ಜೆಡಿಎಸ್ ಶಿಖಂಡಿ ಪಾತ್ರ ವಹಿಸಿಲ್ಲ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 23
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್ ಶಿಖಂಡಿ ಪಾತ್ರವಹಿಸಿಲ್ಲ. ಕೆಲವು ದುಷ್ಟಶಕ್ತಿಗಳನ್ನು ನಿಗ್ರಹಿಸಲು ದೇವರು ನಮಗೆ ಗೊತ್ತಿಲ್ಲದಂತೆ ಕೆಲವು ಪಾತ್ರಗಳನ್ನು ಸೃಷ್ಟಿಸಿದ್ದ ಎಂದು ಕೆ.ಆರ್. ನಗರ ಶಾಸಕ ಸಾ.ರಾ. ಮಹೇಶ್ ವ್ಯಾಖ್ಯಾನಿಸಿದರು.
ಲೋಕ ಫಲಿತಾಂಶದಿಂದ ಹತಾಶರಾದ ಎಚ್. ವಿಶ್ವನಾಥ್ ಒಮ್ಮೆ ಜೆಡಿಎಸ್ ಟೀಕಿಸಿದಾಗ, ಏನೋ ಸೋತ ಕಾರಣಕ್ಕೆ ಹೇಳಿಕೆ ನೀಡುತ್ತಿದ್ದಾರೆ ಎಂದುಕೊಂಡೆವು. ಆದರೆ ಎರಡನೆ ಬಾರಿ ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಶಿಖಂಡಿ ಪಾತ್ರ ವಹಿಸಿದೆ ಎಂದಿರುವುದು ಸರಿಯಲ್ಲ.
ನಮ್ಮ ತಾಳ್ಮೆಗೆ ಮಿತಿ ಇದೆ. ಇಲ್ಲಿ ಯಾರೂ ಶಿಖಂಡಿ ಪಾತ್ರವಹಿಸಿಲ್ಲ. ಕೆಲವು ದುಷ್ಟಶಕ್ತಿಯನ್ನು ನಿಗ್ರಹಿಸಲು ದೇವರು ಕೆಲವು ಪಾತ್ರಗಳನ್ನು ನಮಗೆ ಗೊತ್ತಿಲ್ಲದಂತೆ ಸೃಷ್ಟಿಸಿದ್ದ. ಅದು ನಮ್ಮ ಪಕ್ಷದಲ್ಲಿ ಇರಬಹುದು ಅಥವಾ ನಿಮ್ಮ(ಕಾಂಗ್ರೆಸ್) ಪಕ್ಷದಲ್ಲಿರಬಹುದು. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸಲಹೆ ಮಾಡಿದರು.
ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಮೋದಿ ಅಲೆ ಸ್ವಲ್ಪ ಮಾತ್ರ ಇದೆ. ಇನ್ನು ಬಿಜೆಪಿ ಅಭ್ಯರ್ಥಿಯನ್ನು ನೋಡಿ ಮತ ಹಾಕಿಲ್ಲ. ಬದಲಿಗೆ ವಿಶ್ವನಾಥ್ ವಿರೋಧಿ ಅಲೆ ಕೆಲಸ ಮಾಡಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರನ್ನು ವಿನಾಕಾರಣ ವೈಯಕ್ತಿಕವಾಗಿ ಟೀಕಿಸಿದ ವಿರೋಧದ ಅಲೆಯಲ್ಲಿ ವಿಶ್ವನಾಥ್ ಕೊಚ್ಚಿ ಹೋಗಿದ್ದಾರೆ. ಕಳೆದ ಐದು ವರ್ಷ ಕೆಲಸ ಮಾಡಿಲ್ಲ. ಹಳ್ಳಿ ಹಳ್ಳಿಗೆ ತೆರಳಿ ಸಂಪರ್ಕ ಸಾಧಿಸಿಲ್ಲ. ಅದರ ಪರಿಣಾಮ ಈ ಫಲಿತಾಂಶ ಲಭ್ಯವಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರೋಧದ ಕಾರಣಕ್ಕೆ ಜೆಡಿಎಸ್ ಶಿಖಂಡಿ ಪಾತ್ರ ವಹಿಸಿ ಸೇಡು ತೀರಿಸಿಕೊಂಡಿದೆ ಎಂದಿರುವುದು ಸರಿಯಲ್ಲ ಎಂದರು.
ಪಕ್ಷವನ್ನು ಒತ್ತೆ ಇಟ್ಟಿಲ್ಲ: ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನನ್ನ ಮಗನ ಸಮಾನ. ಇದು ಫ್ರೆಂಡ್ಲಿ ಮ್ಯಾಚ್ ಎನ್ನುತ್ತಿದ್ದ ವಿಶ್ವನಾಥ್ ಈ ಫಲಿತಾಂಶವನ್ನು ಫ್ರೆಂಡ್ಲಿಯಾಗಿ ತೆಗೆದುಕೊಳ್ಳಲಿ. ಅದು ಬಿಟ್ಟು ಬಾಯಿಗೆ ಬದಂತೆ ಮಾತನಾಡಬಾರದು. ಮತದಾರರು ನೀಡಿದ ಈ ತೀರ್ಮಾನವನ್ನು ನಾವು ಗೌರವಿಸುತ್ತೇವೆ. ನಾವು ಪ್ರಾಮಾಣಿಕವಾಗಿ ಪ್ರಚಾರ ನಡೆಸಿದ್ದೇವೆ. ಆದರೆ ನಮ್ಮ ಪಕ್ಷದ ಮತದಾರರು ನಮ್ಮ ನಿಯಂತ್ರಣ ತಪ್ಪಿ ಬಿಜೆಪಿಗೆ ಮತಹಾಕಿರಬಹುದು. ಇಲ್ಲ ಎನ್ನಲಾಗದು. ಆದರೆ ಬಿಜೆಪಿ ಅಭ್ಯರ್ಥಿಯ ಗೆಲುವಿನಲ್ಲಿ ನಮ್ಮ ಪಾಲಿನ ಮತ ಇಲ್ಲ. ಅಲ್ಲದೆ ನಮ್ಮ ಪಕ್ಷವನ್ನು ಮತ್ತೊಂದು ಪಕ್ಷಕ್ಕೆ ಒತ್ತೆ ಇಟ್ಟಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ತಪ್ಪನ್ನು ತಿದ್ದಿಕೊಳ್ಳಲಿ: ವಿಶ್ವನಾಥ್ ಅವರಿಗೆ ರಾಜಕೀಯದಲ್ಲಿ ಮುಂದುವರಿಯಬೇಕು ಎಂಬ ಇಷ್ಟ ಇದ್ದರೆ ತಮ್ಮ ತಪ್ಪನ್ನು ತಿದ್ದಿಕೊಳ್ಳಲಿ. ಅಲ್ಲದೆ ಕ್ಷೇತ್ರದಲ್ಲಿ ಸ್ವಜಾತಿ ಅಭ್ಯರ್ಥಿ ಇದ್ದರೆ ನನ್ನ ಗೆಲುವು ಕಷ್ಟ ಎಂದು ಬಿಜೆಪಿಯ ಸಿ.ಎಚ್. ವಿಜಯಶಂಕರ್ ಅವರನ್ನು ಹಾಸನಕ್ಕೆ ಕಳುಹಿಸಿದ್ದು ವಿಶ್ವನಾಥ್ಗೆ ಮುಳುವಾಯಿತು. ಇಷ್ಟಕ್ಕೂ ನಮ್ಮ ಪಕ್ಷದ ಅಭ್ಯರ್ಥಿ ಹೆಸರು ಘೋಷಣೆ ಆಗಿದ್ದು ಕಡೆ ಗಳಿಗೆಯಲ್ಲಿ. ಆದ್ದರಿಂದ ಹೆಚ್ಚು ಮತ ಪಡೆಯಲು ಸಾಧ್ಯವಾಗಲಿಲ್ಲ. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲವರ್ಧನೆಗೊಳಿಸಲು ಯತ್ನಿಸುತ್ತೇವೆ ಎಂದರು.
ಮಾಜಿ ಮೇಯರ್ ಸಂದೇಶ್ಸ್ವಾಮಿ ಮಾತನಾಡಿ, ಕಳೆದ ಲೋಕಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ಚಂದ್ರಶೇಖರಯ್ಯ ಅವರು ನಮ್ಮ ಪಕ್ಷದ ಕಾರ್ಯಕರ್ತರೆ ನನಗೆ ಮೋಸ ಮಾಡಿದರು ಎಂಬ ಹೇಳಿಕೆಯನ್ನು ಖಂಡಿಸುತ್ತೇನೆ. ಇಷ್ಟಕ್ಕೂ ಪಕ್ಷದ ಹಿರಿಯರು ಅಭ್ಯರ್ಥಿಯನ್ನು ಕಣಕ್ಕಿಳಿಸುವಾಗ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು.
ಶಾಸಕ ಎಸ್. ಚಿಕ್ಕಮಾದು ಮಾತನಾಡಿದರು. ನಗರ ಜೆಡಿಎಸ್ ಅಧ್ಯಕ್ಷ ರಾಜಣ್ಣ, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ, ಮುಖಂಡ ಎಸ್ಬಿಎಂ ಮಂಜು, ಕಾನೂನು ಘಟಕದ ಅಧ್ಯಕ್ಷ ರವಿಚಂದ್ರಗೌಡ ಇದ್ದರು.