ಹಾಡಿಗಳಲ್ಲಿ ಸಂಭ್ರಮದ ಕುಂಡೆಹಬ್ಬ
ಪಿ.ಎನ್. ಸುಬ್ರಮಣ್ಯ
ಪಿರಿಯಾಪಟ್ಟಣ: ತಾಲೂಕಿನ ವಿವಿಧ ಗಿರಿಜನ ಹಾಡಿಗಳ ಗಿರಿಜನರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕುಂಡೆ ಹಬ್ಬದ ಅಂಗವಾಗಿ ವಿವಿಧ ವೇಷಭೂಷಣ ತೊಟ್ಟು, ಕುಂಡೆ ಹಬ್ಬದ ಮೆರವಣಿಗೆ ಮೂಲಕ ಆಚರಿಸಿದರು.
ತಾಲೂಕಿನ ಮುತ್ತೂರು, ರಾಜು ನಗರ, ಮರಳುಕಟ್ಟೆ ಹಾಡಿ, 80 ಎಕರೆ ಹಾಡಿ, ರಾಣಿ ಗೇಟ್ ಹಾಡಿ, ಲಿಂಗಾಪುರ (ಗೌಡನಕಟ್ಟೆ), ಅಬ್ಬಳತಿ, ಆಲದಕಟ್ಟೆ, ನಾರಳಾಪುರ, ಹಳೆಕೆರೆ ಹೊಸೂರು ಮಾಳ, ಬೂರನಕಟ್ಟೆ ಹಾಡಿ ಸೇರಿದಂತೆ ತಾಲೂಕಿನ ವಿವಿಧ ಹಾಡಿಗಳಲ್ಲಿ ಸಾಂಪ್ರದಾಯಿಕವಾಗಿ ಕಳೆದ ಮಂಗಳವಾರದಿಂದ ಪ್ರಾರಂಭವಾಗಿರುವ ಕುಂಡೆ ಹಬ್ಬದ ಆಚರಣೆ ವಿಜೃಂಭಣೆಯಿಂದ ಆಚರಿಸಿದ್ದು, ಮೂರನೆ ಹಾಗೂ ಕಡೆಯ ದಿನವಾದ ಗುರುವಾರ ಮುಕ್ತಾಯವಾಯಿತು.
ಗಿರಿಜನ ಜನಾಂಗಕ್ಕೆ ಸೇರಿದ ಬೆಟ್ಟಕುರುಬ, ಜೇನುಕುರುಬ, ಬುಡಕಟ್ಟಿನವರು ಹೆಚ್ಚಾಗಿ ಆಚರಿಸಲ್ಪಡುವ ಕುಂಡೆ ಹಬ್ಬದಲ್ಲಿ ಕೊಡಗಿನವರೂ ಭಾಗವಹಿಸುವುದು ವಿಶೇಷ.
ಆಚರಣೆಯ ಬಗೆ: ಹಬ್ಬದ ಮೊದಲನೆ ದಿನವಾದ ಮಂಗಳವಾರ ಕುಂಡೆ ಹಬ್ಬದ ಆಚರಣೆಯ ಮೊದಲ ಹಂತವಾಗಿ ವೇಷ ಧರಿಸುವ ಆಚರಣೆ ಮಾಡುತ್ತಾರೆ. ದೇವರಲ್ಲಿ ಭಯ ಭಕ್ತಿಯಿಂದ ಪ್ರಾರ್ಥಿಸುವ ಮೂಲಕ ವಿಶೇಷ ಉಡುಗೆಗಳನ್ನು ತೊಡುವ (ತಳಿಕಟ್ಟುವುದು) ಆಚರಣೆಯೊಂದಿಗೆ ಪ್ರಾರಂಭಿಸಿ, ಬುಧವಾರ ಹಾಗೂ ಗುರುವಾರ ಮಧ್ಯಾಹ್ನದವರೆಗೆ ಹಾಡಿಗಳ ಹಾಗೂ ನಗರ ಪ್ರದೇಶಗಳಿಗೆ ತೆರಳಿ ರಸ್ತೆಗಳ ಮೂಲಕ ಸಂಚರಿಸುವ ವಿಶೇಷ ವೇಷಧಾರಿಗಳು ಸಿಕ್ಕಸಿಕ್ಕವರಿಗೆ ಹಾಗೂ ತಮ್ಮ ದೇವರಿಗೆ ಬೈಯುವ ಮೂಲಕ ಹಣ ಕೇಳುತ್ತಾರೆ. ಕಡೆಯ ದಿನವಾದ ಗುರುವಾರ ಕೊಡಗಿನ ತಿತಿಮತಿ ಸಮೀಪದ ದೇವರಪುರದ ಹೆಬ್ಬಾಲೆಯಮ್ಮ ದೇವಾಲಯಕ್ಕೆ ತೆರಳಿ ಸಾರ್ವಜನಿಕರಿಗೆ ಹಾಗೂ ದೇವರಿಗೆ ಬೈದಿದ್ದಕ್ಕಾಗಿ ಕ್ಷಮೆಯಾಚಿಸಿ, ವಿಶೇಷ ಪೂಜೆ ಸಲ್ಲಿಸಿ ಕುಂಡೆ ಹಬ್ಬಕ್ಕೆ ನಾಂದಿ ಹಾಡುತ್ತಾರೆ.
ಹಬ್ಬದ ವಿಶೇಷ: ಕಾಡಿನಲ್ಲಿ ದೊರೆಯುವ ಸೋರೆ ಬುರುಡೆ ಸೇರಿದಂತೆ ಮರದ ವಿವಿಧ ಆಕೃತಿಗಳುಳ್ಳ ತೊಗಟೆಗಳನ್ನು ಹಿಡಿದು ನಾರು, ಬೇರುಗಳ ಕೋಲುಗಳನ್ನು ಕೈಯಲ್ಲಿಡಿದುಕೊಂಡು ಆಧುನಿಕವಾಗಿ ಸಿಗುವ ವಿವಿಧ ಮುಖವಾಡಗಳನ್ನು ಧರಿಸಿಕೊಂಡು ಪ್ಲಾಸ್ಟಿಕ್ ಡ್ರಂ ಮತ್ತಿತರ ಆಧುನಿಕ ಉಪಕರಣಗಳನ್ನು ವಾದ್ಯಗಳಂತೆ ಬಳಸಿಕೊಂಡು ಮೈತುಂಬ ಬಣ್ಣ ಬಳಿದುಕೊಂಡು ಕುಂಡೆ ಕುಂಡೆ ಎಂಬ ತಮ್ಮ ಸಾಂಪ್ರದಾಯಿಕ ಹಾಡು ಹಾಡುತ್ತಾರೆ. ಜೊತೆಗೆ ದೇವರಿಗೆ ಹಾಗೂ ರಸ್ತೆಯಲ್ಲಿ ಎದುರಿಗೆ ಸಿಗುವವರಿಗೆ ಬೈಯುತ್ತಾ, ಹಣ ಪೀಕುತ್ತಾರೆ.
ಕುಂಡೆ ಹಬ್ಬ ಆಚರಣೆಯಲ್ಲಿ ತೊಡಗುವವರು ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕಿದ್ದು ಬಾಳೆ ಹಣ್ಣು, ಸಿಹಿ ತಿಂಡಿಗಳು ಹಾಗೂ ಕಾಡಿನಲ್ಲಿ ಸಿಗುವ ಗೆಡ್ಡೆಗೆಣಸುಗಳನ್ನು ಮಾತ್ರ ಸೇವಿಸಬೇಕು. ಆಚರಣೆ ಮುಗಿಯುವವರೆಗೂ ಮಾಂಸಾಹಾರ ನಿಷಿದ್ಧ. ಹಿಂದೆ ತಾವು ದುಡಿಯುತ್ತಿದ್ದ ಜಮೀನುಗಳ ಮಾಲೀಕರು ತಮ್ಮನ್ನು ಕೆಲಸದ ವೇಳೆಗಳಲ್ಲಿ ವರ್ಷವಿಡೀ ಬೈಯ್ದು ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಅವರ ಮೇಲಿನ ಕೋಪವನ್ನು ತೀರಿಸುವ ಸಲುವಾಗಿ ಕುಂಡೆ ಹಬ್ಬ ಆಚರಣೆ ಮಾಡಿ ಜಮೀನ್ದಾರರಿಗೆ ಬೈಯುತ್ತಿದ್ದೆವು. ಹಬ್ಬದ ದಿನಗಳಂದು ಅವರೂ ಏನೂ ಮಾತನಾಡದೆ ಸುಮ್ಮನಿರುತ್ತಿದ್ದರು. ಇದೇ ಆಚರಣೆಯನ್ನು ಮುಂದುವರಿಸುತ್ತಿರುವುದಾಗಿ ಗಿರಿಜನರ ಮುಖಂಡ ದೇವಯ್ಯ ಹೇಳುತ್ತಾರೆ.