ರೈತರಿಗೆ ವೈಜ್ಞಾನಿಕ ಬೆಳೆ ಮಾಹಿತಿ
ಅಂತರಸಂತೆ: ಗ್ರಾಮದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ಭೂ ಚೇತನ ಯೋಜನೆಯಡಿ 2014-15ನೇ ಸಾಲಿನ ಹೈನುಗಾರಿಕೆ ಮತ್ತು ಪ್ರಗತಿಪರ ರೈತರ ಒಂದು ದಿನದ ಕಾರ್ಯಕ್ರಮ ನಡೆಯಿತು.
ಜಲಾನಯನ ಅಭಿವೃದ್ಧಿ ಅಧಿಕಾರಿ ಸಂತೋಷ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಚ್.ಡಿ. ಕೋಟೆ ರೈತರಿಗೆ ಮಣ್ಣು ಮತ್ತು ನೀರಿನ ಬಗ್ಗೆ ಮಾಹಿತಿ ನೀಡಿದರು. ನಾಗನಹಳ್ಳಿಯ ಕೃಷಿ ಸಂಶೋಧನ ಕೇಂದ್ರದ ಪ್ರಾಧ್ಯಾಪಕ ಎಂ.ಶಿವಸ್ವಾಮಿ ಅಂತರಸಂತೆ ಹೋಬಳಿಯಾದ್ಯಂತ ಬೆಳೆಯುತ್ತಿರುವ ಹತ್ತಿ, ಬಾಳೆ, ಮುಸುಕಿನ ಜೋಳ, ರಾಗಿ, ಇವುಗಳ ಬಗ್ಗೆ ಯಾವ ರೀತಿ ವೈಜ್ಞಾನಿಕವಾಗಿ ಬೆಳೆಯುವುದು ಎಂಬುದರ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ಪ್ರಗತಿ ಪರ ರೈತ ಎ.ಎನ್. ನಾಗರಾಜು ಮಾತನಾಡಿ, ಕಳೆದ 10 ವರ್ಷಗಳಿಂದ ಈಗ ಬಿಟಿ ಹತ್ತಿ ತಳಿ ಬದಲಾಗಿ ಸಿಂಗಲ್ ಬಿಟಿ, ಬಿಸಿ.ಎಚ್, ಹತ್ತಿ ಬೀಜ ಉಪಯೋಗಿಸಿ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದೇವೆ ಎಂಬ ಮಾಹಿತಿ ನೀಡಿದರು. ಮಣ್ಣಿನ ಫಲವತ್ತತೆ ಇರುವುದರಿಂದ ಎಚ್.ಡಿ. ಕೋಟೆ ತಾಲೂಕಿನಾದ್ಯಂತ ಹಲವಾರು ಕಡೆ ಮಾಹಿತಿ ನೀಡಿದರೂ ಮುಂದಿನ ಭವಿಷ್ಯವನ್ನು ನೀಡದೆ ಅಲ್ಪ ಹಣಕ್ಕೋಸ್ಕರ ತಮ್ಮ ಜಮೀನುಗಳನ್ನು ಶುಂಠಿ ಬೆಳೆಯಲು ನೀಡಿ ಮಣ್ಣಿನ ಫಲವತ್ತತೆಯು ನಶಿಸಿ ಹೋಗಲು ಕಾರಣಕರ್ತರಾಗಿದ್ದಾರೆ. ಆದ್ದರಿಂದ ಮುಂದಿನ ಭವಿಷ್ಯ ನೋಡಿ ರೈತರು ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು. ತಮ್ಮಲ್ಲಿ ಸಿಗುವ ಸಗಣಿ ಗೊಬ್ಬರವನ್ನು ಕೇರಳಕ್ಕೆ ಮಾರಾಟ ಮಾಡಿ, ತಾವು ರಾಸಾಯನಿಕ ಗೊಬ್ಬರ ಉಪಯೋಗಿಸಿ ಫಲವತ್ತತೆ ನಾಶ ಪಡಿಸಿಕೊಳ್ಳುತ್ತಿದ್ದಾರೆ ಎಂಬುದಾಗಿ ತಿಳಿಸಿದರು.