ನಮ್ಮ 'ಕೈ'ಗಳಿಂದಲೇ ವಿಶ್ವಾಸದ್ರೋಹ
ಕ.ಪ್ರ.ವಾರ್ತೆ ಮೈಸೂರು ಮೇ 17
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೋದಿ, ಬಿಜೆಪಿ, ಪ್ರತಾಪ ಸಿಂಹನ ಅಲೆಯೂ ಇರಲಿಲ್ಲ. ಇದು ಜೆಡಿಎಸ್ ಗೆಲವು ಎಂದು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದಲ್ಲಿ ಜೆಡಿಎಸ್ ಲಜ್ಜೆಗೆಟ್ಟ ರಾಜಕಾರಣ ಮಾಡಿದೆ. ಸ್ವಪಕ್ಷೀಯರು ವಿಶ್ವಾಸ ದ್ರೋಹ ಬಗೆದಿದ್ದಾರೆ ಎಂದು ಕಿಡಿಕಾರಿದರು.
ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರಿಗೆ ತಾವು ಹಾಸನದಲ್ಲಿ ಗೆಲ್ಲುವುದು ಬೇಕಿತ್ತು. ಅದಕ್ಕಾಗಿಯೇ ಸಿ.ಎಚ್.ವಿಜಯಶಂಕರ್ ಅವರನ್ನು ಮೈಸೂರಿನ ಬದಲಿಗೆ ಹಾಸನಕ್ಕೆ ಬಿಜೆಪಿ ಅಭ್ಯರ್ಥಿಯಾಗಿಸಿಕೊಂಡರು. ಜೆಡಿಎಸ್ನವರು ಬಿಜೆಪಿಯವರ ಜೊತೆ ಮದುವೆ ಮಾಡಿಕೊಂಡು ಸರ್ಕಾರ ಮಾಡಿದ್ದು, ಪ್ರತಿ ಚುನಾವಣೆಯಲ್ಲಿಯೂ ಆಂತರಿಕ ಒಪ್ಪಂದ ಮಾಡಿಕೊಳ್ಳುವುದು ಎಲ್ಲರಿಗೂ ಗೊತ್ತು. ಮೈಸೂರಿನಲ್ಲಿ ನನ್ನ ಸೋಲು ದೇವೇಗೌಡರ ಸ್ಕೀಂನ ಒಂದು ಭಾಗ ಎಂದು ಕಟುವಾಗಿ ಟೀಕಿಸಿದರು.
ಪಕ್ಷ ಸೋತರೆ ಮೈಸೂರಿಗೆ ಕಾಲಿಡುವುದಿಲ್ಲ ಎಂದು ದೇವೇಗೌಡರು ಹೇಳಿದ್ದರು. ಈಗ ಬಿಜೆಪಿಯನ್ನು ಗೆಲ್ಲಿಸಿರುವವರು ನಾವೇ ಎಂದು ಹೇಳಿಕೊಂಡು ಬರಬಹುದು ಎಂದು ವಿಶ್ವನಾಥ್ ಗೇಲಿ ಮಾಡಿದರು.
ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗ್ತೀನಿ ಎಂದಿದ್ದ ದೇವೇಗೌಡರು, ಯಾವ ದೇಶದಲ್ಲಿ ಅವರಿಗೆ ಸುರಕ್ಷಿತವೋ ಅಲ್ಲಿ ಹೋಗಿ ನೆಲೆಸಲಿ ಎಂದರು.
ಕಂಡ ಕೈಗಳಿಂದಲೇ ಮೋಸ: ಈ ಚುನಾವಣೆಯಲ್ಲಿ ಕಾಣದ ಕೈಗಳಲ್ಲ, ಕಂಡ ಕೈಗಳೇ ವಿಶ್ವಾಸದ್ರೋಹ ಮಾಡಿವೆ. ಇಂಥವರನ್ನು ಪತ್ತೆ ಹಚ್ಚಿ, ಕ್ರಮ ಜರುಗಿಸಬೇಕು. ಪಕ್ಷವನ್ನು ಕೆಳ ಹಂತದಿಂದ ಸಂಘಟಿಸಬೇಕು ಎಂದು ಪಕ್ಷದ ವರಿಷ್ಠರನ್ನು ಆಗ್ರಹಿಸಿದರು.
