ಅನುತ್ತೀರ್ಣರಾದವರೆಲ್ಲ ದಡ್ಡರಲ್ಲ: ಪ್ರೊ.ನಾಗವಾರ
ಮೈಸೂರು: ಅನುತ್ತೀರ್ಣರಾದವರೆಲ್ಲ ದಡ್ಡರಲ್ಲ, ಅವರಲ್ಲೂ ಪ್ರತಿಭೆ ಅಡಗಿರುತ್ತದೆ ಎಂದು ಸಾಹಿ ಪ್ರೊ.ಕಾಳೇಗೌಡ ನಾಗವಾರ ಅಭಿಪ್ರಾಯಪಟ್ಟರು.
ಅಖಿಲ ಕರ್ನಾಟಕ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಹಿತರಕ್ಷಣಾ ಸಂಘ ಬುಧವಾರ ನಗರದ ಚಾಮರಾಜ ಜೋಡಿ ರಸ್ತೆಯ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅನುತ್ತೀರ್ಣ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಉಚಿತ ಬೋಧನಾ ತರಗತಿ ಉದ್ಘಾಟಿಸಿ ಅವರು ಮಾತನಾಡಿದರು.
ಪಿಯುಸಿಯಲ್ಲಿ ಅನುತ್ತೀರ್ಣರಾದವರೆಲ್ಲ ದಡ್ಡರಲ್ಲ. ಇಷ್ಟಕ್ಕೂ ಸೋಲು ಶಾಶ್ವತವಲ್ಲ. ಸಾಮಾಜಿಕ ಅಭದ್ರತೆ, ತೊಂದರೆ, ಒತ್ತಡ ಮುಂತಾದ ಕಾರಣಗಳಿಂದ ಹಲವು ವಿದ್ಯಾರ್ಥಿಗಳು ಪರೀಕ್ಷೆ ಕಡೆಗೆ ಗಮನ ಹರಿಸಲು ಸಾಧ್ಯವಾಗದೆ ಅನುತ್ತೀರ್ಣರಾಗುತ್ತಾರೆ. ಇದಕ್ಕೆ ಬೇಜಾರು ಮಾಡಿಕೊಳ್ಳುವ ಅಗತ್ಯವಿಲ್ಲ. ಅನುತ್ತೀರ್ಣರೆಲ್ಲ ದಡ್ಡರಲ್ಲ. ಅವರಲ್ಲೂ ವಿಶೇಷ ಪ್ರತಿಭೆ ಇರುತ್ತದೆ. ಸಾಹಿತಿ ಕುವೆಂಪು ಅವರ ಮಗ ಪೂರ್ಣಚಂದ್ರ ತೇಜಸ್ವಿ ಅವರೂ ಪಿಯುಸಿಯಲ್ಲಿ ಅನುತ್ತೀರ್ಣರಾಗಿದ್ದಾರೆ. ಅವರ ಸಾಹಿತ್ಯಾಸಕ್ತಿ ಅವರನ್ನು ಪರೀಕ್ಷೆ ಕಡೆ ಗಮನಹರಿಸಲು ಬಿಟ್ಟಿರಲಿಲ್ಲ ಎಂದರು.
ಸಂಪತ್ತು ಮತ್ತು ವಿಶೇಷ ಸವಲತ್ತಿಲ್ಲ ಎಂಬ ಕಾರಣಕ್ಕೆ ಮರುಗಬಾರದು. ಸಂಪತ್ತು ಹಾಳು ಮಾಡುತ್ತದೆ. ಮಾಜಿ ಮುಖ್ಯಮಂತ್ರಿಯೊಬ್ಬರ ಮಗಳು ಐಷಾರಾಮಿ ಜೀವನಕ್ಕಾಗಿ ಸಂಬಂಧಿ ಕೊಂದು ಜೈಲು ಸೇರಿದಳು, ಕೆಂಗಲ್ ಹನುಮಂತಯ್ಯ ಅವರ ಮೊಮ್ಮಗ ವಿದೇಶದಲ್ಲೆ ಓದಿ ಬ್ಯಾಂಕ್ ದರೋಡೆಗೆ ಯತ್ನಿಸಿ ಬೀದಿ ಶವವಾದ. ಹೀಗಾಗಿ ನಮಗೆ ಅನುಕೂಲಗಳಿಲ್ಲ ಎಂದು ಕೊರಗದೆ, ದೊರಕಿದ ಅವಕಾಶ ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು.
ಡಿಡಿಪಿಯು ಕೆ.ಎಂ. ಪುಟ್ಟು ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲ ಟಿ.ಎಸ್.ಶ್ರೀಕಂಠಶರ್ಮ, ಸಂಘದ ರಾಜ್ಯಾಧ್ಯಕ್ಷ ಈ. ಶಿವೇಗೌಡ, ವಿಭಾಗೀಯ ಅಧ್ಯಕ್ಷ ಚಿದಂಬರ್, ಜಿಲ್ಲಾಧ್ಯಕ್ಷ ಎಂ.ಎಲ್. ಚಿದಾನಂದಕುಮಾರ್ ಇದ್ದರು.