ಕಲಿವ ಕನಸಿಗೆ ಬೇಕಿದೆ ನೆರವಿನ ಕೈಗಳು..
ಕ.ಪ್ರ.ವಾರ್ತೆ , ಮೈಸೂರು , ಮೇ 18
ಕೂಲಿ ಮಾಡಿಕೊಂಡೇ ಓದಿ ಉನ್ನತ ಶ್ರೇಣಿಯಲ್ಲಿ ಪಿಯುಸಿ ಪಾಸಾದ. ಆದರೆ ಮನೆಯಲ್ಲಿ ಕಿತ್ತು ತಿನ್ನುವ ಬಡತನದಿಂದಾಗಿ ಓದಿಗೆ ಗುಡ್‌ಬೈ ಹೇಳಿ, ಗಾರೆ ಕೆಲಸ ಮಾಡುತ್ತಿದ್ದಾನೆ. ಯಾರಾದರೂ ಉದ್ಯೋಗ ನೀಡಿದಲ್ಲಿ ಕೆಲಸ ಮಾಡುತ್ತಲೇ ಓದು ಮುಂದುವರೆಸುವ ಆಶಯ ಆತನದು.
ಈತನ ಹೆಸರು ಎನ್. ಶಿವಕುಮಾರ. ಮೈಸೂರಿನ ಡಿ.ಸಾಲುಂಡಿಯ ದೇವಮ್ಮ ಹಾಗೂ ನಂಜಶೆಟ್ಟಿ ಅವರ ಪುತ್ರ. ಹಿಂದುಳಿದ ಮಡಿವಾಳ ಜನಾಂಗಕ್ಕೆ ಸೇರಿದ ನಂಜಶೆಟ್ಟಿ ಅವರಿಗೆ ಮೂವರು ಮಕ್ಕಳು. ಜಮೀನು ಇಲ್ಲ. ಊರಿನಲ್ಲಿ ಇರುವುದು ಆಶ್ರಯ ಮನೆ ಮಾತ್ರ. ಇಡೀ ಕುಟುಂಬಕ್ಕೆ ಕೂಲಿಯೇ ಜೀವನಾಧಾರ. ಪುತ್ರಿಯರಿಬ್ಬರ ವಿವಾಹವಾಗಿದ್ದು ಮನೆ ನಿರ್ಮಾಣ ಹಾಗೂ ಇಬ್ಬರು ಪುತ್ರಿಯರ ವಿವಾಹಕ್ಕೆ ಸುಮಾರು 2.50 ಲಕ್ಷ ರೂ. ಕೈಸಾಲ ಇದೆ. ಇದಕ್ಕೆ ಪ್ರತಿ ತಿಂಗಳು 4,500 ರೂ. ಕಂತು ಕಟ್ಟಬೇಕಾಗಿದೆ. ಜೊತೆಗೆ ಜೀವನ ನಿರ್ವಹಣೆ. ಇದಕ್ಕಾಗಿ ದೇವಮ್ಮ, ನಂಜಶೆಟ್ಟಿ ಹಾಗೂ ಶಿವಕುಮಾರ- ಮೂವರೂ ಕೂಲಿ ಮಾಡುವುದು ಅನಿವಾರ್ಯ.
ತಂದೆ ತಾಯಿಗೆ ವಯಸ್ಸಾಗಿರುವುದರಿಂದ ಶಿವಕುಮಾರ ತರುವ ಕೂಲಿಯೇ ಕುಟುಂಬಕ್ಕೆ ಆಧಾರ.
ಶಿವಕುಮಾರ 1ರಿಂದ 10ನೇ ತರಗತಿವರೆಗೆ ಸರ್ಕಾರಿ ಶಾಲೆಗಳಲ್ಲೇ ಓದಿದ. ಮೈಸೂರಿನ ಮಹಾರಾಜ ಸರ್ಕಾರಿ ಪದವಿಪೂರ್ವ ಕಾಲೇಜು ಕಲಾ ವಿಭಾಗದಲ್ಲಿ ಓದುವಾಗ ಕಾಲೇಜು ಮುಗಿಸಿ, ಮಧ್ಯಾಹ್ನದ ನಂತರ ಕೂಲಿಗೆ ತೆರಳುತ್ತಿದ್ದ. ಕಳೆದ ವರ್ಷ ದ್ವಿತೀಯ ಪಿಯುಸಿಯಲ್ಲಿ ಶೇ.88.8 ಅಂಕ ಪಡೆದ. ನಂತರ ಓದು ಮುಂದುವರಿಸಿದರೆ ಬೆಳಗ್ಗೆಯಿಂದ ಸಂಜೆವರೆಗೆ ಕಾಲೇಜಿಗೆ ಹೋಗಬೇಕಾಗುತ್ತದೆ. ಕೂಲಿಗೆ ಹೊಡೆತ ಬೀಳುತ್ತದೆ ಎಂದು ಓದು ಮುಂದುವರೆಸದೇ ಕೂಲಿಗೆ ಹೋಗತೊಡಗಿದ.
ಗ್ರಾಮದ ಮುಖಂಡ ಮಾಸ್ತಿ ಬಸಪ್ಪ ಅವರು, ಆತನ ಓದಿಗೆ ಬೇಕಾದ ಫೀ, ಪುಸ್ತಕ, ಬಟ್ಟೆ ವ್ಯವಸ್ಥೆ ಮಾಡುವುದಾಗಿ ಹೇಳಿದರೂ ಆತ ಒಪ್ಪಲಿಲ್ಲ. ನಾನು ಓದಲು ಹೋದರೆ ಕೂಲಿ ಸಿಗುವುದಿಲ್ಲ. ಕೂಲಿ ಸಿಗದಿದ್ದಲ್ಲಿ ಸಾಲದ ಕಂತು ಕಟ್ಟಲಾಗುವುದಿಲ್ಲ. ಆದ್ದರಿಂದ ಕಾಲೇಜಿಗೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದ.
ಮೈಸೂರಿನ ಸಿದ್ದಾರ್ಥನಗರದ ಪಕ್ಕದ ಆಲನಹಳ್ಳಿಯಲ್ಲಿ ನಿರ್ಮಾಣ ಹಂತದ ಕಟ್ಟಡದಲ್ಲಿ ಗುರುವಾರ ಗಾರೆ ಕೆಲಸ ಮಾಡುತ್ತಿದ್ದ ಶಿವಕುಮಾರನನ್ನು ಕನ್ನಡಪ್ರಭ ಮಾತನಾಡಿಸಿದಾಗ, ಯಾರಾದರೂ ತಿಂಗಳಿಗೆ ರು. 7 ಸಾವಿರ ವೇತನ ಬರುವ ಕೆಲಸ ನೀಡಿದರೆ ಅದರ ಜೊತೆಗೆ ಓದಲು ಸಿದ್ಧ. ಕೆಲಸವಿಲ್ಲದೇ ಓದಲು ಹೋಗುವುದಿಲ್ಲ ಎನ್ನುತ್ತಾನೆ.
ಅನ್ನಭಾಗ್ಯ ಯೋಜನೆಯಲ್ಲಿ ತಿಂಗಳಿಗೆ 30 ಕೆಜಿ ಅಕ್ಕಿ ಸಿಗುತ್ತಿದೆ. ಆದರೆ ಆದರಿಂದಲೇ ಸಂಸಾರ ನಡೆಯುವುದಿಲ್ಲ. ನನಗೆ ಕೆಲಸ ಬೇಕೇಬೇಕು. ಯಾರಾದರೂ ಕೆಲಸ ನೀಡಿದರೆ ಅಥವಾ ಧನಸಹಾಯ ಮಾಡಿದರೆ ನಮ್ಮ ಕುಟುಂಬವನ್ನು ಸಾಕುವುದರ ಜೊತೆಗೆ ಅಕ್ಕಂದಿರ ಮದುವೆಗೆ ಮಾಡಿರುವ ಸಾಲ ತೀರಿಸುತ್ತೇನೆ. ಮುಂದೆಯೂ ಚೆನ್ನಾಗಿ ಓದುತ್ತೇನೆ ಎನ್ನುತ್ತಾನೆ. ಸಹೃದಯರು ಎನ್. ಶಿವಕುಮಾರ, ಮೊ. 88846 58174 ಸಂಪರ್ಕಿಸಬಹುದು.
--ಅಂಶಿ ಪ್ರಸನ್ನಕುಮಾರ್