ಕುಸಿಯುವ ಹಂತದಲ್ಲಿ ನೀರಿನ ಟ್ಯಾಂಕ್: ಅಧಿಕಾರಿಗಳ ನಿರ್ಲಕ್ಷ್ಯ
ಕೆ.ಆರ್. ನಗರ: ಅನಗತ್ಯ ಕಾಮಗಾರಿಗಳಿಗಾಗಿ ಲಕ್ಷಾಂತರ ರು.ಗಳನ್ನು ವ್ಯಯ ಮಾಡಲು ಅನುದಾನ ಬರುವ ಮುಂಚೆಯೇ ಅಂದಾಜು ಪಟ್ಟಿ ತಯಾರಿಸಿ, ಕಾಮಗಾರಿ ಆರಂಭಿಸಲು ಸಿದ್ಧತೆ ನಡೆಸುವ ಅಧಿಕಾರಿಗಳು ಕುಡಿಯುವ ನೀರಿನ ಓವರ್ ಹೆಡ್ಟ್ಯಾಂಕ್ ಸಂಪೂರ್ಣವಾಗಿ ಶಿಥಿಲಗೊಂಡಿದ್ದರೂ ದುರಸ್ತಿಪಡಿಸಲು ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದು, ಇದರಿಂದ ಟ್ಯಾಂಕ್ ಕುಸಿಯುವ ಹಂತ ತಲುಪಿದೆ. ತಾಲೂಕಿನ ಕೆಸ್ತೂರು ಗ್ರಾಮದಲ್ಲಿ 1990 ರಲ್ಲಿ ನಿರ್ಮಾಣಗೊಂಡಿರುವ ಟ್ಯಾಂಕ್ ಸೂಕ್ತ ನಿರ್ವಹಣೆ ಇಲ್ಲದೆ, ಸಿಮೆಂಟ್ ಕಿತ್ತು ಬೀಳುತ್ತಿದ್ದು. ಕಬ್ಬಿಣ ಹೊರಬಂದಿರುವುದರಿಂದ ಯಾವುದೇ ಕ್ಷಣದಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಟ್ಯಾಂಕ್ ಶಿಥಿಲಗೊಂಡಿರುವುದರಿಂದ ನೀರನ್ನು ಸಂಗ್ರಹಿಸಲು, ಸ್ವಚ್ಛ ಮಾಡಲು ನೀರುಗಂಟಿ ಭಯಬೀಳುವಂತಾಗಿದ್ದು, ಇದರಿಂದ ಟ್ಯಾಂಕ್ ಸ್ವಚ್ಛಗೊಳಿಸದೆ ಕಲ್ಮಶ ನೀರನ್ನು ಕುಡಿಯುವ ಸ್ಥಿತಿ ಇದ್ದು, ಪಕ್ಕದಲ್ಲಿ ಅಂಗನವಾಡಿ ಕೇಂದ್ರ ಇರುವುದರಿಂದ ಮಕ್ಕಳನ್ನು ಟ್ಯಾಂಕ್ ರಸ್ತೆಯಲ್ಲಿ ಕಳುಹಿಸಲು ಗ್ರಾಮಸ್ಥರು ಭಯ ಪಡುತ್ತಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್ ದುರಸ್ತಿಪಡಿಸಿ ಇಲ್ಲವೇ ಕೆಡವಿ ಹಾಕಿ ಎಂದು ಚುನಾಯಿತ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಗ್ರಾಮಸ್ಥರು ಹತ್ತಾರು ಬಾರಿ ಮನವಿ ಸಲ್ಲಿಸಿದರೂ, ಈವರೆಗೆ ಗಮನ ಹರಿಸಿಲ್ಲ. ಸಂಬಂಧಪಟ್ಟವರು ಈಗಲಾದರೂ ಸೂಕ್ತ ಕ್ರಮ ಕೈಗೊಂಡು ಶಿಥಿಲಾವಸ್ಥೆಯಲ್ಲಿರುವ ಕೆಸ್ತೂರು ಗ್ರಾಮದ ಓವರ್ ಹೆಡ್ ಟ್ಯಾಂಕ್ ಅನ್ನು ದುರಸ್ತಿಪಡಿಸಿ ಅನುಕೂಲ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.