ಯಾರು ಯಾರೋ ಬಂದು ಪಕ್ಷವನ್ನು ಕುಲಗೆಡಿಸಿ ಹೋಗಲು ಕಾಂಗ್ರೆಸ್ ಯಾರಪ್ಪನ ಪಾರ್ಟಿಯೂ ಅಲ್ಲ ಎಂದು ಅವರು ಗುಡುಗಿದರು. ಜೆಡಿಎಸ್ನವರು ಬಿಜೆಪಿಗೆ ಮತ ನೀಡಿರುವುದನ್ನು ಪತ್ತೆ ಹಚ್ಚಿರುವ ನಿಮಗೆ ನಿಮ್ಮ ಪಕ್ಷದವರೇ ವಿಶ್ವಾಸದ್ರೋಹ ಮಾಡಿರುವುದು ಕೊನೆತನಕ ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದಾಗ, ಕೆಲವೊಮ್ಮೆ ಕೊಲೆ ಮಾಡಿ, ಆರೋಪಿ ಕೂಡ ಜೊತೆಯಲ್ಲಿಯೇ ಓಡಾಡಿಕೊಂಡಿರುತ್ತಾನೆ ಎಂದ ಅವರು, ಶಾಸಕರು ಯಾರಾದರೂ ಇಂಥ ಕೆಲಸ ಮಾಡಿರುವರೆ ಎಂದಾಗ, ಕ್ಷಮಿಸಿ. ಆ ರೀತಿಯಾಗಿಲ್ಲ ಎಂದರು.
ಮೈಸೂರು ಕ್ಷೇತ್ರ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿರಲಿಲ್ಲ. ಪಕ್ಷದ ಶಾಸಕರು ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿಗಳು ಅವರ ಕೈ ಬಲಪಡಿಸಿದ್ದಾರೆ. ಆದರೂ ಜೆಡಿಎಸ್ ತನ್ನ ಪಾಲಿನ ಮತಗಳನ್ನು ಬಿಜೆಪಿಗೆ ಹಾಕಿಸುವ ಕುತಂತ್ರ ಮಾಡಿದ್ದರಿಂದ ಸೋಲಬೇಕಾಯಿತು ಎಂದರು. ಆದರೂ ತಮಗೆ 4.72 ಲಕ್ಷ ಮತಗಳನ್ನು ನೀಡಿದ ಹಾಗೂ ಇದಕ್ಕಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಅವರು ಹೇಳಿದರು.
ಪಕ್ಷದ ಪುನರ್ ಸಂಘಟನೆ: ನಾನು ಕಳೆದ 40 ವರ್ಷಗಳಿಂದಲೂ ರಾಜಕೀಯದಲ್ಲಿದ್ದೇನೆ. 1977 ರಲ್ಲಿ ಇಂದಿರಾಗಾಂಧಿ ಸೋತಾಗ ಕಾಂಗ್ರೆಸ್ ಕಥೆ ಮುಗಿದೇ ಹೋಯಿತು ಎಂದರು. ಆದರೆ ಮತ್ತೆ ಮತ್ತೆ ತಲೆ ಎದ್ದಿತು. ಈಗಲೂ ಅದೇ ರೀತಿ ಆಗುತ್ತದೆ. ಕಾಂಗ್ರೆಸ್ ಎಂಬುದು ಕಾಯಂ. ಅದನ್ನು ಪುನರ್ ಸಂಘಟಿಸಬೇಕಾಗಿದೆ. ಕೇವಲ ಗಾಂಧಿ ಕುಟುಂಬಕ್ಕೋಸ್ಕರ ಕಾಂಗ್ರೆಸ್ ಇಲ್ಲ.
