ಬಸ್ ನಿಲ್ದಾಣಗಳಿಗೆ 3 ಕೋಟಿ
ಕ.ಪ್ರ.ವಾರ್ತೆ ಕೆ.ಆರ್.ನಗರ ಮೇ 15
ತಾಲೂಕಿನ ಗ್ರಾಮಾಂತರ ಭಾಗಗಳ ವಿವಿಧ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಮತ್ತು ಅಭಿವೃದ್ಧಿಗೆ 3.25 ಕೋಟಿ ಮಂಜೂರಾಗಿದ್ದು, ವರ್ಷಾಂತ್ಯದೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಹೋಬಳಿ ಕೇಂದ್ರವಾದ ಚುಂಚನಕಟ್ಟೆಯಲ್ಲಿ 75 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಬಸ್ ನಿಲ್ದಾಣ ಕಾಮಗಾರಿಗೆ ಗುರುವಾರ ಚಾಲನೆ ನೀಡಿ ಮಾತನಾಡಿದ ಅವರು, ಇಲಾಖೆ ಅಧಿಕಾರಿಗಳು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ ಸಂಚಾರ ಆರಂಭಿಸಿ, ತಾಲೂಕಿನ ಎಲ್ಲ ಗ್ರಾಮಗಳಿಗೂ ಸೇವೆ ನೀಡಿ ಎಂದು ತಿಳಿಸಿದರು.
ಚುಂಚನಕಟ್ಟೆ ನೂತನ ಬಸ್ ನಿಲ್ದಾಣಕ್ಕೆ 75 ಲಕ್ಷ, ಮಿರ್ಲೆ ಬಸ್ ನಿಲ್ದಾಣದ ಸುತ್ತುಗೋಡೆ ಮತ್ತು ಕಾಂಕ್ರಿಟೀಕರಣಕ್ಕೆ ಒಂದು ಕೋಟಿ, ಭೇರ್ಯ ಗ್ರಾಮದಲ್ಲಿ ಬಸ್ ನಿಲ್ದಾಣಕ್ಕೆ ಒಂದು ಕೋಟಿ, ಹೊಸೂರು ಗ್ರಾಮದ ನಿಲ್ದಾಣದ ಕಾಂಕ್ರಿಟೀಕರಣಕ್ಕೆ 50 ಲಕ್ಷ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.
ಸಕ್ಕರೆ ಕಾರ್ಖಾನೆ ಮತ್ತೆ ಆರಂಭ: ಕಳೆದ ಎರಡು ವರ್ಷಗಳಿಂದ ಕಬ್ಬು ಅರೆಯುವ ಕಾರ್ಯ ಸ್ಥಗಿತಗೊಳಿಸಿರುವ ಚುಂಚನಕಟ್ಟೆ ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಪುನರಾರಂಭಿಸಲು ಈಗಾಗಲೇ ಟೆಂಡರ್ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ತಿಂಗಳಾಂತ್ಯದ ವೇಳೆಗೆ ಈ ಪ್ರಕ್ರಿಯೆ ಪೂರ್ಣಗೊಂಡು ಕಾರ್ಖಾನೆ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಗ್ರಾಮಾಂತರ ಭಾಗದ ಹಿರಿಯ ನಿಯಂತ್ರಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ಸಾಲಿಗ್ರಾಮದಿಂದ ಚುಂಚನಕಟ್ಟೆ ಮಾರ್ಗವಾಗಿ ಕೆ.ಆರ್. ನಗರ ಮತ್ತು ಕೆ.ಆರ್.ನಗರದಿಂದ ಹಂಪಾಪುರ ಮಿರ್ಲೆ ಮಾರ್ಗವಾಗಿ ಸಾಲಿಗ್ರಾಮಕ್ಕೆ ಎರಡು ನೂತನ ಬಸ್ ಸಂಚಾರವನ್ನು ಜೂನ್ ಒಂದರಿಂದ ಶಾಸಕರ ಸೂಚನೆಯ ಮೇರೆಗೆ ಆರಂಭಿಸಲಾಗುತ್ತದೆ ಎಂದು ಪ್ರಕಟಿಸಿದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಮಾತನಾಡಿದರು. ತಾಪಂ ಮಾಜಿ ಅಧ್ಯಕ್ಷೆ ಶಶಿಕಲಾ ರಮೇಶ್, ಉಪಾಧ್ಯಕ್ಷೆ ಭಾರತಿ ಮಹದೇವ್, ಮಾಜಿ ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಕುಪ್ಪೆ ಗ್ರಾಪಂ ಅಧ್ಯಕ್ಷ ಸಿ.ವಿ.ಮಂಜುನಾಥ್, ಗುತ್ತಿಗೆದಾರ ವೈ.ಎಸ್. ನಾಗರಾಜು, ಹಳಿಯೂರು ಗ್ರಾಪಂ ಮಾಜಿ ಅಧ್ಯಕ್ಷ ಡಿ.ಆರ್. ಚಂದ್ರೇಗೌಡ, ಹೊಸೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಟಿ. ಕೀರ್ತಿ, ಮಾಜಿ ಅಧ್ಯಕ್ಷ ಎಚ್.ಆರ್. ಮಧುಚಂದ್ರ, ತಾಲೂಕು ಆಶ್ರಯ ಸಮಿತಿ ಮಾಜಿ ಸದಸ್ಯ ಬಿ.ರಮೇಶ್, ಜೆಡಿಎಸ್ ಮುಖಂಡರಾದ ಬಿ.ಜಿ.ಸಂತೋಷ್, ಹಳಿಯೂರು ಕೃಷ್ಣಮೂರ್ತಿ, ಸಿ.ಜಿ.ಮಧು, ಕೆ.ಆರ್. ನಗರ ಘಟಕದ ವ್ಯವಸ್ಥಾಪಕ ಜಿ. ಕೃಷ್ಣಮೂರ್ತಿ ಇದ್ದರು.