ಅಕ್ರಮ ಗ್ಯಾಸ್ ರೀಫಿಲ್ಲಿಂಗ್: ಒಬ್ಬ ಸೆರೆ
ಮೈಸೂರು: ನಗರದ ಸಿಸಿಬಿ ಘಟಕದ ಪೊಲೀಸರು ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಿ, ಆರೋಪಿಯೊಬ್ಬನನ್ನು ಬಂಧಿಸಿ ವಿವಿಧ ಕಂಪನಿಯ 15 ಗ್ಯಾಸ್ ಸಿಲಿಂಡರ್‌ಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ಆಲನಹಳ್ಳಿ ಬಡಾವಣೆ ನಿವಾಸಿ ಲೇ. ನಿಂಗೇಗೌಡ ಎಂಬವರ ಪುತ್ರ ಗೋವಿಂದರಾಜು (37) ಬಂಧಿತ ಆರೋಪಿ. ವಿದ್ಯಾನಗರದ ಯರಗನಹಳ್ಳಿ ರಸ್ತೆಯ ಎ.ಜೆ. ಮೆಡಿಕಲ್ಸ್ ಎಂಬ ನಾಮಫಲಕವಿರುವ ಅಂಗಡಿಯಲ್ಲಿ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಆಹಾರ ಇಲಾಖೆಯ ನಿರೀಕ್ಷಕರೊಂದಿಗೆ ಬುಧವಾರ ದಾಳಿ ನಡೆಸಿದ್ದಾರೆ.
ಆರೋಪಿ ಗೋವಿಂದರಾಜುನನ್ನು ಬಂಧಿಸಿ ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಮಾಡಲು ದಾಸ್ತಾನು ಮಾಡಿದ್ದ 15 ವಿವಿಧ ಬಗೆಯ ಗ್ಯಾಸ್ ಸಿಲಿಂಡರ್‌ಗಳು, ಗ್ಯಾಸ್ ರೀಫಿಲ್ಲಿಂಗ್ ರಾಡ್, ತೂಕದ ಯಂತ್ರ, 4,500 ಸೇರಿದಂತೆ ಒಟ್ಟು 40,000 ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಗೋವಿಂದರಾಜು ವಿವಿಧ ಬಗೆಯ ಗ್ಯಾಸ್ ಸಿಲಿಂಡರ್‌ಗಳನ್ನು ದಾಸ್ತಾನು ಮಾಡಿಕೊಂಡು, ಅವಶ್ಯಕತೆಗೆ ಅನುಗುಣವಾಗಿ ಗಿರಾಕಿಗಳಿಗೆ ಅಕ್ರಮವಾಗಿ ಗ್ಯಾಸ್ ರೀಫಿಲ್ಲಿಂಗ್ ಮಾಡುತ್ತಿದ್ದ. ಜೊತೆಗೆ ಸಾರ್ವಜನಿಕರಿಗೆ ಗೊತ್ತಾಗದಂತೆ ಮೆಡಿಕಲ್ಸ್ ಎಂಬ ನಾಮಫಲಕವನ್ನು ಬಳಕೆ ಮಾಡಿಕೊಂಡು ಈ ದಂಧೆ ನಡೆಸುತ್ತಿರುವ ವಿಚಾರ ತಿಳಿದು ಬಂದಿದೆ. ಈ ಸಂಬಂಧ ನಜರ್‌ಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಡಿಸಿಪಿಗಳಾದ ಎ.ಎನ್.ರಾಜಣ್ಣ, ಕಲಾ ಕೃಷ್ಣಸ್ವಾಮಿ, ಸಿಸಿಬಿ ಘಟಕದ ಎಸಿಪಿ ಕೆ.ಎನ್. ಮಾದಯ್ಯ ಅವರ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ಗಳಾದ ಕೆ.ಎನ್. ಯಶವಂತಕುಮಾರ್, ಎಚ್.ಟಿ. ಸುನಿಲ್‌ಕುಮಾರ್, ಆರ್.ಜಗದೀಶ್, ಆಹಾರ ನಿರೀಕ್ಷಕಿ ಸಿ.ಎಸ್. ಶ್ರೀಲಕ್ಷ್ಮಿ ಮತ್ತು ಸಿಬ್ಬಂದಿ ಹಿರಣಯ್ಯ, ಉಮೇಶ್, ರಮೇಶ್, ಮಂಜುನಾಥ್, ರಾಮಚಂದ್ರ ಈ ದಾಳಿ ನಡೆಸಿದ್ದಾರೆ.