ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಹುಲಿ ಚರ್ಮ ಮಾರಾಟ ಯತ್ನ: ಇಬ್ಬರ ಸೆರೆ

Rashmi Kasaragodu
Updated On : 16 May 2014, 1:27 am

ಮೈಸೂರು: ಹಳೆ ಹುಲಿ ಚರ್ಮ ಮಾರಾಟ ಮಾಡಲು ಯತ್ನಿಸಿದ ಹಾಗೂ ಚರ್ಮ ಮಾರಾಟಕ್ಕೆ ನೀಡಿದ್ದ ಇಬ್ಬರು ಆರೋಪಿಗಳನ್ನು ಕೃಷ್ಣರಾಜ ಉಪ ವಿಭಾಗದ ಎಸಿಪಿ ಅಪರಾಧ ಪತ್ತೆ ದಳದ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಜಯನಗರ ನಿವಾಸಿಗಳಾದ ಶಿವಣ್ಣ ಮತ್ತು ಜಗದೀಶ್ ಬಂಧಿತ ಆರೋಪಿಗಳು. ಜಯನಗರದ ಉದ್ಯಾನದಲ್ಲಿ ಹುಲಿ ಚರ್ಮ ಮಾರಾಟ ಯತ್ನ ನಡೆದಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದಾಗ ಶಿವಣ್ಣ ಸಿಕ್ಕಿಬಿದ್ದಿದ್ದಾನೆ. ಈತ ನೀಡಿದ ಮಾಹಿತಿ ಮೇರೆಗೆ ಮತ್ತೊಬ್ಬ ಆರೋಪಿ ಜಗದೀಶ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಪ್ಲಂಬಿಂಗ್, ಪೇಟಿಂಗ್ ಕೆಲಸ ಮಾಡಿಕೊಂಡಿರುವ ಶಿವಣ್ಣ, ಪೇಟಿಂಗ್ ಮಾಡಲೆಂದು ಜಯನಗರ ನಿವಾಸಿ ಜಗದೀಶ್ ಎಂಬವರ ಮನೆಗೆ ಹೋಗಿದ್ದರು. ಈ ವೇಳೆ ಹಳೆಯ ಹುಲಿ ಚರ್ಮವನ್ನು ಶಿವಣ್ಣಗೆ ನೀಡಿ ಮಾರಾಟ ಮಾಡಿ ಹಣಕೊಡುವಂತೆ ಜಗದೀಶ್ ಹೇಳಿದ್ದರು. ಹುಲಿ ಚರ್ಮ ಮಾರಾಟಕ್ಕೆ ಶಿವಣ್ಣ ಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಈ ಸಂಬಂಧ ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆ.ಆರ್. ಉಪ ವಿಭಾಗದ ಎಸಿಪಿ ಬಿ.ಟಿ. ಕವಿತಾ ಮತ್ತು ಸಿಬ್ಬಂದಿ ವೆಂಕಟಪ್ಪನಾಯಕ, ಮಹದೇವು, ಕಾಂತರಾಜು, ಮಂಜುನಾಥ, ನಿರಂಜನ್ ಈ ದಾಳಿ ನಡೆಸಿದ್ದಾರೆ.
ಕೊಲೆ ಶಂಕೆ: ಮರಣೋತ್ತರ ಪರೀಕ್ಷೆ ನಾಳೆ
ಮೈಸೂರು: ಕಳೆದ ಏಪ್ರಿಲ್‌ನಲ್ಲಿ ಮೃತಪಟ್ಟ ವ್ಯಕ್ತಿಯು ಕೊಲೆಯಾಗಿರುವ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಮೇ 17ರ ಬೆಳಗ್ಗೆ 10ಕ್ಕೆ ರಮ್ಮನಹಳ್ಳಿಯಲ್ಲಿ ಶವ ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಯಲಿದೆ ಎಂದು ರಾಜ್ಯ ದ್ರಾವಿಡ ಮಹಾಸಭಾ ಅಧ್ಯಕ್ಷ ಅಶೋಕಪುರಂ ಶ್ರೀನಿವಾಸ್ ತಿಳಿಸಿದ್ದಾರೆ. ಮೈಸೂರು ತಾಲೂಕು ರಮ್ಮನಹಳ್ಳಿ ನಿವಾಸಿ ಮಹದೇವ ಎಂಬವರೆ ಕೊಲೆಯಾದವರು. ಲೋಕಸಭಾ ಚುನಾವಣಾ ಮತದಾನದಂದು ವ್ಯಕ್ತಿಯೊಬ್ಬ ಹಲ್ಲೆ ನಡೆಸಿದ್ದರಿಂದ ಮಹದೇವ ಅಸ್ವಸ್ಥನಾಗಿ, ಏ.20 ರಂದು ಮೃತಪಟ್ಟಿದ್ದರು. ಮಹದೇವ ಕುಟುಂಬದವರು ನ್ಯಾಯ ಕೊಡಿಸುವಂತೆ ಮೈಸೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ರಮ್ಮನಹಳ್ಳಿ ಸ್ಮಶಾನದಲ್ಲಿರುವ ಮಹದೇವ ಶವ ಹೊರತೆಗೆದು ಪೊಲೀಸರು, ವೈದ್ಯರು ಮತ್ತು ತಹಸೀಲ್ದಾರ್ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement