ಸರ್ಕಾರದಿಂದ ಭಗೀರಥ ಜಯಂತಿ ಆಚರಿಸಿ
ಕ.ಪ್ರ.ವಾರ್ತೆ , ಮೈಸೂರು , ಮೇ 18
ಕಳೆದ ವರ್ಷ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರದ ವತಿಯಿಂದ ಭಗೀರಥ ಜಯಂತಿ ಆಚರಿಸಲಾಗುವುದು ಎಂಬ ಬೇಡಿಕೆ ಇನ್ನೂ ಈಡೇರಿಸಿಲ್ಲ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ನೂರೊಂದು ಶೆಟ್ಟಿ ಹೇಳಿದರು.
ಮೈಸೂರು ಜಿಲ್ಲಾ ಉಪ್ಪಾರ ನೌಕರ ಹಾಗೂ ವೃತ್ತಿಪರ ಸಂಘದಿಂದ ಭಾನುವಾರ ಸಹಕಾರ ಭವನ ಏರ್ಪಡಿಸಿದ್ದ ಭಗೀರಥ ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯಾದ್ಯಂತ ಇರುವ ಉಪ್ಪಾರ ಸಮಾಜದವರು ತಮ್ಮ ಕುಲದೈವ ಭಗೀರಥ ಜಯಂತಿಯನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ವಿವಿಧ ದಿನದಂದು ಆಚರಿಸುತ್ತಿದ್ದಾರೆ. ಆದರೆ, ಮೇ 6 ರಂದೇ ಭಗೀರಥ ಜಯಂತಿ ಆಚರಣೆಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಉಪ್ಪಾರ ಸಮಾಜದವರು ಅಧಿಕ ಸಂಖ್ಯೆಯಲ್ಲಿದ್ದರು ಸಹ ಕನಿಷ್ಠ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿಯುವಂತಾಗಿದೆ. ಮೇಲ್ಜಾತಿಯವರು ಉಪ್ಪಾರರನ್ನು ಕೀಳಾಗಿ ಕಾಣುವ ಪ್ರವೃತ್ತಿ ಜೀವಂತವಾಗಿದೆ. ಅದನ್ನು ಹೋಗಲಾಡಿಸುವ ಸಾಧನವೆಂದರೆ ಶಿಕ್ಷಣ. ಸಮಾಜದ ಪ್ರತಿಯೊಬ್ಬರು ಶಿಕ್ಷಿತರಾಗಿ ಸಮಾಜವನ್ನು ಉನ್ನತಿಯತ್ತ ಕೊಂಡೊಯ್ಯಬೇಕು. ಎಲ್ಲೆಡೆ ಸಮಾನತೆ ನೆಲೆಸಬೇಕು ಎಂದು ಆಶಿಸಿದರು.
ಇದೇ ವೇಳೆ ಲ್ಯಾಂಪ್ಸ್ ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಶಿವಕುಮಾರಸ್ವಾಮಿ ಹಾಗೂ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಅವರನ್ನು ಸನ್ಮಾನಿಸಲಾಯಿತು.
ಸರಗೂರು ಅಯ್ಯನ ಮಠದ ಶ್ರೀ ಚಿನ್ನಸ್ವಾಮೀಜಿ, ವಾಣಿಜ್ಯ ಮತ್ತು ತೆರಿಗೆ ಇಲಾಖೆ ಅಧಿಕಾರಿ ಡಿ.ಜಗನಾಥ್, ಸಂಘದ ಅಧ್ಯಕ್ಷ ಲಿಂಗಣ್ಣ, ರಾಜ್ಯ ಯುವ ವೇದಿಕೆ ಅಧ್ಯಕ್ಷ ಕೆ.ಸೋಮಶೇಖರ್, ಮೈ- ಚಾ. ಜಿಲ್ಲಾ ಉಪ್ಪಾರ ಸಂಘದ ಕಾರ್ಯದರ್ಶಿ ವಿಷಕಂಠಯ್ಯ ಇದ್ದರು.
ಅನುಭವಕ್ಕೆ ಬೆಲೆ ಕೊಡುವುದೇ ವೇದ
ಕ.ಪ್ರ.ವಾರ್ತೆ , ಮೈಸೂರು , ಮೇ 18
ಲೌಕಿಕ ಜೀವನದಲ್ಲಿ ಶಾಸ್ತ್ರಕ್ಕಿಂತ ಅನುಭವಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಅನುಭವಕ್ಕೆ ಬೆಲೆ ಕೊಡುವುದೇ ನಿಜವಾದ ವೇದ ಎಂದು ಶತಾವಧಾನಿ ಡಾ.ರಾ.ಗಣೇಶ್ ಅಭಿಪ್ರಾಯಪಟ್ಟರು.
ಸರಸ್ವತಿಪುರಂನ ಡಾ.ಎಸ್. ರಾಧಾಕೃಷ್ಣನ್ ಭವನದಲ್ಲಿ ಭಾನುವಾರ ನಡೆದ ಅದ್ವೈತ ವೇದಾಂತ ತತ್ವ ಮತ್ತು ಅನ್ವಯ ವಿಷಯ ಕುರಿತು ಮಾತನಾಡಿದ ಅವರು, ಅನುಭವಕ್ಕಿಂತ ದೊಡ್ಡದು ಮತ್ಯಾವುದು ಇಲ್ಲ. ನಿಜವಾದ ವೇದ ಎಂಬುದು ನಮ್ಮ ಅಂತಃಕರಣದಲ್ಲಿ ಅಡಗಿದೆಯೇ ಹೊರತು ಹೊರಗಿನಿಂದ ಬರುವುದಿಲ್ಲ ಎಂದರು.
ತತ್ವಶಾಸ್ತ್ರ ಬೋಧಿಸುತ್ತಿದ್ದ ರಾಧಾಕೃಷ್ಣನ್ ಅವರು ಅದ್ವೈತ ಸಿದ್ಧಾಂತದ ಬಗ್ಗೆ ಸಂಶೋಧನೆ ನಡೆಸಿದ್ದಾರೆ. ಬೌದ್ಧ ದರ್ಶನಕ್ಕೂ ಶಂಕರಾಚಾರ್ಯರ ಅದ್ವೈತ ಸಿದ್ಧಾಂತಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಬುದ್ಧನ ತಾರ್ಕಿಕ ಯುಕ್ತಿಗಳನ್ನು ಶಂಕರರು ತಮ್ಮ ಸಾಧನೆಗೆ ಬಳಸಿಕೊಂಡಿದ್ದಾರೆ. ಶಂಕರರ ಅದ್ವೈತ ಸಿದ್ಧಾಂತವು ಉಪನಿಷತ್ತು, ಬ್ರಹ್ಮ ಸೂತ್ರಗಳ ಆಧಾರ ಮಾರ್ಗವನ್ನು ದೃಢವಾಗಿ ಅನುಸರಿಸಿದೆ ಎಂದರು.
ಮಹಾರಾಜ ಕಾಲೇಜಿನ ವಿಶ್ರಾಂತ ತತ್ವಶಾಸ್ತ್ರ ಪ್ರಾಧ್ಯಾಪಕ ಪ್ರೊ.ಬಿ. ಕೃಷ್ಣ, ಮೈಸೂರು ವಿವಿಯ ಗ್ರಂಥಪಾಲಕ ಡಾ.ಸಿ.ಪಿ. ರಾಮಶೇಷ್, ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಪ್ರೊ.ಜಿ. ಹೇಮಂತ್ಕುಮಾರ್ ಇದ್ದರು.
ಎಸ್ಎಕೆ ಮತ್ತು ಡಿವೈಇಎಸ್ಗೆ ಜಯ
ಮೈಸೂರು: ಎಲ್.ಆರ್. ಲೋಕೇಶ್ ಬಾರಿಸಿದ ಅಜೇಯ ಶತಕದ ನೆರವಿನಿಂದ ಮೈಸೂರಿನ ಎಸ್ಎಕೆ ಮತ್ತು ಡಿವೈಇಎಸ್ ತಂಡವು, ಬೆಂಗಳೂರಿನ ಸಂತ ಜೋಸೆಫರ ಪ್ರೌಢಶಾಲೆ ತಂಡವನ್ನು 6 ವಿಕೆಟ್ಗಳಿಂದ ಮಣಿಸಿದೆ.
