ನಾಟಕೋತ್ಸವ
ಹುಣಸೂರು: ಪಟ್ಟಣದ ಟ್ಯಾಲೆಂಟ್ ಶಾಲೆಯ ಪ್ರತಿಭಾ ವನರಂಗದಲ್ಲಿ ಚಿಣ್ಣರ ಮೇಳದ ಅಂಗವಾಗಿ ಮೇ 14 ರಿಂದ 18 ರವರೆಗೆ ಬಹುಮುಖ ನಾಟಕೋತ್ಸವ ಆಯೋಜಿಸಲಾಗಿದೆ ಎಂದು ಸಂಸ್ಥೆ ಮುಖ್ಯಸ್ಥ ನವೀನ್ ರೈ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಸಂಜೆ 7ಕ್ಕೆ ನಾಟಕ ಆರಂಭವಾಗಲಿದ್ದು, ಮೇ 14ಕ್ಕೆ ಮೈಮ್ ರಮೇಶ್ ನಿರ್ದೇಶನದ ಬುಗುರಿ, ಮೇ 15ಕ್ಕೆ ಭಾರತೀಯ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ ಚಮ್ಮಾರನ ಹೆಂಡತಿ, 16ಕ್ಕೆ ಮೈಸೂರಿನ ನಾವು ತಂಡದಿಂದ ಫ್ಯೂಜನ್ ಸಂಗೀತ, ಚಿಣ್ಣರ ಮೇಳದ ವಿದ್ಯಾರ್ಥಿಗಳಿಂದ 17ಕ್ಕೆ ಬಿ.ವಿ.ಕಾರಂತರ ಗಿಲಹರಿ ರಾಮಾಯಣ ಆಧಾರಿತ ಮೈಸೂರಿನ ಸಿ.ವಿಕಾಸ್ ನಿರ್ದೇಶನದ ಅಳಿಲು ರಾಮಾಯಣ, 18ಕ್ಕೆ ಜಿ.ಟಿ. ವಿಕ್ರಮ್ ನಿರ್ದೇಶನದ ಕುಹೂ ಕುಹೂ ಕೋಗಿಲೆ ನಾಟಕ ಪ್ರದರ್ಶನಗೊಳ್ಳಲಿದೆ ಎಂದರು. ಸಂಸ್ಥೆಯ ಕೃಷ್ಣಮೂರ್ತಿ, ಮಂಜುನಾಥ್, ಪ್ರಾಂಶುಪಾಲ ವಿ. ರವಿ ಇದ್ದರು.
ಪುರಸ್ಕಾರಕ್ಕೆ ಅರ್ಜಿ
ಪಿರಿಯಾಪಟ್ಟಣ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಸಾಪ ತಾಲೂಕು ಅಧ್ಯಕ್ಷ ಗೊರಳ್ಳಿ ಜಗದೀಶ್ ಹೇಳಿದ್ದಾರೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಕನ್ನಡ ಭಾಷಾ ವಿಷಯದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಗುವುದು. ಎಸ್ಸೆಸ್ಸೆಲ್ಸಿ ಕನ್ನಡ ಭಾಷೆಯಲ್ಲಿ 123ಕ್ಕಿಂತ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ತಾಲೂಕಿನಲ್ಲಿ ಒಟ್ಟಾರೆ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಮತ್ತು ಶೇ.100 ರಷ್ಟು ಫಲಿತಾಂಶ ಪಡೆದ ಶಾಲೆ ಹಾಗೂ ಪಿಯುಸಿಯಲ್ಲಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು, ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ ತಾಲೂಕಿನಲ್ಲಿ ಅತಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು. ಅರ್ಹ ವಿದ್ಯಾರ್ಥಿಗಳು, ಸಂಬಂಧಿಸಿದ ಶಾಲಾ ಕಾಲೇಜುಗಳ ಮುಖ್ಯಸ್ಥರು ವಿವರಗಳನ್ನು ಮೇ 17ರ ಒಳಗೆ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಿಗೆ ತಲುಪಿಸಬಹುದು. ಮೊ. 9900374907, 9964689386 ಸಂಪರ್ಕಿಸಬಹುದು.
ಕಾರು, ಲಾರಿ ಡಿಕ್ಕಿ
ನಂಜನಗೂಡು: ತಾಲೂಕಿನ ಹೊಸಹಳ್ಳಿ ಗೇಟ್ ಬಳಿ ಇನ್ನೋವಾ ಕಾರು ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿದೆ. ಮೈಸೂರು ಕಡೆಯಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಲಾರಿ ಹಾಗೂ ಗುಂಡ್ಲುಪೇಟೆಯಿಂದ ಬಂದ ಇನ್ನೋವ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಲಾರಿ, ರಸ್ತೆ ಬದಿಯ ಗದ್ದೆಗೆ ಉರುಳಿ ಬಿದ್ದಿದೆ. ಆದರೆ ಯಾರಿಗೂ ಪ್ರಾಣಾಪಾಯ ಆಗಿಲ್ಲ. ವೇಗವಾಗಿ ಬಂದ ಇನ್ನೋವಾ ಕಾರು ಮತ್ತೊಂದು ವಾಹನವನ್ನು ಹಿಂದಿಕ್ಕಲು ಮುಂದಾದಾಗ ಎದುರಿನಿಂದ ಬಂದ ಲಾರಿಗೆ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ನಾಗರಾಜು ಮತ್ತು ಸಿಬ್ಬಂದಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪೇದೆ ಆತ್ಮಹತ್ಯೆ
ಮೈಸೂರು: ರೈಲಿಗೆ ಸಿಕ್ಕಿ ಮೈಸೂರಿನ ಸಿಎಆರ್ ಪೇದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು- ಬೆಳಗೊಳ ರೈಲು ನಿಲ್ದಾಣಗಳ ನಡುವೆ ನಡೆದಿದೆ.ಚಾಮರಾಜನಗರ ಜಿಲ್ಲೆ ಪಾಳ್ಯ ಗ್ರಾಮ ನಿವಾಸಿ ಗೋವಿಂದರಾಜು (28) ಆತ್ಮಹತ್ಯೆ ಮಾಡಿಕೊಂಡವರು. ಇವರು ಐದು ವರ್ಷಗಳ ಹಿಂದೆ ಪೊಲೀಸ್ ಇಲಾಖೆಗೆ ಸೇರಿದ್ದು, ಜ್ಯೋತಿನಗರದ ವಸತಿಗೃಹದಲ್ಲಿ ತಾಯಿಯೊಂದಿಗೆ ವಾಸವಾಗಿದ್ದರು.ಭಾನುವಾರ ರಾತ್ರಿ ಕರ್ತವ್ಯಕ್ಕೆ ತೆರಳಿದ ಗೋವಿಂದರಾಜು, ಸೋಮವಾರ ಬೆಳಗೊಳ ಬಳಿ ರೈಲು ಹಳಿಗಳ ಮೇಲೆ ಅವರ ಮೃತದೇಹ ಪತ್ತೆಯಾಗಿದೆ. ಶವದ ಬಳಿಯಿದ್ದ ಮೊಬೈಲ್ ಸಹಾಯದಿಂದ ಗೋವಿಂದರಾಜು ಕುಟುಂಬಕ್ಕೆ ಪೊಲೀಸರು ವಿಷಯ ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಈ ಸಂಬಂಧ ಮೈಸೂರು ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.