ಪಿಡಿಒಗಳಿಗೆ ಸಿಇಒ ಛೀಮಾರಿ
ಕ.ಪ್ರ.ವಾರ್ತೆ ಹುಣಸೂರು ಮೇ 14
ಗ್ರಾಪಂ ಪಿಡಿಒಗಳು ಹಣ ಬರುವ ಕೆಲಸದಲ್ಲಿ ತೋರುವ ಆಸಕ್ತಿಯನ್ನು ಕುಡಿಯುವ ನೀರು ಮತ್ತು ಮೂಲಭೂತ ಸೌಲಭ್ಯಗಳ ಬಗ್ಗೆ ನೀಡುತ್ತಿಲ್ಲ ಎಂದು ಜಿಪಂ ಸಿಇಒ ಪಿ.ಎ.ಗೋಪಾಲ್ ಪಿಡಿಒಗಳನ್ನು ತರಾಟೆಗೆ ತೆಗೆದುಕೊಂಡರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಬುಧವಾರ ನಡೆದ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಒಗಳು, ಕಾರ್ಯದರ್ಶಿಗಳು ಹಾಗೂ ಗ್ರಾಪಂ ಅಧ್ಯಕ್ಷರ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಚಾಟಿ ಬೀಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಸಮರ್ಪಕವಾಗಿ ನಿಭಾಯಿಸುವಲ್ಲಿ ಹುಣಸೂರು ತಾಲೂಕು ಆಡಳಿತ ವಿಫಲವಾಗಿದೆ. ತಮಗೆ ಅತಿಹಚ್ಚು ದೂರುಗಳು ಈ ತಾಲೂಕಿನಿಂದಲೆ ಬಂದಿವೆ. ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳ ಅನುಷ್ಠಾನ ಹಂತದಲ್ಲಿ ತಾಲೂಕು ಆಡಳಿತ ಸಂಪೂರ್ಣ ವಿಫಲವಾಗಿದೆ. ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಸೈಟಿಗೆ ನಮೂನೆ 9, 11 ನೀಡಲು ಎಲ್ಲಾ ವ್ಯವಸ್ಥೆ ಮಾಡಿಕೊಳ್ಳುವ ನೀವು ಬಡಜನತೆಗೆ ಕುಡಿಯುವ ನೀರು ನೀಡಲು ಹಿಂದೇಟು ಹಾಕುತ್ತಿರುವುದು ಏಕೆ ಎಂದು ಪ್ರಶ್ನಿಸಿದರು.
ಎಲ್ಲಾ ನಮ್ಮಿಂದಲೆ ಎನ್ನುವ ಅಹಂಕಾರ ಬಿಡಬೇಕು. ಕೆಲವು ಪಿಡಿಒಗಳು ಸರ್ಕಾರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುವುದನ್ನು ಬಿಟ್ಟು ರಾಜಕಾರಣಿಯಂತೆ ವರ್ತಿಸುತ್ತಿರುವ ಕುರಿತು ಮಾಹಿತಿ ಬಂದಿದೆ. ನಿಮಗೆ ಕೆಲಸ ಮಾಡಲು ಇಷ್ಟ ಇಲ್ಲದಿದ್ದರೆ ಹೋಗಿ ರಾಜಕಾರಣಿಯಾಗಿ ಚುನಾವಣೆಗೆ ನಿಲ್ಲಿ. ನಮಗಿಲ್ಯಾರೂ ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸುತ್ತಿಲ್ಲ. ನಮ್ಮ ನಮ್ಮ ದರ್ದಿಗೆ ನಾವು ಇಲ್ಲಿದ್ದೇವೆ. ನೀವು, ನಾವು ಇಲ್ಲದಿದ್ದರೆ ಪಂಚಾಯಿತಿಗಳು, ಸರ್ಕಾರ ಏನು ಸತ್ತು ಹೋಗುವುದಿಲ್ಲ. ವರ್ಗಾವಣೆ ಬೇಕಾದರೆ ನನಗೆ ಕೇಳಿ ನಾನೆ ಮಾಡಿಸಿಕೊಡುತ್ತೇನೆ. ಆದರೆ ಜನರಿಗೆ ಮೋಸ ಮಾಡಬೇಡಿ. ಪಟ್ಟಭದ್ರ ಹಿತಾಸಕ್ತಿಗಳ, ಗುತ್ತಿಗೆದಾರರ ಹಾಗೂ ಕೆಲವು ಜನಪ್ರತಿನಿಧಿಗಳ ಮರ್ಜಿಗೆ ಒಳಗಾಗಿ ಕೆಲಸ ನಿರ್ವಹಿಸಬೇಡಿ ಎಂದರು.
ಜನಪ್ರತಿನಿಧಿಗಳು ಸಹಕರಿಸಲಿ: ಅಧಿಕಾರಿಗಳ ಜೊತೆ ಜನಪ್ರತಿನಿಧಿಗಳೂ ಸಹಕರಿಸಬೇಕು. ದೇಶದ ಪ್ರಧಾನಿಯಿಂದ ಹಿಡಿದು ಯಾವುದೆ ಸಚಿವರಿಗೂ ಚೆಕ್ ಡ್ರಾ ಮಾಡುವ ಅಧಿಕಾರ ಇಲ್ಲ. ಆದರೆ ಗ್ರಾಪಂ ಅಧ್ಯಕ್ಷರಿಗೆ ಚೆಕ್ ಡ್ರಾ ಮಾಡುವ ಅಧಿಕಾರ ನೀಡಿದೆ. ಇಂತಹ ಅವಕಾಶ ಸಿಕ್ಕಿದಾಗ ಸದ್ಬಳಕೆ ಮಾಡಿಕೊಂಡು ನೀವು ನಿಮ್ಮ ಮನೆಗೆ ನೀರು ಬರದಿದ್ದರೆ ಸುಮ್ಮನಿರುತ್ತೀರಾ. ಯೋಜನೆಗಳ ಅನುಷ್ಠಾನಕ್ಕೆ ನಿಮ್ಮ ಸಕಾರಾತ್ಮಕ ಬೆಂಬಲ ಬೇಕು ಎಂದರು.