ಬೆಂಗಳೂರಿನಲ್ಲಿ ಪ್ಯಾಂಥರ್ಸ್ ಕ್ರಿಕೆಟ್ ಅಕಾಡೆಮಿಯು ಆಯೋಜಿಸಿರುವ 14 ವರ್ಷದೊಳಗಿನ ಬಾಲಕರ ಅಂತರ ಕ್ರಿಕೆಟ್ ಅಕಾಡೆಮಿಯ ಲೀಗ್ ಕಮ್ ನಾಕೌಟ್ನ ಸೇವ್ ಟೈಗರ್ ಕಪ್- 2014 ಕ್ರಿಕೆಟ್ ಪಂದ್ಯಾವಳಿಯಲ್ಲಿ ಮೊದಲ ಬ್ಯಾಟ್ ಮಾಡಿದ ಸಂತ ಜೋಸೆಫರ್ ಶಾಲಾ ತಂಡವು 30 ಓವರ್ಗೆ 4 ವಿಕೆಟ್ ಕಳೆದುಕೊಂಡು 210 ರನ್ಗಳಿಸಿತು. ತಂಡದ ಪರ ವಿಶಾಲ್ 67, ಅಮೀರ್ 30 ಮತ್ತು ಕ್ರಿಸ್ಟಿನ್ 35 ರನ್ ಗಳಿಸಿದರು.
ಇದಕ್ಕೆ ಪ್ರತಿಯಾಗಿ ಮೈಸೂರಿನ ಎಸ್ಎಕೆ ಮತ್ತು ಡಿವೈಇಎಸ್ ತಂಡವು 28.3 ಓವರ್ಗೆ 211 ರನ್ಗಳಿಸಿತು. ತಂಡದ ಪರ ಎಲ್.ಆರ್. ಲೋಕೇಶ್ ಅಜೇಯ 113 ರನ್ ಗಳಿಸಿದರು. ಇವರಿಗೆ ಗೌತಮ್ ಎ. ಚೌದರಿ(32) ಮತ್ತು ಜೆ. ಸುಚಿತ್(24) ಸಾಥ್ ನೀಡಿದರು.
ಅಜೇಯ ಶತಕ ಗಳಿಸಿದ ಎಲ್.ಆರ್. ಲೋಕೇಶ್ಗೆ ಟೈಗರ್ ಆಫ್ ದಿ ಮ್ಯಾಚ್ ನೀಡಲಾಯಿತು.
ಸ್ವಾತಂತ್ರ್ಯ ಹೋರಾಟಗಾರರ ರಕ್ತ ತಪಾಸಣೆ ಶಿಬಿರ
ಮೈಸೂರು: ನಗರದ ಸುಬ್ಬರಾಯನೆಕೆರೆ ಸ್ವಾತಂತ್ರ್ಯ ಹೋರಾಟಗಾರರ ಸ್ಮಾರಕ ಭವನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಮತ್ತು ಕುಟುಂಬದವರಿಗಾಗಿ ಭಾನುವಾರ ರಕ್ತ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.
ಮೈಸೂರು ಜಿಲ್ಲಾ- ನಗರ ಸ್ವಾತಂತ್ರ್ಯ ಹೋರಾಟಗಾರರ ಸಂಘವು ಆರೋಗ್ಯ ಭಾರತಿ ಸಂಸ್ಥೆ ಮತ್ತು ಕೆ.ಆರ್. ಆಸ್ಪತ್ರೆ ಸಹಯೋಗದಲ್ಲಿ ನಡೆದ ಈ ಶಿಬಿರವನ್ನು ಕೆ.ಆರ್.ಆಸ್ಪತ್ರೆ ನಿರ್ದೇಶಕ ಡಾ.ಬಿ. ಕೃಷ್ಣಮೂರ್ತಿ ಉದ್ಘಾಟಿಸಿದರು. ಸ್ವಾತಂತ್ರ್ಯ ಹೋರಾಟಗಾರರು ಮತ್ತು ಅವರ ಕುಟುಂಬದವರ ರಕ್ತದ ಗುಂಪು, ಹಿಮೊಗ್ಲೋಬಿನ್, ರಕ್ತದಲ್ಲಿ ಸಕ್ಕರೆ ಅಂಶ ಸೇರಿದಂತೆ ವಿವಿಧ ಅಂಶಗಳನ್ನು ವೈದ್ಯರು ಪರಿಶೀಲಿಸಿದರು.
