ಮನಸು ಅಶ್ಲೀಲಗೊಳಿಸುತ್ತಿರುವ ಸಿನೆಮಾ ಸಾಹಿತ್ಯ: ಎಸ್.ದ್ವಾರಕಿ
ಕ.ಪ್ರ.ವಾರ್ತೆ , ಮೈಸೂರು , ಮೇ 18
ಸಾಹಿತ್ಯ ನಮ್ಮ ಮನಸ್ಸಿನ ಭಾವನೆಯನ್ನು ಮೇಲುಸ್ತರಕ್ಕೆ ಕೊಂಡೊಯ್ಯಬೇಕೆ ಹೊರತು ಕೆಳಸ್ತರಕ್ಕಲ್ಲ ಎಂದು ವಿಶ್ರಾಂತ ಪ್ರಾಧ್ಯಾಪಕ ಎಸ್.ದ್ವಾರಕಿ ಹೇಳಿದರು.
ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ವೆಂಕಟಗಿರಿ ಪ್ರಕಾಶನ ಮತ್ತು ಹಿರಣ್ಮಯಿ ಪ್ರತಿಷ್ಠಾನ ಭಾನುವಾರ ಆಯೋಜಿಸಿದ್ದ ವಸಂತ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು. ಇತ್ತೀಚಿನ ಸಿನೆಮಾ ಸಾಹಿತ್ಯಗಳು ಮನಸ್ಸಿನ ಭಾವನೆ ಅಶ್ಲೀಲಗೊಳಿಸುತ್ತಿವೆ. ಆದರೆ ಸಾಹಿತ್ಯ ಎಂದಿಗೂ ನಮ್ಮ ಮನಸ್ಸಿನ ಭಾವನೆಯನ್ನು ಮೇಲುಸ್ತರಕ್ಕೆ ಕೊಂಡೊಯ್ಯಬೇಕು. ಆದರೆ, ಕೆಳಸ್ತರಕ್ಕಲ್ಲ. ಸಾಹಿತ್ಯ ಸಂತೋಷದ ಜೊತೆಗೆ ಸಂದೇಶ ನೀಡುವಂತಿರಬೇಕು. ಇತ್ತೀಚಿನ ಸಾಹಿತ್ಯದ ವ್ಯಾಕರಣದಲ್ಲಿ ತತ್ಸಮ, ತದ್ಭವದ ಜೊತೆಗೆ ಉದ್ಭವಗಳು ಹೆಚ್ಚುತ್ತಿವೆ. ಉದಾಹರಣೆಗೆ ಡೌವ್‌ಗಳು ಮುಂತಾದ ಪದಬಳಕೆ ಸರಿಯಲ್ಲ ಎಂದರು.
ಪಿ.ಕಾಳಿಂಗರಾವ್ ಅವರನ್ನು ಭಾವಗೀತೆಗಳ ಜನಪ್ರಿಯತೆಯ ಜನಕ ಎಂದು ಕರೆಯಬಹುದು. ಪಿ. ಕಾಳಿಂಗರಾವ್, ಮೈಸೂರು ಅನಂತಸ್ವಾಮಿ ಮತ್ತು ಸಿ.ಅಶ್ವತ್ಥ್ ಅವರು ಭಾವಗೀತೆಗಳ ಲೋಕದಲ್ಲಿ ತ್ರಿಮೂರ್ತಿಗಳಂತೆ. ಇವರ ಕಾರಣದಿಂದ ಭಾವಗೀತೆಗೆ ಹೆಚ್ಚಿನ ಮನ್ನಣೆ ದೊರೆಯುವಂತೆ ಆಯಿತು ಎಂದರು.
ಸಮಾಜ ಸೇವಕ ಕೆ.ರಘುರಾಂ ಅಧ್ಯಕ್ಷತೆ ವಹಿಸಿದ್ದರು. ವೆಂಕಟಗಿರಿ ಚಾರಿಟಬಲ್ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ನೀ. ಗಿರಿಗೌಡ, ಶ್ರೀ ರಾಮಕೃಷ್ಣ ಹೆಗಡೆ ರಾಷ್ಟ್ರೀಯ ಚಿಂತನಾ ವೇದಿಕೆ ಅಧ್ಯಕ್ಷ ಜಿ.ಪ್ರಕಾಶ್ ನೆನಪಿನ ಕಾಣಿಕೆ ನೀಡಿದರು. ಕದಂಬ ಕಲಾಪೀಠದ ಅಧ್ಯಕ್ಷ ಬಿ.ವಿದ್ಯಾಸಾಗರ ಕದಂಬ, ಟಿ.ನರಸೀಪುರ ತಾಲೂಕು ಕಸಾಪ ಅಧ್ಯಕ್ಷ ಆರ್. ನಾಗೇಂದ್ರಕುಮಾರ್ ಇದ್ದರು.