ಇ ಟೆಂಡರ್ ಜಾರಿಯಾಗಲಿ ಪಿ.ಎಂ.ಬಿದ್ದಪ್ಪ ಆಗ್ರಹ
ಮೈಸೂರು: ಕಂಪನಿಗಳಲ್ಲಿ ಯಾವುದೇ ವ್ಯವಹಾರ ನಡೆದರೂ ಪಾರದರ್ಶಕತೆ ಇದ್ದಾಗ ಅವ್ಯವಹಾರಗಳನ್ನು ಆದಷ್ಟು ಮಟ್ಟಿಗೆ ತಡೆಗಟ್ಟಬಹುದು ಎಂದು ಇನ್‌ಸ್ಟಿಟ್ಯೂಟ್ ಆಫ್ ಮೆಟಿರಿಯಲ್ಸ್ ಮ್ಯಾನೇಜ್‌ಮೆಂಟ್‌ನ ರಾಷ್ಟ್ರೀಯ ಕಾರ್ಯದರ್ಶಿ ಪಿ.ಎಂ.ಬಿದ್ದಪ್ಪ ಹೇಳಿದರು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮೆಟಿರಿಯಲ್ಸ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಖರೀದಿ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಖರೀದಿ ಪಾರದರ್ಶಕವಾಗಿರಬೇಕು. ಆಗ ಅವ್ಯವಹಾರಕ್ಕೆ ದಾರಿ ಮಾಡಿಕೊಟ್ಟಂತಾಗುವುದಿಲ್ಲ. ಸಾರ್ವಜನಿಕ ವಲಯದ ಕಂಪನಿಗಳು ಮೋಸ ಮಾಡದೆ ಕಂಪನಿಗಳಿಂದ ವಸ್ತುಗಳನ್ನು ಪಡೆದುಕೊಳ್ಳಬೇಕು. ಇದಕ್ಕೆ ಸಾಂಪ್ರದಾಯಿಕ ಟೆಂಡರ್‌ಗೆ ಅಂತ್ಯ ಹಾಡಿ ಇ- ಟೆಂಡರ್ ಜಾರಿಗೆ ತರಬೇಕು ಎಂದರು. ಐಐಎಂಎಂನ ರಾಷ್ಟ್ರೀಯ ಅಧ್ಯಕ್ಷ ಎಲ್.ಪಿ.ಪಟೇಲ್ ಮಾತನಾಡಿ, ಪಬ್ಲಿಕ್ ಪ್ರಕ್ಯೂರ್‌ಮೆಂಟ್ ಮಸೂದೆಯು ಜಾರಿಗೆ ಬಂದರೆ ಏನೆಲ್ಲಾ ಬದಲಾವಣೆಯಾಗಬಹುದು ಎಂಬುದರ ಬಗ್ಗೆ ವಿವರಿಸಿದರು. ಐಐಎಂಎಂನ ಮೈಸೂರು ಶಾಖೆಯ ಸದಸ್ಯ ಎಲ್.ಆರ್. ಮೀನಾ, ಸಿ. ಸುಬ್ಬಾಕೃಷ್ಣ, ಕೆ.ವಿ. ಸುಧೀಂದ್ರ ಇದ್ದರು.