ಸ್ವಾತಂತ್ರ್ಯ ಹೋರಾಟಗಾರರ ಸಂಘದ ಅಧ್ಯಕ್ಷ ಡಿ.ಎಸ್.ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಭಾರತಿ ಸಂಚಾಲಕ ಡಾ.ಎ.ಎಸ್. ಚಂದ್ರಶೇಖರ್, ಸಂಘದ ಕಾರ್ಯಾಧ್ಯಕ್ಷ ಡಾ.ಎಂ.ಜಿ. ಕೃಷ್ಣಮೂರ್ತಿ, ಕಾರ್ಯದರ್ಶಿ ಎಂ.ಆರ್. ರಾಮಶೇಷು, ಸಂಚಾಲಕ ಬಿ. ಕರುಣಾಕರನ್ ಇದ್ದರು.
ಎಂಆರ್ಎ ಟ್ರೋಫಿ ಕ್ರಿಕೆಟ್ಗೆ ಚಂದ್ರಶೇಖರ್ ಚಾಲನೆ
ಮೈಸೂರು: ಮೈಸೂರು ರಿಲೇಟರ್ಸ್ ಅಸೋಸಿಯೇಷನ್ ಆಯೋಜಿಸಿರುವ ಎಂಆರ್ಎ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಗೆ ಭಾರತದ ಮಾಜಿ ಕ್ರಿಕೆಟಿಗ ಬಿ.ಎಸ್.ಚಂದ್ರಶೇಖರ್ ಭಾನುವಾರ ಚಾಲನೆ ನೀಡಿದರು.
ಮಾನಸ ಗಂಗೋತ್ರಿಯ ಕಾಫಿ ಬೋರ್ಡ್ ಮೈದಾನದಲ್ಲಿ ಆಯೋಜಿಸಿರುವ ಈ ಕ್ರಿಕೆಟ್ ಪಂದ್ಯಾವಳಿಗೆ ಬೌಲಿಂಗ್ ಮಾಡುವ ಮೂಲಕ ಚಾಲನೆ ನೀಡಿದ ಅವರು, ಪ್ರತಿಯೊಬ್ಬರೂ ಕ್ರೀಡಾ ಮನೋಭಾವನೆಯಿಂದ ಸ್ಪರ್ಧಿಸಬೇಕು.
ಎಲ್ಲಾ ತಂಡಗಳು ಜಯಗಳಿಸಲು ಸಾಧ್ಯವಿಲ್ಲ. ಈ ಬಾರಿಯ ಸೋಲು, ಮುಂದಿನ ಪಂದ್ಯದ ಗೆಲುವಾಗಬಹುದು. ಆದ್ದರಿಂದ ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸಿ ಎಂದರು. ಉದ್ಘಾಟನೆಗೂ ಮುನ್ನ ನಡೆದ ಒಂದು ಪಂದ್ಯಾವಳಿಯಲ್ಲಿ ಇನ್ಫೋಸಿಸ್ ವಿರುದ್ಧ ಎಚ್ಜಿಎಸ್, ಮೆಡ್ ಸಾಫ್ಟ್ ವಿರುದ್ಧ ಎಸ್ಪಿಐ, ಎಚ್ಜಿಎಸ್ ವಿರುದ್ಧ ನೆಸ್ಲೆ ತಂಡ ಜಯಗಳಿಸಿತು. ಸಂಘದ ಅಧ್ಯಕ್ಷ ಡಿ.ಕೆ.ಸುರೇಶ್, ಉಪಾಧ್ಯಕ್ಷ ಜಯದೇವ್, ಕಾರ್ಯದರ್ಶಿ ಆದಿಶ್ ಸಾಗರ್, ಖಜಾಂಚಿ ಮಧು ಇದ್ದರು.
