ಹಣ ಬಿಡುಗಡೆಗೆ ಮೀನಮೇಷ
ಕ.ಪ್ರ.ವಾರ್ತೆ ಮೈಸೂರು ಮೇ 15
ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೈಗೊಳ್ಳಲು ಪಾಲಿಕೆ ಸದಸ್ಯರು ಮುಂದಾಗಿದ್ದರೂ ಅಧಿಕಾರಿಗಳು ವಿನಾಕಾರಣ ಹಣ ಬಿಡುಗಡೆ ಮಾಡದೆ ಕಾಲ ದೂಡುತ್ತಿದ್ದಾರೆ ಎಂಬ ಆರೋಪ ಪಾಲಿಕೆಯಲ್ಲಿ ಆಡಳಿತ ಸೂತ್ರ ಹಿಡಿದಿರುವ ಜೆಡಿಎಸ್ ಹಾಗೂ ಬಿಜೆಪಿ ಸದಸ್ಯರಿಂದ ವ್ಯಕ್ತವಾಗಿದೆ.
ಎಲ್ಲಾ ಪಕ್ಷದ ಸದಸ್ಯರು ಸಹ ಮಳೆಗಾಲ ಆರಂಭವಾಗುವ ಮುನ್ನವೇ ಅಭಿವೃದ್ಧಿ ಕಾಮಗಾರಿ ಕೈಗೊಂಡು ಮುಗಿಸಲು ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ, ಇಷ್ಟು ದಿನ ಚುನಾವಣೆ ನೆಪ ಹೇಳಿಕೊಂಡು ಅಧಿಕಾರಿಗಳು ಕೈಗೆ ಸಿಗದೆ ಓಡಾಡುತ್ತಿದ್ದಾರೆ. ಕೇಳಿದರೆ ಸಬೂಬು ಹೇಳುತ್ತಿದ್ದಾರೆ. ಖಜಾನೆಯಲ್ಲಿ ಹಣವಿದ್ದರೂ ಬಿಡುಗಡೆ ಮಾಡುತ್ತಿಲ್ಲ ಎಂದು ಗುರುವಾರ ಪಾಲಿಕೆಯ ಮಾಜಿ ಮೇಯರ್ ಸಂದೇಶ್ ಸ್ವಾಮಿ ಅವರು ಪಾಲಿಕೆ ಸದಸ್ಯರಾದ ಶಿವಕುಮಾರ್, ಕೆ.ವಿ. ಮಲ್ಲೇಶ್, ಕೆ.ಟಿ. ಚಲುವೇಗೌಡ, ಮಹದೇವಮ್ಮ, ಮ.ವಿ. ರಾಮಪ್ರಸಾದ, ಆರ್. ಲಿಂಗಪ್ಪ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಅಳಲು ತೋಡಿಕೊಂಡರು. 2012-13ನೇ ಸಾಲಿನಲ್ಲಿ ಸರ್ಕಾರದಿಂದ 91 ಕೋಟಿ ಅನುದಾನ ಬಂದಿದೆ. ಅದರ ಪೈಕಿ 47 ಕೋಟಿ ಖರ್ಚು ಮಾಡಲಾಗಿದೆ. ಉಳಿದ ಹಣ ಖಜಾನೆಯಲ್ಲಿಯೇ ಇದೆ. ನರ್ಮ್ ಹಣವನ್ನು ಖರ್ಚು ಮಾಡಿದ್ದರೂ ಪಾಲಿಕೆ ಸಭೆಯ ಗಮನಕ್ಕೆ ತರದಿರುವುದು ದುರ್ದೈದವ ಸಂಗತಿಯಾಗಿದೆ. ಮುಖ್ಯಮಂತ್ರಿಗಳು ವಿಶೇಷ ಅನುದಾನದಲ್ಲಿ 100 ಕೋಟಿ ನೀಡಿದ್ದಾರೆ. ಅದರಲ್ಲಿ 94 ಕೋಟಿ ಖರ್ಚಾಗಿದೆ. ಉಳಿದ 6 ಕೋಟಿ ಖಜಾನೆಯಲ್ಲಿದೆ. ಪ್ರಸಕ್ತ ಸಾಲಿನಲ್ಲಿ 71 ಕೋಟಿ ಬಿಡುಗಡೆಯಾಗಿ, 33 ಕೋಟಿ ಖರ್ಚಾಗಿದೆ. ಉಳಿದ 39 ಕೋಟಿ ಹಾಗೆ ಇದೆ ಎಂದರು.
ಅಭಿವೃದ್ಧಿಗೆ ತಣ್ಣೀರು: ಮೈಸೂರು ನಗರವನ್ನು ಅಭಿವೃದ್ಧಿ ಮಾಡಬೇಕೆಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅವರ ಕಾಳಜಿಗೆ ಅಧಿಕಾರಿಗಳು ತಣ್ಣೀರು ಎರಚುತ್ತಿದ್ದಾರೆ. ತಮ್ಮ ಉದಾಸೀನದ ಮೂಲಕ ಸಿಎಂ, ಸಚಿವರ ಹೆಸರಿಗೆ ಕಳಂಕ ತರುತ್ತಿದ್ದಾರೆ. ಚುನಾವಣೆ ನೀತಿ ಸಂಹಿತೆ ಮುಗಿದಿದ್ದರೂ, ಅದೇ ಗುಂಗಿನಲ್ಲಿದ್ದಾರೆ. ಯಾವ ವಾರ್ಡಿನಲ್ಲಿಯೂ ಕೆಲಸ ಆಗುತ್ತಿಲ್ಲ. ಇದರಿಂದ ಜನಪ್ರತಿನಿಧಿಗಳಿಗೆ ಜನರು ಶಾಪ ಹಾಕುತ್ತಿದ್ದಾರೆ. ಆದ್ದರಿಂದ ಕೂಡಲೇ ಸಿಎಂ, ಸಚಿವರು ಅಧಿಕಾರಿಗಳಿಗೆ ಮೈಚಳಿ ಬಿಡಿಸಬೇಕಾಗಿದೆ ಎಂದು ಅವರು ಆಗ್ರಹಿಸಿದರು.