ನರೇಂದ್ರ ಮೋದಿ ಅಲೆ ಸಿದ್ದು ಮನೆ ಮುಂದಿದೆ
ಮೈಸೂರು: ಮೋದಿಯ ಅಲೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯ ಮುಂದೆ ಬಂದು ನಿಂತಿದೆ. ಈಗ ಸಿದ್ದರಾಮಯ್ಯ ಅವರು ಸೋಲಿನ ನೈತಿಕತೆ ಹೊತ್ತು ರಾಜಿನಾಮೆ ನೀಡಲಿ ಎಂದು ಬಿಜೆಪಿ ಮುಖಂಡರಾದ ಮಾಜಿ ಸಚಿವ ಎಸ್.ಎ.ರಾಮದಾಸ್ ಆಗ್ರಹಿಸಿದರು. ನಗರದ ಎಸ್ಜೆಸಿಇ ಮೈದಾನದಲ್ಲಿ ಶುಕ್ರವಾರ ಮತ ಎಣಿಕೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆ ವೇಳೆ ಪಕ್ಷದ ಆಂತರಿಕ ಕಲಹದಿಂದಾಗಿ ಪಕ್ಷಕ್ಕೆ ಹಿನ್ನಡೆ ಆಗಿತ್ತು. ಆದರೆ ಈ ಚುನಾವಣೆ ಕಳೆದ ಚುನಾವಣೆಯ ನೋವನ್ನು ಮರೆಸುವ ಫಲಿತಾಂಶ ತಂದುಕೊಟ್ಟಿದೆ. ರಾಜ್ಯ ಕಾಂಗ್ರೆಸ್ನ ಆಡಳಿತ ವೈಫಲ್ಯ ನಮಗೆ ಅನುಕೂಲವಾಗಿದೆ. ಇದು ಬಿಜೆಪಿಗೆ ಸಕಾರಾತ್ಮಕ ಅಲೆ. ಮೋದಿಯ ನಾಯಕತ್ವ, ದೂರದೃಷ್ಟಿಗೆ, ಮತದಾರ ಆದ್ಯತೆ ನೀಡಿದ್ದಾನೆ ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೋದಿ ಅಲೆ ಇಲ್ಲ ಎನ್ನುತ್ತಿದ್ದರು. ಈಗ ಮೋದಿ ಅಲೆ ಮುಖ್ಯಮಂತ್ರಿಗಳ ಮನೆ ಬಾಗಿಲಿಗೆ ಬಂದಿದೆ ಎಂಬುದನ್ನು ತಿಳಿದುಕೊಳ್ಳಬೇಕು ಎಂದು ಹೇಳಿದರು.