ರಂಗ ಶಿಕ್ಷಣ ನೀಡುವುದು ಅಭಿನಂದನಾರ್ಹ
ಕ.ಪ್ರ.ವಾರ್ತೆ , ಹುಣಸೂರು , ಮೇ 18
ಟ್ಯಾಲೆಂಟ್ ವಿದ್ಯಾಸಂಸ್ಥೆ ಶಿಕ್ಷಣದ ಜೊತೆ-ಜೊತೆಗೆ ರಂಗ ಶಿಕ್ಷಣ, ಬದುಕಿನ ಶಿಕ್ಷಣ ನೀಡುತ್ತಿರುವುದು ಅಭಿನಂದನಾರ್ಹ ಎಂದು ರಂಗಾಯಣ ಕಲಾವಿದ ಮೈಮ್ ರಮೇಶ್ ಪ್ರಶಂಸಿಸಿದರು.
ಪಟ್ಟಣದ ಟ್ಯಾಲೆಂಟ್ ಸಂಸ್ಥೆ ಪ್ರತಿಭಾ ವನರಂಗ ವೇದಿಕೆಯಲ್ಲಿ ಆಯೋಜಿಸಿದ್ದ ನಾಟಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮೈಸೂರು, ಬೆಂಗಳೂರು ಸೇರಿದಂತೆ ಹಲವೆಡೆ ಮಾತ್ರ ಬಯಲು ರಂಗ ಮಂದಿರಗಳಿದ್ದು, ಅಲ್ಲಿ ಪ್ರತಿ ವರ್ಷ ಬಹುರೂಪಿ ಹಾಗೂ ಇತರೆ ಹೆಸರಿನಲ್ಲಿ ನಾಟಕೋತ್ಸವ ನಡೆಯುತ್ತದೆ.
ರಂಗಾಸಕ್ತರು ಸಾಕಷ್ಟು ಮಂದಿ ಇದ್ದಾರೆ. ಆದರೆ ತಾಲೂಕು ಮಟ್ಟದಲ್ಲಿ ಇಂತಹ ರಂಗಾಯಣ ಮಾದರಿಯಲ್ಲೇ ವನರಂಗ ನಿರ್ಮಿಸಿ ರಂಗಶಿಕ್ಷಣದತ್ತ ಮಕ್ಕಳು, ಯುವಕರನ್ನು ಹಾಗೂ ನಾಟಕ ಆಸಕ್ತರನ್ನು ತನ್ನತ್ತ ಸೆಳೆಯುವಂತೆ ಲಕ್ಷಾಂತರ ರು. ವ್ಯಯ ಮಾಡಿ ರಂಗವೇದಿಕೆ ನಿರ್ಮಿಸುವ ಮೂಲಕ ಟ್ಯಾಲೆಂಟ್ ವಿದ್ಯಾಸಂಸ್ಥೆ ಶಿಕ್ಷಣದ ಜೊತೆ ಜೊತೆಗೆ ರಂಗ ಶಿಕ್ಷಣ, ಬದುಕಿನ ಶಿಕ್ಷಣ ನೀಡುತ್ತಿರುವುದು ಅಭಿನಂದನಾರ್ಹ ಎಂದರು.
ಸಂಸ್ಥೆ ಮುಖ್ಯಸ್ಥ ನವೀನ್ ರೈ ಮಾತನಾಡಿದರು. ಉದ್ಯಮಿ ಎಚ್.ಪಿ.ಅಮರನಾಥ್, ಸಂಸ್ಥೆ ಅಧ್ಯಕ್ಷ ನಾರಾಯಣ ರೈ, ಕೃಷ್ಣಮೂರ್ತಿ, ರವಿ, ಮಂಜುನಾಥ್, ರಂಗಾಸಕ್ತರಾದ ಆನಂದ್, ಕಸಾಪ ಮಾಜಿ ಅಧ್ಯಕ್ಷ ಜಯರಾಂ, ರಾಜು, ರವಿ ಇದ್ದರು.
ಭಾರಿ ಮಳೆ- ಗಾಳಿಗೆ ಅಪಾರ ಆಸ್ತಿ ನಷ್ಟ
ಕ.ಪ್ರ. ವಾರ್ತೆ, ಹುಣಸೂರು, ಮೇ 18
ತಾಲೂಕಿನ ಹನಗೋಡು, ಬಿ.ಆರ್. ಕಾವಲ್, ಹರಿನಹಳ್ಳಿ, ಬೀರತಮ್ಮನಹಳ್ಳಿ ಗ್ರಾಮಗಳು ಸೇರಿದಂತೆ ಹಲವು ಗ್ರಾಮಗಳಲ್ಲಿ ಶನಿವಾರ ರಾತ್ರಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಸಾಕಷ್ಟು ಹಾನಿಯಾಗಿದೆ.
