ಮೈ- ಟಿ. ನರಸೀಪುರ ರಸ್ತೆ ವಿಸ್ತರಣೆ
ಕ.ಪ್ರ.ವಾರ್ತೆ , ಟಿ.ನರಸೀಪುರ , ಮೇ 18
ರಾಷ್ಟ್ರೀಯ ಹೆದ್ದಾರಿ 212ರ ಮೈಸೂರು- ಟಿ.ನರಸೀಪುರ ಮುಖ್ಯರಸ್ತೆಯ ಸಂಚಾರ ವ್ಯವಸ್ಥೆಯನ್ನು ಸುಲಲಿತಗೊಳಿಸಲು ಒಂದೂವರೆ ವರ್ಷದೊಳಗೆ ರಸ್ತೆ ವಿಸ್ತರಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಸಂಸದ ಆರ್. ಧ್ರುವನಾರಾಯಣ ಭರವಸೆ ನೀಡಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಯುಪಿಎ ಸರ್ಕಾರದಲ್ಲಿ ಈ ಭಾಗದ ರಾಷ್ಟ್ರೀಯ ಹೆದ್ಧಾರಿಗಳ ಅಭಿವೃದ್ಧಿಗೆ ಯೋಜನೆ ರೂಪಿಸಿ ಚಾಲನೆ ನೀಡಲಾಗಿತ್ತು. ಯೋಜನೆ ವ್ಯಾಪ್ತಿಯಲ್ಲಿ ನರಸೀಪುರ- ಮೈಸೂರು ರಸ್ತೆ ವಿಸ್ತರಣೆ ಸೇರಿದೆ. ಸದ್ಯದಲ್ಲಿಯೇ ಕಾಮಗಾರಿ ಆರಂಭವಾಗಲಿದ್ದು, ಒಂದೂವರೆ ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಕೇಂದ್ರದಿಂದ ಹೆಚ್ಚಿನ ಅನುದಾನವನ್ನು ತರುತ್ತೇನೆ. ಸುಡುವ ಬಿಸಿಲನ್ನೂ ಲೆಕ್ಕಿಸದೇ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಿಷ್ಠೆಯಿಂದ ದುಡಿದಿದ್ದಾರೆ. ಸಿಎಂ ಸಿದ್ದರಾಮಯ್ಯ, ಸಚಿವರಾದ ವಿ.ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ, ಎಚ್.ಎಸ್. ಮಹದೇವಪ್ರಸಾದ್ ಸೇರಿದಂತೆ ಪಕ್ಷದ ಶಾಸಕರು, ಮಾಜಿ ಶಾಸಕರು, ಅನೇಕ ಮುಖಂಡರ ಪರಿಶ್ರಮದಿಂದ ಬಿಜೆಪಿ ಹಾಗೂ ಮೋದಿ ಅಲೆಗೆ ಹಿನ್ನಡೆಯಾಗಿ ಚುನಾವಣೆಯಲ್ಲಿ ಗೆಲ್ಲಲು ಸಹಕಾರಿಯಾಯಿತು ಎಂದು ನುಡಿದರು.
ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಪಕ್ಷಕ್ಕೆ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ತೀವ್ರ ಹಿನ್ನಡೆಯಾಗಿದೆ. ರೈತರು, ಬಡವರು, ದಲಿತರು ಹಾಗೂ ಹಿಂದುಳಿದ ವರ್ಗಗಳ ಹಿತ ಕಾಯುತ್ತಿದ್ದ ಕಾಂಗ್ರೆಸ್‌ಗೆ ಸೋಲುಂಟಾಗಿರುವುದು ನಿಜಕ್ಕೂ ವಿಷಾದಕರ. ಈ ಭಾಗದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಸಿಎಂ, ಸಚಿವರ ಹಾಗೂ ಸ್ಥಳೀಯ ಶಾಸಕರ ಸಮ್ಮುಖದಲ್ಲಿಯೇ ಬೃಹತ್ ಸಭೆಯೊಂದನ್ನು ಆಯೋಜಿಸಲಾಗುವುದು ಎಂದು ಅವರು ತಿಳಿಸಿದರು.
ಜಿಲ್ಲಾ ಎಸ್ಟಿ ಕಾಂಗ್ರೆಸ್ ಅಧ್ಯಕ್ಷ ಹೊನ್ನನಾಯಕ, ಆಲಗೂಡು ನಾಗರಾಜು, ಎಪಿಎಂಸಿ ಅಧ್ಯಕ್ಷ ಎಂ. ರಾಜು, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಆಲಗೂಡು ಶಿವಕುಮಾರ್, ಕಿರಗಸೂರು ಗ್ರಾಪಂ ಅಧ್ಯಕ್ಷ ದೇವರಸನಾಯಕ, ಗುತ್ತಿಗೆದಾರರಾದ ಹೊಸಪುರ ಕೆ.ಮಲ್ಲು, ಮಂಟೇಲಿಂಗಪ್ಪ ಇದ್ದರು.