ದೇಶದ ಸ್ವಾತಂತ್ರ್ಯಕ್ಕಾಗಿ ಗಾಂಧಿ ಕುಟುಂಬ ತ್ಯಾಗ, ಬಲಿದಾನ ಮಾಡಿರುವುದರಿಂದ ಪ್ರಾಮುಖ್ಯತೆ ದೊರೆತಿದೆ ಎಂದು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಕಡಿಮೆ ಸ್ಥಾನ ಪಡೆದಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂಬುದು ಕೇಳಲು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಯಾರು? ಈ ವಿಷಯ ನಮ್ಮ ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ. ಪಕ್ಷದ ಸೋಲಿಗೆ ಸಿದ್ದರಾಮಯ್ಯ ಅವರ ಕಾರಣರಲ್ಲ. ಈ ಫಲಿತಾಂಶ ರಾಜ್ಯ ಸರ್ಕಾರಕ್ಕೆ ಕೊಟ್ಟಿರುವ ಜನಾದೇಶವೂ ಅಲ್ಲ ಎಂದು ವಿಶ್ವನಾಥ್ ಹೇಳಿದರು.
ಸರ್ವಾಧಿಕಾರಿ ಆಗುವ ಆತಂಕ: 1984ರ ನಂತರ ದೇಶದಲ್ಲಿ ಏಕಪಕ್ಷಕ್ಕೆ ಬಹುಮತ ಸಿಕ್ಕಿರಲಿಲ್ಲ. ಸಮ್ಮಿಶ್ರ ಸರ್ಕಾರಗಳು ಆಳ್ವಿಕೆ ನಡೆಸುತ್ತಿದ್ದವು. ಆಗ ಒಳಿತು- ಕೆಡಕುಗಳ ವಿಮರ್ಶೆ ನಡೆಯುತ್ತಿತ್ತು. ಆದರೆ ಈಗ ಏಕಪಕ್ಷಕ್ಕೆ ಬಹುಮತ ಸಿಕ್ಕಿದೆ. ಇದರಿಂದ ಒಳಿತು, ಕೆಡಕು ಎರಡೂ ಇದೆ. ಬಲಪಂಥೀಯ ಧೋರಣೆಯ ನರೇಂದ್ರ ಮೋದಿ ಸರ್ವಾಧಿಕಾರಿಯಾಗಿ ಬದಲಾಗುವ ಆತಂಕವಿದೆ. ಆ ರೀತಿ ಆಗದಿರಲಿ ಎಂಬುದೇ ನನ್ನ ಆಶಯ ಎಂದರು.
ಈಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವುದು ಕಾರ್ಪೊರೇಟ್ ಸಂಸ್ಥೆ, ಮಾಧ್ಯಮಗಳು, ವಾಣಿಜ್ಯ ಮತ್ತು ವ್ಯಾಪಾರೋದ್ಯಮಿಗಳ ಸರ್ಕಾರ. ಬಡವರು ಮತ್ತು ಶೋಷಿತರ ಸರ್ಕಾರ ಅಲ್ಲ ಎಂದು ಪ್ರತಿಪಾದಿಸಿದರು.
ಇದು ಏಕ ನಾಯಕತ್ವದ ಅಲೆಯ ಮೇಲೆ ರಚಿತವಾಗುತ್ತಿರುವ ಸರ್ಕಾರ. ಈ ಸರ್ಕಾರ ಯಾವುದೇ ಕಾರ್ಯಕ್ರಮದ ಆಧಾರದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಇದರಿಂದ 125 ಕೋಟಿ ಜನರಿಗೆ ಒಳಿತಾಗುವುದಿಲ್ಲ ಎಂದರು.