ಮಣ್ಣಿನ ಫಲವತ್ತತೆಗೆ ಭೂಚೇತನ ಸಹಕಾರಿ
ಕ.ಪ್ರ.ವಾರ್ತೆ ್ಣ ಪಿರಿಯಾಪಟ್ಟಣ ್ಣ ಮೇ 22
ಭೂ ಚೇತನ ಯೋಜನೆ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಪ್ರಮುಖ ಯೋಜನೆಯಾಗಿದೆ ಎಂದು ಕೃಷಿ ವಿಜ್ಞಾನಿ ಅರಸುಮಲ್ಲಯ್ಯ ಹೇಳಿದರು.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕೃಷಿ ಇಲಾಖೆಯಿಂದ ಏರ್ಪಡಿಸಿದ್ದ ತಾಲೂಕು ಮಟ್ಟದ ಭೂ ಚೇತನ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ರೈತರು ತಮ್ಮ ಜಮೀನಿನ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಿಕೊಂಡು ಮಣ್ಣಿನ ಫಲವತ್ತತೆ ಹಾಗೂ ಅದಕ್ಕೆ ಬೇಕಾಗುವ ಪೋಷಕಾಂಶಗಳ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಬೆಳೆ ಬೆಳೆಯಲು ಮುಂದಾಗಬೇಕು. ಒಂದು ಬೆಳೆ ಬೆಳೆಯಲು 16 ಪೋಷಕಾಂಶಗಳು ಅವಶ್ಯಕತೆ ಇದೆ. ಸಾವಯವ ಗೊಬ್ಬರ, ಎರೆಹುಳು ಗೊಬ್ಬರ, ರಾಸಾಯನಿಕ ಗೊಬ್ಬರಗಳ ಜೊತೆಗೆ, ಲಘು ಪೋಷಕಾಂಶಗಳಾದ ಜಿಪ್ಸಂ, ಜಿಂಕ್ ಸಲ್ಫೇಟ್, ಬೋರಾನ್ ಸೇರಿದಂತೆ ವಿವಿಧ ಲಘು ಪೋಷಕಾಂಶಗಳನ್ನು ಬಿತ್ತನೆಗೆ 20 ದಿನ ಮುಂಚಿತವಾಗಿ ಭೂಮಿಗೆ ಸೇರಿಸಿ ಬಿತ್ತನೆ ಕಾರ್ಯ ಕೈಗೊಳ್ಳುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದಾಗಿದೆ ಎಂದು ತಿಳಿಸಿದರು.
ಆತ್ಮ ಯೋಜನೆಯ ಉಪನಿರ್ದೇಶಕ ಎಸ್.ಸತೀಶ್ ಮಾತನಾಡಿ, ರೈತರು ತೋಟಗಾರಿಕೆ, ಮೀನುಗಾರಿಕೆ, ಹೈನುಗಾರಿಕೆ, ರೇಷ್ಮೆ ಇವುಗಳನ್ನು ಕೃಷಿ ಜೊತೆಗೆ ಉಪಕಸುಬಾಗಿ ಮಾಡಿಕೊಂಡಾಗ ತಮ್ಮ ಆರ್ಥಿಕ ಮಟ್ಟ ಸುಧಾರಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಸಹಾಯಕ ಕೃಷಿ ನಿರ್ದೇಶಕ ಕೆ.ರಾಜು, ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಎಚ್.ಎಂ.ಹೊಂಬಯ್ಯ, ಶ್ರೀನಿವಾಸಶೆಟ್ಟಿ, ರೇಷ್ಮೆ ಇಲಾಖೆಯ ಚಂದ್ರೇಗೌಡ, ತೋಟಗಾರಿಕೆ ಇಲಾಖೆ ಪ್ರಸಾದ್, ಹೈನುಗಾರಿಕೆ ಇಲಾಖೆಯ ಪಶು ವೈದ್ಯಾಧಿಕಾರಿ ಡಾ.ಸುರೇಶ್ ಇಲಾಖೆಗಳಿಂದ ಹಾಗೂ ಸರ್ಕಾರದಿಂದ ದೊರೆಯುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಕೃಷಿ ಇಲಾಖೆಯ ತಾಂತ್ರಿಕ ಅಧಿಕಾರಿ ಎಚ್.ಎನ್. ರಾಮಕೃಷ್ಣ, ಸಹಾಯಕ ಕೃಷಿ ಅಧಿಕಾರಿಗಳಾದ ಎಚ್.ಆರ್. ಶಿವಣ್ಣ, ಮಹೇಶ್, ನವ್ಯನಾಣಯ್ಯ, ಆತ್ಮ ವಿಷಯ ತಜ್ಞರಾದ ಗಣೇಶ್, ಕಾವೇರಿ ಮಾತಾ ಟ್ರಸ್ಟ್ನ ಅಧ್ಯಕ್ಷೆ ಪದ್ಮಮ್ಮ ಇದರು.