ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ನಾಲೆ ಕಾಮಗಾರಿ ಪೂರ್ಣಗೊಳಿಸಿ

Rashmi Kasaragodu
Updated On : 15 May 2014, 12:50 pm

ಕ.ಪ್ರ.ವಾರ್ತೆ    ಕೆ.ಆರ್. ನಗರ    ಮೇ 14
ಒಂದೂವರೆ ತಿಂಗಳೊಳಗೆ ಚಾಮರಾಜ ಎಡ ಮತ್ತು ಬಲದಂಡೆ, ಮಿರ್ಲೆ ಶ್ರೇಣಿ, ರಾಮಸಮುದ್ರ, ನಾಲೆಗಳ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸಲು ಕಾವೇರಿ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಶಿವಶಂಕರ್ ಅವರಿಗೆ ಶಾಸಕ ಸಾ.ರಾ. ಮಹೇಶ್ ಸೂಚಿಸಿದರು.
ಅಂದಾಜು 178 ಕೋಟಿ ವೆಚ್ಚದ ಚಾಮರಾಜ ಎಡ ಹಾಗೂ ಬಲದಂಡೆ ನಾಲೆಗಳ ಕಾಮಗಾರಿ ಕುಂಠಿತಗೊಂಡಿರುವ ಕುರಿತು ಸಾಲಿಗ್ರಾಮ ಪ್ರವಾಸಿ ಮಂದಿರದಲ್ಲಿ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಖಾರೀಫ್ ಬೆಳೆಗೆ ನೀರು ಹರಿಸಲು ಮನವಿ ಮಾಡಲಾಗಿತ್ತು. ಏಪ್ರಿಲ್‌ನಲ್ಲೇ ಮುಗಿಯಬೇಕಿದ್ದ ಕಾಮಗಾರಿ ಅಪೂರ್ಣಗೊಂಡಿರುವ ಕಾರಣ ನಾಲಾ ವ್ಯಾಪ್ತಿಯ ರೈತರಿಗೆ ಬಹಳ ತೊಂದರೆಯಾಗಿದೆ. ಜನವರಿಯಿಂದಿಚೆಗೆ ಕಾಮಗಾರಿ ಕುಂಠಿತಗೊಂಡಿದ್ದು, ರೈತರ ಹಿತದೃಷ್ಟಿಯಿಂದ ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಲು ತಿಳಿಸಿದರು.
ಗುರುವಾರ ಹಾಗೂ ಶುಕ್ರವಾರ ಪ್ರಗತಿಯಲ್ಲಿರುವ ನಾಲಾ ಕಾಮಗಾರಿಯನ್ನು ಪರಿಶೀಲಿಸುವುದಾಗಿ ಹೇಳಿದ ಶಾಸಕರು, ಮತ್ತೆ ಕಾಮಗಾರಿ ಕುಂಠಿತಗೊಂಡರೆ ಗುತ್ತಿಗೆದಾರನಿಗೆ ನೀಡಬೇಕಿರುವ ಬಿಲ್ ತಡೆ ಹಿಡಿಯಿರಿ, ಜತೆಗೆ ದಂಡವನ್ನೂ ವಿಧಿಸುವಂತೆ ಆದೇಶಿಸಿದರು.
ಪ್ರಸ್ತಾವನೆ ಸಲ್ಲಿಸಿ: ಈ ವೇಳೆ ಮಾತನಾಡಿದ ಅಧಿಕಾರಿಗಳು, ಗುತ್ತಿಗೆದಾರ ಎರಡೆರಡು ಕಡೆ ನಾಲಾ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಸಮಜಾಯಿಸಿ ನೀಡಿದರು. ಸಾಲಿಗ್ರಾಮದ ದೊಡ್ಡಕೆರೆಗೆ ಉಳಿಕೆ ಪೆನ್ಸಿಂಗ್, ವಾಕ್‌ಪಾಥ್ ಕಾಮಗಾರಿಯನ್ನೊಳಗೊಂಡಂತೆ ಸಮಗ್ರ ಅಭಿವೃದ್ಧಿಗಾಗಿ ಪ್ರಸ್ತಾವನೆ ಸಲ್ಲಿಸಲು ಇದೇ ವೇಳೆ ಶಾಸಕರು ಸೂಚಿಸಿದರು.
ಕಾಮಗಾರಿ ವಿಳಂಬದಿಂದ ಅಸಮಾಧಾನಗೊಂಡಿದ್ದ ಶಾಸಕ ಸಾ.ರಾ. ಮಹೇಶ್, ಪ್ರತಿಭಟನೆ ಮಾಡುವ ನಿರ್ಧಾರ ಕೈಗೊಂಡಿದ್ದರು. ಈ ಹಿನ್ನೆಲೆ ಏ.30ರಂದು ಬೆಂಗಳೂರಿನ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿಯಲ್ಲಿ ಸಭೆ ನಡೆದು ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸಲು ಗುತ್ತಿಗೆದಾರನಿಗೆ ಸೂಚಿಸಲಾಗಿತ್ತು. ಆದರೂ ಕಾಮಗಾರಿ ಚುರುಕುಗೊಳ್ಳದ ಕಾರಣ ಈ ಸಭೆ ನಡೆಯಿತು.
ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್ ಮಹೇಶ್, ಎಇಇಗಳಾದ ರಂಗಸ್ವಾಮಿ, ಬಸವರಾಜ್, ಎಇಗಳಾದ ಚಂದ್ರಶೇಖರ್, ಪ್ರಸಾದ್, ಶಂಕರೇಗೌಡ, ಈಶ್ವರ್, ಮುಖಂಡರಾದ ಮಿರ್ಲೆ ಧನಂಜಯ್, ವಾಸು, ಮಂಜು, ವಸಂತ, ಗ್ರಾಪಂ ಸದಸ್ಯ ಗುರುಪ್ರಸಾದ, ಪಿಎಸಿಸಿ ನಿರ್ದೇಶಕ ಎಸ್.ಬಿ. ಅಶೋಕ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement