರು.
ಸದಸ್ಯ ಉಮೇಶ್ ಮಾತನಾಡಿ, ಮಾಹಿತಿ ಹಕ್ಕು ಅದಿ ನಿಯಮದಡಿ ಕುಡಿಯುವ ನೀರಿಗಾಗಿ ಪುರಸಭೆ ವತಿಯಿಂದ ಖರ್ಚಾದ ಸಮಗ್ರ ದಾಖಲೆಗಳನ್ನು ಪಡೆದಿದ್ದು, ಇದರಲ್ಲಿ ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಪಟ್ಟಣದಲ್ಲಿ ಪ್ರಭಾವಿಗಳು ಚರಂಡಿ ಮೇಲೆ ಸ್ಲಾಬ್ ಹಾಕಿ ಗೋಡಾನ್ ನಿರ್ಮಿಸಿಕೊಂಡಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ದಂಡ ವಿಧಿಸಬೇಕು ಎಂದು ಆಗ್ರಹಿಸಿದರು.
ಸದಸ್ಯರಾದ ಎನ್.ಶಿವಕುಮಾರ್, ನಟರಾಜು, ಮಹಾಲಕ್ಷ್ಮಿ ಮಾತನಾಡಿದರು. ಉಪಾಧ್ಯಕ್ಷೆ ಕವಿತಾ ವಿಜಯಕುಮಾರ್, ಸದಸ್ಯರಾದ ಸರೋಜ, ಮಕ್ಬೂಲ್ ಖಾನ್, ಕೆ.ಜಿ.ಸುಬ್ರಹ್ಮಣ್ಯ, ಎಚ್.ಸಿ. ರಾಜು, ಕೆ.ಎಲ್. ಜಗದೀಶ್, ಹರ್ಷಲತಾ, ಗೀತಾಮಹೇಶ್, ಸಲೀಮಾಬಿ, ಫರೀದಾಖಾನಂ, ಫಿರ್ಧೋಸ್ ಖಾನಂ, ಮುಖ್ಯಾಧಿಕಾರಿ ಚಿಕ್ಕನಂಜಯ್ಯ, ವ್ಯವಸ್ಥಾಪಕ ಪಂಚಲಿಂಗೇಗೌಡ, ಜೆಇ ಅಶ್ವಿನಿ, ಲೋಕೇಶ್ ಇದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement