ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಮೋದಿ ವಿನಾಶಕಾರಿ ಎಂಬುದು ಬಿಜೆಪಿಗೂ ಗೊತ್ತು: ಹುಳಿಯಾರ್

Vishwanath S
Updated On : 19 May 2014, 12:48 pm

ಕ.ಪ್ರ.ವಾರ್ತೆ ,  ಮೈಸೂರು ,  ಮೇ 18
ನರೇಂದ್ರ ಮೋದಿ ಎಂತಹ ವಿನಾಶಕಾರಿ ಎಂಬುದು ಸ್ವತಃ ಬಿಜೆಪಿಗೆ ಗೊತ್ತಿದೆ. ಬಲಪಂಥೀಯ ಚಿಂತನೆಯುಳ್ಳವರು ಹಾಗೂ ಎಲ್.ಕೆ. ಆಡ್ವಾಣಿಗೂ ಗೊತ್ತಿದೆ ಎಂದು ಸಾಹಿತಿ ಡಾ.ನಟರಾಜ್ ಹುಳಿಯಾರ್ ಮಾರ್ಮಿಕವಾಗಿ ನುಡಿದರು.
ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಹಾಗೂ ರಂಗವಲ್ಲಿ ತಂಡವು ಭಾನುವಾರ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಿದ್ದ ಇಂತಿ ನಮಸ್ಕಾರಗಳು ಪುಸ್ತಕದ ಓದು ಮತ್ತು ಲೇಖಕರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಬ್ಬ ವ್ಯಕ್ತಿ ತನ್ನ ವಾಚಾಳಿತನದಿಂದ ಇಡಿ ದೇಶ ಸುತ್ತಿ ಪಕ್ಷ ಗೆಲ್ಲಿಸುತ್ತಿದ್ದಾನೆ ಎಂಬುದು ಮಾಧ್ಯಮದ ಬುದ್ಧಿಜೀವಿಗಳಿಗೆ ಯಾಕೆ ಕೆಟ್ಟದ್ದಾಗಿ ಕಾಣಲಿಲ್ಲ ಎಂದು ಪ್ರಶ್ನಿಸಿದರು.
ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಪಿ.ಲಂಕೇಶ್ ಹಾಗೂ ಡಿ.ಆರ್. ನಾಗರಾಜ್ ಅವರ ಸಿದ್ಧಾಂತಗಳನ್ನು ಅನ್ವಯಿಸಿ ನೋಡಬೇಕಾದ ಕಾಲ ಬಂದಿದೆ. ಸಣ್ಣ ಪಕ್ಷಗಳು ಒಟ್ಟಾಗಿ ರಾಜಕೀಯ ಮಾಡಬೇಕಾದ ಸಂದಿಗ್ಧತೆ ನಮಗೆ ಅನಿವಾರ್ಯವಾಗಿದೆ. ಕಾರ್ಪೊರೇಟ್ ವಲಯಗಳು, ಬಂಡವಾಳ ಶಾಹಿಗಳು ಮತ್ತು ಮಾಧ್ಯಮಗಳ ನಡೆಯನ್ನು ಎಚ್ಚರಿಕೆಯಿಂದ ನೋಡಬೇಕು ಎಂದು ತಿಳಿಸಿದರು.
ಜಾನಪದ ವಿದ್ವಾಂಸ ಪ್ರೊ.ಕಾಳೇಗೌಡ ನಾಗವಾರ ಅಧ್ಯಕ್ಷತೆ ವಹಿಸಿದ್ದರು. ಪುಸ್ತಕ ಕುರಿತು ನಾರಾಯಣ್ ಕೆ. ಕ್ಯಾಸಂಬಳ್ಳಿ, ಎಚ್.ಕಾವ್ಯಶ್ರೀ, ಚರಿತಾ, ರವಿಚಂದ್ರ, ಚಿಕ್ಕೆಂಪಿಹುಂಡಿ, ಶಿವಕುಮಾರ ಕಾರೆಪುರ ಮಾತನಾಡಿದರು. ಉಪನ್ಯಾಸಕ ತಿಮ್ಮರಾಜು ಮಾತನಾಡಿದರು.
ಪಿ. ಲಂಕೇಶರು ತಬ್ಬಲಿ ಸಮಾಜ, ಭಯಭೀತಗೊಂಡ ಶೋಷಿತರ ಬಗ್ಗೆ ಕಾಳಜಿ ಇಟ್ಟುಕೊಂಡಿದ್ದರು. ಅವರ ಚಿಂತನೆಗಳನ್ನು ನಟರಾಜ್ ಹುಳಿಯಾರ್ ಅವರು ತಮ್ಮ ಇಂತಿ ನಮಸ್ಕಾರಗಳು ಎಂಬ ಕಥಾನಕದಲ್ಲಿ ಬಹಳ ಚೆನ್ನಾಗಿ ವಿವರಿಸಿದ್ದಾರೆ.
    ಕೆ. ಕ್ಯಾಸಂಬಳ್ಳಿ, ಚಿಂತಕ
ಲಂಕೇಶ್ ಹಾಗೂ ಡಿ.ಆರ್ ನಾಗರಾಜ್ ಅವರ ಚಿಂತನೆಗಳು ಎಂದಿಗೂ ಅಪ್ರಸ್ತುತವಲ್ಲ. ಅವರಲ್ಲಿನ ವಿಚಾರಗಳು ನಮ್ಮೊಳಗಿನ ಆಳಕ್ಕೆ ಹೋಗುತ್ತವೆ. ಆದರೆ, ಮಾಧ್ಯಮ ವೇದಿಕೆಯ ಕೊರತೆಯಿಂದ ಅವರು ಹೆಚ್ಚು ಜನಕ್ಕೆ ತಲುಪಲಿಲ್ಲ.
   ಎಚ್. ಕಾವ್ಯ, ಚಿಂತಕಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement