ಮೃಗಾಲಯ ಪ್ರವಾಸಿಗರಿಂದ ಕಿರಿಕಿರಿ
ಕ.ಪ್ರ.ವಾರ್ತೆ ಮೈಸೂರು ಮೇ 17
ಮೈಸೂರು ಮೃಗಾಲಯಕ್ಕೆ ಬರುವ ಪ್ರವಾಸಿಗರ ವಾಹನಗಳನ್ನು ಇಟ್ಟಿಗೆಗೂಡು, ಇಂದಿರಾನಗರ ಬಡಾವಣೆಯ ಮನೆಗಳ ಮುಂದೆ ನಿಲ್ಲಿಸುವುದರಿಂದ ನಿವಾಸಿಗಳು ತೊಂದರೆ ಅನುಭವಿಸುತ್ತಿದ್ದಾರೆ.
ಈ ಸಮಸ್ಯೆ ಇತ್ಯರ್ಥಗೊಳಿಸುವಂತೆ ಶನಿವಾರ ಲಷ್ಕರ್ ಸಂಚಾರ ಪೊಲೀಸ್ ಠಾಣೆಯಲ್ಲಿ ನಡೆದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ನಿವಾಸಿಯೊಬ್ಬರು ಮನವಿ ಮಾಡಿದರು.
ರಾಜ್ಯದ ವಿವಿಧ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರು ವಾಹನಗಳನ್ನು ಮನೆ ಮುಂದೆ ನಿಲ್ಲಿಸುತ್ತಿದ್ದಾರೆ. ಈ ಸಂಬಂಧ ಮೃಗಾಲಯದವರಿಗೆ ದೂರು ನೀಡಿದರೂ ಕ್ರಮ ವಹಿಸಿಲ್ಲ. ಸಂಚಾರ ಪೊಲೀಸರು ರಸ್ತೆಬದಿಯಲ್ಲಿ ವಾಹನ ನಿಲ್ಲಿಸಲು ಬಿಡುತ್ತಿಲ್ಲ. ಹೀಗಾಗಿ ಮನೆಗಳ ಎದುರು ವಾಹನ ನಿಲ್ಲಿಸುತ್ತಿದ್ದಾರೆ. ಹೀಗಾಗಿ ಮೃಗಾಲಯ ಬಳಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆಗೊಳಿಸಿ ನಾಗರಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸುವಂತೆ ಮನವಿ ಮಾಡಿದರು.
ಅದೇ ರೀತಿ ಪುರಭವನ ಬಳಿ ಬಹುಮಹಡಿ ಪಾರ್ಕಿಂಗ್ ವ್ಯವಸ್ಥೆ ಪೂರ್ಣಗೊಳಿಸಿ, ಕೆ.ಆರ್. ವೃತ್ತ, ದೇವರಾಜ ಅರಸು ರಸ್ತೆ, ಸಯ್ಯಾಜಿರಾವ್ ರಸ್ತೆ, ಗಾಂಧಿ ಚೌಕ, ಅಶೋಕ ರಸ್ತೆ ಸುತ್ತಮುತ್ತ ಆಗುತ್ತಿರುವ ವಾಹನ ನಿಲುಗಡೆ ಸಮಸ್ಯೆ ಇತ್ಯರ್ಥಗೊಳಿಸುವ ಸಲಹೆ ಕೇಳಿ ಬಂತು.
ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಒಳಭಾಗದಿಂದ ಆಟೋ ನಿಲುಗಡೆಗೆ ವ್ಯವಸ್ಥೆಗೊಳಿಸಿ, ಬಸ್ ನಿಲ್ದಾಣದ ಮುಂಭಾಗದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ತಪ್ಪಿಸಬೇಕು. ಡಾ.ರಾಜ್‌ಕುಮಾರ್ ರಸ್ತೆಯಲ್ಲಿರುವ ತ್ರಿವೇಣಿ ವೃತ್ತದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವುಗೊಳಿಸಬೇಕು... ಹೀಗೆ ಹಲವಾರು ಸಮಸ್ಯೆಗಳು ಕೇಳಿ ಬಂದವು.
ಈ ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಹರಿಸುವುದಾಗಿ ನಗರ ಅಪರಾಧ ಮತ್ತು ಸಂಚಾರ ಡಿಸಿಪಿ ಕಲಾ ಕೃಷ್ಣಸ್ವಾಮಿ ಭರವಸೆ ನೀಡಿದರು. ದೇವರಾಜ ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ಆರ್. ಸುಶೀಲಾ, ಎಸ್‌ಐಗಳಾದ ಜಯಪ್ರಕಾಶ್, ಬಿ.ಜಿ. ಪ್ರಕಾಶ್, ಭಾಸ್ಕರ್ ಇದ್ದರು.
ವಾಹನ ನಿಲುಗಡೆ: ರಾಮಕೃಷ್ಣ ನಗರ ವೃತ್ತದಲ್ಲಿ ಕಾಮಗಾರಿ ವಿಳಂಬದಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಹೀಗಾಗಿ ಕಾಮಗಾರಿ ಪೂರ್ಣಗೊಳಿಸಿ, ಸಮಸ್ಯೆ ಇತ್ಯರ್ಥಗೊಳಿಸಬೇಕು. ನ್ಯೂ ಕಾಂತರಾಜ್ ಅರಸು ರಸ್ತೆಯಲ್ಲಿ ವಾಹನ ನಿಲುಗಡೆ ಸಮಸ್ಯೆ ಪರಿಹರಿಸಬೇಕು ಎಂದು ಕುವೆಂಪುನಗರ ಸಂಚಾರ ಠಾಣೆಯಲ್ಲಿ ನಡೆದ ಸಭೆಯಲ್ಲಿ ಸಾರ್ವಜನಿಕರು ಕೋರಿದರು. ನಗರ ಸಂಚಾರ ಉಪ ವಿಭಾಗದ ಎಸಿಪಿ ಪ್ರಭಾಕರ ಬಿ.ಬಾರ್ಕಿ, ಕೆ.ಆರ್. ಸಂಚಾರ ಠಾಣೆಯ ಇನ್ಸ್‌ಪೆಕ್ಟರ್ ಹರೀಶ್‌ಕುಮಾರ್ ಇದ್ದರು. ಇನ್ನು ಎನ್.ಆರ್. ಸಂಚಾರ ಠಾಣೆಯಲ್ಲಿ ನಡೆದ ಸಭೆಯಲ್ಲಿ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ, ಇನ್ಸ್‌ಪೆಕ್ಟರ್ ಮೊಹಮ್ಮದ್ ಇರ್ಷಾದ್, ಎಸ್‌ಐ ಕುಮಾರ್, ವಿವಿ ಪುರಂ ಸಂಚಾರ ಠಾಣೆಯಲ್ಲಿ ನಡೆದ ಸಭೆಯಲ್ಲಿ ಎಸ್‌ಐ ಕೃಷ್ಣ ಶೆಟ್ಟಿ, ಕೆ.ಆರ್.ಸಂಚಾರ ಠಾಣೆಯಲ್ಲಿ ನಡೆದ ಸಭೆಯಲ್ಲಿ ಎಸ್‌ಐ ಸತೀಶ್ ಅವರು ಸಾರ್ವಜನಿಕರ ಕುಂದುಕೊರತೆ ಸಭೆ ನಡೆಸಿ, ಸಂಚಾರ ಸಮಸ್ಯೆಗಳನ್ನು ಪರಿಹರಿಸುವ ಭರವಸೆ ನೀಡಿದರು.