ತಾಲೂಕಿನ ಹನಗೋಡು ಹೋಬಳಿಯ ಹರೀನಹಳ್ಳಿ ಗೇಟ್ನಲ್ಲಿ ಬೀಸಿದ ಬಿರುಗಾಳಿಗೆ ಸಿಲುಕಿ ಮಹದೇವಮ್ಮ, ಪುಟ್ಟಸ್ವಾಮಪ್ಪ, ಸೋಮಣ್ಣ ಅವರಿಗೆ ಸೇರಿದ ಮನೆಗಳ ಕಲ್ನಾರ್ ಶೀಟ್ ಹಾಗೂ ಸಾವಿತ್ರಮ್ಮ, ಮಂಜುನಾಥ್ಗೆ ಸೇರಿದ ಮನೆ ಹೆಂಚುಗಳು ಹಾರಿಹೋಗಿ ಮನೆಗಳು ಅಸ್ಥಿ ಪಂಜರದಂತೆ ಗೋಚರಿಸುತ್ತಿವೆ. ಮಳೆ ನೀರಿನಿಂದ ಪಡಿತರ ಪದಾರ್ಥಗಳು, ಬಟ್ಟೆಗಳು ನೀರಿನಲ್ಲಿ ತೊಯ್ದು ಸಾಕಷ್ಟು ನಷ್ಟವಾಗಿದೆ. ಅಲ್ಲಲ್ಲಿ ತಂಬಾಕು ಬೆಳೆಗೆ ಹಾನಿಯಾಗಿದ್ದರೂ ಬಂದ ಮಳೆಯಂತು ಕೃಷಿ ಚಟುವಟಿಕೆಗೆ ಸಹಕಾರಿಯಾಗಿದೆ.
ಭಾರಿ ಮಳೆಯಿಂದ ಉಂಟಾದ ನಷ್ಟಕ್ಕೆ ಹನಗೂಡು ಹೋಬಳಿ ವ್ಯಾಪ್ತಿಯ ರೈತರು ಕಂಗಲಾಗಿದ್ದಾರೆ. ಅಲ್ಲದೆ ನರ್ಸರಿ ಫಾರಂ ಹೌಸ್ಗೂ ಹೆಚ್ಚು ನಷ್ಟವಾಗಿದೆ. ಮನೆಗಳ ಹಂಚು, ಕಲ್ನಾರು ಶೀಟು ಹಾರಿಹೋಗಿದೆ. ಟ್ರಾನ್ಸ್ಫಾರ್ಮರ್ ಸೇರಿದಂತೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ. ಹಲವೆಡೆ ಮರಗಳು ನೆಲಕ್ಕುರುಳಿವೆ. ನರ್ಸರಿ ಫಾರಂ ಹೌಸ್ಗೆ ಧಕ್ಕೆಯಾಗಿದೆ. ಬೆಳೆಗಳಿಗೂ ಸಾಕಷ್ಟು ಹಾನಿಯಾಗಿವೆ. ರಾತ್ರಿಯಿಂದ ಗ್ರಾಮಗಳು ಕಗ್ಗತ್ತಲೆಯಲ್ಲಿ ಮುಳುಗಿವೆ.
ಮಳೆಗೆ ಸಿಲುಕಿ ಹಾನಿಯಾಗಿದ್ದ ತಾಲೂಕಿನ ಹರೀನಹಳ್ಳಿಗೆ ಶಾಸಕ ಎಚ್.ಪಿ.ಮಂಜುನಾಥ್ ಭೇಟಿ ನೀಡಿ, ಬಡವರಿಗೆ ವೈಯಕ್ತಿಕ ನೆರವು ನೀಡಿದರು. ಸರ್ಕಾರದಿಂದ ಸಿಗುವ ಪರಿಹಾರವನ್ನು ಶೀಘ್ರ ಕೊಡಿಸುವುದಾಗಿ ಭರವಸೆ ನೀಡಿ, ತಕ್ಷಣವೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು ಎಂದು ತಹಸೀಲ್ದಾರ್ಗೆ ಸೂಚಿಸಿದರು.