ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

20 ನಿಮಿಷ 20 ಸುದ್ದಿ

Mainashree
Updated On : 24 May 2014, 9:19 am

ಸೇವ್ ದ ಟೈಗರ್ ಕಪ್: ಡಿವೈಇಎಸ್ ತಂಡ ಫೈನಲ್ಗೆ
ಮೈಸೂರು: ಅಂತರ ಕ್ರಿಕೆಟ್ ಅಕಾಡೆಮಿ ಸೇವ್ ದ ಟೈಗರ್ ಕಪ್- 2014 ಪಂದ್ಯಾವಳಿಯಲ್ಲಿ ಮೈಸೂರಿನ ಎಸ್ಎಕೆ ಮತ್ತು ಡಿವೈಇಎಸ್ ತಂಡ ಫೈನಲ್ ಪ್ರವೇಶಿಸಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ 17 ವರ್ಷದೊಳಗಿನವರ ಈ ಪಂದ್ಯದಲ್ಲಿ ಎಸ್ಎಕೆ ಮತ್ತು ಡಿವೈಇಎಸ್ ತಂಡವು ಬೆಂಗಳೂರಿನ ಎಂಗ್ರೆಡ್ಸ್ ಸಿಸಿ ತಂಡವನ್ನು 77 ರನ್ಗಳ ಅಂತರದಲ್ಲಿ ಮಣಿಸುವ ಮೂಲಕ ಫೈನಲ್ ಪ್ರವೇಶಿಸಿತು. ಎಸ್ಎಕೆ ಮತ್ತು ಡಿವೈಇಎಸ್ ತಂಡ 28.2 ಓವರ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 236 ರನ್ ಕಲೆ ಹಾಕಿತು. ತಂಡದ ಪರ ಎಸ್.ಗಗನ್(58), ನಂದನ್ ನಾರಾಯಣ್(51), ಆರ್. ಆಶ್ರಿತ್(50) ಅವರು ಅರ್ಧಶತಕ ಬಾರಿಸಿದರು. ಎಂಗ್ರೆಡ್ಸ್ ತಂಡದ ಯಶ್ 3 ಮತ್ತು ವೈಶಾಕ್ 2 ವಿಕೆಟ್ ಕಬಳಿಸಿದರು. ಎಂಗ್ರೆಡ್ಸ್ ತಂಡ 30 ಓವರ್ಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು 160 ರನ್ ಕಲೆಹಾಕಿತು. ರವಿಕುಮಾರ್ 48 ರನ್ ಬಾರಿಸಿದರು. ಡಿವೈಇಎಸ್ ತಂಡದ ಕೆ. ಶಶಾಂಕ್ 3, ರವಿಚಂದ್ರ ಮತ್ತು ಜಿ.ಎಸ್. ಯೋಧನ್ ಹೃದಯ್ ತಲಾ 2 ವಿಕೆಟ್ ಪಡೆದರು. ಎಸ್ಎಕೆ ಮತ್ತು ಡಿವೈಇಎಸ್ ತಂಡದ ನಂದನ್ ನಾರಾಯಣ್ಗೆ ಟೈಗರ್ ಆಫ್ ದಿ ಮ್ಯಾಚ್ ನೀಡಲಾಯಿತು.

ಮೈ ರಿಯಾಲಿಟಿ ಕಟ್ಟಡ ಸಾಮಗ್ರಿಗಳ ಪ್ರದರ್ಶನ
ಮೈಸೂರು: ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಲ್ಡರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ ಆಯೋಜಿಸಿರುವ ಮೈ ರಿಯಾಲಿಟಿ 2014 ಕಟ್ಟಡ ಸಾಮಗ್ರಿಗಳ ಪ್ರದರ್ಶನ ಶುಕ್ರವಾರ ಆರಂಭವಾಯಿತು. ಮೇ 26 ರವರೆಗೆ ನಡೆಯುವ ಈ ಪ್ರದರ್ಶನವನ್ನು ಕ್ರೆಡೈ ಸಂಸ್ಥೆಯ ಮಾಜಿ ಅಧ್ಯಕ್ಷ ವಿ.ಕೆ. ಜಗದೀಶ್ ಬಾಬು ಉದ್ಘಾಟಿಸಿ ಮಾತನಾಡಿ, ದೇಶಾದ್ಯಂತ 8 ರಿಂದ 10 ಸಾವಿರ ಮಂದಿ ಬಿಲ್ಡರ್ಸ್ಗಳು ನಮ್ಮ ಸಂಸ್ಥೆಯ ಸದಸ್ಯರಾಗಿದ್ದಾರೆ. ಸಂಸ್ಥೆಯ ಸದಸ್ಯರಿಗೆ ಐಎಸ್ಒ ಮಾನ್ಯತೆ ದೊರೆತಿರುವುದರಿಂದ ಗ್ರಾಹಕರಿಂದ ಬೇಡಿಕೆ ಹೆಚ್ಚಿದೆ ಎಂದರು. ಸಂಸ್ಥೆಯ ಮೈಸೂರು ವಿಭಾಗದ ಅಧ್ಯಕ್ಷ ಕೆ. ಅಜಿತ್ ನಾರಾಯಣ್, ಮೈ ರಿಯಾಲಿಟಿ 2014ರ ಅಧ್ಯಕ್ಷ ವೈ.ಜಿ. ಚಿನ್ನಸ್ವಾಮಿ ಮಾತನಾಡಿದರು. ಪ್ರದರ್ಶನದಲ್ಲಿ 45ಕ್ಕೂ ಹೆಚ್ಚು ಮಳಿಗೆ ತೆರೆಯಲಾಗಿತ್ತು. ಜಿ9 ಪ್ರಾಜೆಕ್ಟ್ಸ್, ಬ್ಲ್ಯೂ ವ್ಯಾಲಿ ಪ್ರಾಪರ್ಟೀಸ್ ಸೇರಿದಂತೆ ಅನೇಕ ಕಟ್ಟಡ ಉದ್ಯಮಗಳ ಕಂಪನಿಗಳು ಭಾಗವಹಿಸಿದ್ದವು. ಕಾರ್ಯದರ್ಶಿ ಎಚ್.ಎಸ್. ಸುಬ್ರಹ್ಮಣ್ಯಂ, ಬಿಎಐ ಮೈಸೂರು ಕೇಂದ್ರದ ಅಧ್ಯಕ್ಷ ಎಂ.ಸಿ. ಮಲ್ಲಿಕಾರ್ಜುನ್, ಕಾರ್ಯದರ್ಶಿ ಕೆ. ಸುಬ್ರಹ್ಮಣ್ಯ ರಾವ್, ಎಂಬಿಸಿಟಿ ಅಧ್ಯಕ್ಷ ಡಿ. ಕೀರ್ತಿಕುಮಾರ್ ಇದ್ದರು.

ಕರ್ಜನ್ ಪಾರ್ಕ್ನಲ್ಲಿ ಮಾವು ಮೇಳ ನಾಳೆಯಿಂದ
ಮೈಸೂರು: ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಹಾಪ್ಕಾಮ್ಸ್ನ ಸಂಯುಕ್ತ ಆಶ್ರಯದಲ್ಲಿ ಕರ್ಜನ್ ಪಾರ್ಕ್ ಆವರಣದಲ್ಲಿ ಮೇ 26 ರಿಂದ 28 ರವರೆಗೆ ಮಾವು ಮೇಳ ಆಯೋಜಿಸಲಾಗಿದೆ. ಮೇ 26ರ ಬೆಳಗ್ಗೆ 11ಕ್ಕೆ ಮಾವು ಮೇಳ ಉದ್ಘಾಟನೆಗೊಳ್ಳಲಿದೆ. ರೈತರು ತಮ್ಮ ತೋಟದಲ್ಲಿನ ತಾಜಾ ಮಾವು ಹಣ್ಣುಗಳನ್ನು ಸಂಗ್ರಹಿಸಿ ಈ ಮೇಳದಲ್ಲಿ ಗ್ರಾಹಕರಿಗೆ ನೇರವಾಗಿ ಹಾಪ್ಕಾಮ್ಸ್ ಮತ್ತು ಇಲಾಖೆ ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡಬಹುದು. ಮಾವು ಬೆಳೆಗಾರರಿಗೆ ಉತ್ತಮ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಜೊತೆಗೆ ಗ್ರಾಹಕರಿಗೆ ವಿವಿಧ ತಳಿಗಳ ರುಚಿಕರ ಹಣ್ಣುಗಳನ್ನು ನಿಖರವಾದ ತೂಕ ಮತ್ತು ನ್ಯಾಯಯುತ ಬೆಲೆಯಲ್ಲಿ ನೀಡುವ ಉದ್ದೇಶದಿಂದ ಈ ಮೇಳ ಆಯೋಜಿಸಲಾಗಿದೆ. ಆದ್ದರಿಂದ ಆಸಕ್ತ ರೈತರು ಉಪ ನಿರ್ದೇಶಕರು, ಜಿಲ್ಲಾ ಪಂಚಾಯಿತಿ, ಕರ್ಜನ್ಪಾರ್ಕ್, ಮೈಸೂರು ಇಲ್ಲಿ ಮೇ 24 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು. ರೈತರು ನೈಸರ್ಗಿಕವಾಗಿ ಹಣ್ಣುಗಳನ್ನು ಮಾಗಿಸಿ, ಈ ಮೇಳದಲ್ಲಿ ಮಾರಾಟ ಮಾಡಬೇಕು. ಹೆಚ್ಚಿನ ಮಾಹಿತಿಗೆ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಎಂ.ಎಸ್. ರಾಜು ಅವರ ಮೊ. 9845800165  ಸಂಪರ್ಕಿಸಿ.


ಆಟೋನಗರ ಜಾಗ: ಎಂಡಿಎ ನಿರ್ಲಕ್ಷ್ಯ
ಮೈಸೂರು: ಆಟೋನಗರ ಜಾಗದ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ನಗರ ಮೋಟಾರು ವಾಹನಗಳ ದುರಸ್ತಿ ಮಾಡುವ ಕಾರ್ಮಿಕರ ಒಕ್ಕೂಟ ಕಿಡಿಕಾರಿದೆ. ಒಕ್ಕೂಟದ ಅಧ್ಯಕ್ಷ ಬಿ.ಎನ್.ಮಹೇಶ್ ರಾಜೇ ಅರಸ್ ಹೇಳಿಕೆ ನೀಡಿ, ನಂಜನಗೂಡು ರಸ್ತೆಯ ಸರ್ವೆ ನಂ. 179, 180 ರಲ್ಲಿ 26.20 ಎಕರೆ ಜಮೀನನ್ನು ಆಟೋನಗರಕ್ಕೆ ಮೀಸಲಿಡಲಾಗಿತ್ತು. ಆದರೆ ಈಗ ಎಂಡಿಎ ನಿರ್ಲಕ್ಷ್ಯ ತೋರಿಸುತ್ತಿರುವುದರಿಂದ ಖಾಸಗಿಯವರು ಸರ್ಕಾರಿ ದಾಖಲೆಗಳನ್ನು ತಿದ್ದುಪಡಿ ಮಾಡಿ, ಅದನ್ನು ತಮ್ಮ ವಶಕ್ಕೆ ಪಡೆಯಲು ಹೊರಟಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಜಮೀನಿನ ಆರ್ಟಿಸಿಯೂ ಎಂಡಿಎ ಹೆಸರಿನಲ್ಲಿಯೇ ಇದ್ದರೂ ಪ್ರಾಧಿಕಾರ ಹೋರಾಟದಿಂದ ಹಿಂದೆ ಸರಿದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ ಎಂದು ಹೇಳಿದರು. ನಾವು ಅದೇ ಜಾಗದಲ್ಲಿ ಕೆಲಸ ಆರಂಭಿಸಲು ತೀರ್ಮಾನಿಸಿದ್ದೇವೆ. ಸಂಬಂಧಪಟ್ಟವರು ಸೂಕ್ತ ರಕ್ಷಣೆ ನೀಡಬೇಕು. ಜೊತೆಗೆ ಸರ್ಕಾರ ಎಂಡಿಎ ವಿರುದ್ಧ ಸಿಐಡಿ ಅಥವಾ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

ನ್ಯಾಯಾಂಗ ಬಡಾವಣೆಗೆ ಬಸ್ ಸೌಲಭ್ಯ
ಮೈಸೂರು: ನಗರದ ಕೇರ್ಗಳ್ಳಿಯಲ್ಲಿ ನ್ಯಾಯಾಂಗ ಇಲಾಖಾ ನೌಕರರ ಗೃಹನಿರ್ಮಾಣ ಸಹಕಾರ ಸಂಘವು ನಿರ್ಮಿಸಿರುವ ನ್ಯಾಯಾಂಗ ಬಡಾವಣೆಗೆ ನಗರ ಸಾರಿಗೆ ವಾಹನಗಳ ಸಂಚಾರ ವ್ಯವಸ್ಥೆ ಮಾಡಲಾಗಿದ್ದು, 91ಎ/1, 69/ಜಿ/1 ಹಾಗೂ 62/ಜಿ/1 ಮಾರ್ಗ ಸಂಖ್ಯೆ ವಾಹನಗಳು ಸಂಚರಿಸುತ್ತವೆ. 69/ಜಿ/1- ನಗರ ಬಸ್ ನಿಲ್ದಾಣದಿಂದ ಆರ್.ಆರ್. ನಗರ, ನ್ಯಾಯಾಂಗ ಬಡಾವಣೆ. 91ಎ/1- ನಗರ ಬಸ್ ನಿಲ್ದಾಣದಿಂದ ಶಾರದಾದೇವಿನಗರ- ನ್ಯಾಯಾಂಗ ಬಡಾವಣೆ. 62ಜಿ/1- ನಗರ ಬಸ್ ನಿಲ್ದಾಣದಿಂದ ಕನಕದಾಸನಗರ ಎ ಬ್ಲಾಕ್ನಿಂದ ನ್ಯಾಯಾಂಗ ಬಡಾವಣೆ. ಸಾರ್ವಜನಿಕರು ಈ ವಾಹನಗಳ ಉಪಯೋಗ ಪಡೆಯಬೇಕೆಂದು ಸಂಘದ ಅಧ್ಯಕ್ಷ ಸಿ.ಶೇಷಯ್ಯ ಮನವಿ ಮಾಡಿದ್ದಾರೆ. ಬಡಾವಣೆಗಳ ನಿವಾಸಿಗಳಿಗೆ ಅನುಕೂಲವಾಗುವಂತೆ ಸಾರಿಗೆ ಸಂಸ್ಥೆಯ ವಾಹನಗಳ ವ್ಯವಸ್ಥೆ ಮಾಡಿದ್ದಕ್ಕೆ ಸಂಚಾರ ಸಾರಿಗೆ ವಿಭಾಗದ ಅಧಿಕಾರಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

ಮಕ್ಕಳು- ಪೋಷಕರ ಬಾಂಧವ್ಯ ಕ್ಷೀಣ
ಮೈಸೂರು: ಆಧುನಿಕ ಯುಗದಲ್ಲಿ ಮಕ್ಕಳು ಮತ್ತು ಪೋಷಕರ ನಡುವಿನ ಬಾಂಧವ್ಯ ಕಡಿಮೆ ಆಗುತ್ತಿದೆ ಎಂದು ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಸರ್ವಮಂಗಳಾ ಶಂಕರ್ ಹೇಳಿದರು. ರೋಟರಿ ಮೈಸೂರು ಉತ್ತರ ಮತ್ತು ಯಶಸ್ವಿ ಫೌಂಡೇಷನ್ ನಗರದ ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ದ ರೋಟರಿ ಯಶಸ್ವಿ ಪ್ರತಿಭಾ ಪುರಸ್ಕಾರ 2014 ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು. ಮಕ್ಕಳ ಪ್ರತಿಭೆಗೆ ಅವರು ಪಡೆದಿರುವ ಅಂಕಗಳೇ ಸಾಕ್ಷಿ. ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಸಂಗತಿ. ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆ ಕಲ್ಪಿಸಿ, ಅವರನ್ನು ಗೌರವಿಸುತ್ತಿರುವುದು ಅಭಿನಂದನಾರ್ಹ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ರೋಟರಿ ಮೈಸೂರು ಉತ್ತರ ಅಧ್ಯಕ್ಷ ಜಿ. ಶಿವಲಿಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಯಶಸ್ವಿ ಫೌಂಡೇಷನ್ನ ಅಧ್ಯಕ್ಷ ಯಶಸ್ವಿ ಎಸ್. ಸೋಮಶೇಖರ್, ರಂಗಕರ್ಮಿ ರಾಜಶೇಖರ ಕದಂಬ ಇದ್ದರು.

ಬುದ್ಧ ಜಯಂತಿಯಲ್ಲಿ ಮುಖ್ಯಮಂತ್ರಿ ಭಾಗಿ
ಮೈಸೂರು: ನಗರದ ವಿಶ್ವ ಮೈತ್ರಿ ಬುದ್ಧವಿಹಾರವು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಭಗವಾನ್ ಬುದ್ಧರ 2578ನೇ ಜನ್ಮ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು. ಬುದ್ಧ ವಿಹಾರದ ಆವರಣಕ್ಕೆ ಗುರುವಾರ ಭೇಟಿ ನೀಡಿದ ಅವರು ಮೊಂಬತ್ತಿ ಹಚ್ಚಿ ಬುದ್ಧನಿಗೆ ನಮಿಸಿದರು. ಬಳಿಕ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದ್ದರು. ವಿಶ್ವಮೈತ್ರಿ ಬುದ್ಧವಿಹಾರದ ವೀಲಶೀಲಬಂತೇಜಿ, ಕೊಳ್ಳೇಗಾಲದ ಚೇತನನ ಬುದ್ಧವಿಹಾರದ ಮನೋರಖ್ಖಿತ ಬಂತೇಜಿ ಸಮ್ಮುಖ ವಹಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಶಾಸಕ ಎಂ.ಕೆ. ಸೋಮಶೇಖರ್, ಸಂಗೀತ ವಿವಿ ಕುಲಪತಿ ಡಾ. ಸರ್ವಮಂಗಳ ಇದ್ದರು.

ರಾಸುಗಳಿಗೆ ಚುಚ್ಚುಮದ್ದು ಹಾಕಿಸಲು ಸಲಹೆ
ಮೈಸೂರು: ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನ ಕೇಂದ್ರದ ಸಮಗ್ರ ಕೃಷಿ ಹವಾಮಾನ ವಿಭಾಗದ ವತಿಯಿಂದ ರೈತರಿಗೆ ಕೃಷಿ ಸಲಹೆಗಳನ್ನು ನೀಡಿದೆ. ಮುಂಗಾರು ಮಳೆ ಪ್ರಾರಂಭವಾಗುವುದಕ್ಕೆ ಮೊದಲು, ಎಲ್ಲ ಜಾನುವಾರುಗಳಿಗೆ ಜಂತು ನಾಶಕ ಔಷಧ ಹಾಗೂ ಕಾಲು ಮತ್ತು ಬಾಯಿ ಬೇನೆ, ಚೆಪ್ಪೆ ಬೇನೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಚುಚ್ಚುಮದ್ದನ್ನು ಹಾಕಿಸಬೇಕು. ಆಡು ಮತ್ತು ಕುರಿಗಳಿಗೆ ಎಂಟರೊಟಾಕ್ಸೀಮಿಯಾ ರೋಗ ನಿರೋಧಕ ಹಾಕಿಸಬೇಕು. ಬಾಳೆ ನಾಟಿಗಾಗಿ ಉಪಯೋಗಿಸುವ ಕಂದುಗಳು ಗೆಡ್ಡೆ ಕೊರೆಯುವ ಹುಳು, ಮೊಸಾಯಿಕ್ ನಂಜುರೋಗ, ಪನಾಮರೋಗ ಮತ್ತು ಸಸ್ಯ ಜಂತುಗಳಿಂದ ಮುಕ್ತವಾಗಿರಬೇಕೆಂದು ವಿಭಾಗದ ಕ್ಷೇತ್ರಾಧೀಕ್ಷಕ ಡಾ.ಸಿ.ಗೋವಿಂದರಾಜು ಹಾಗೂ ಸಹ ಸಂಶೋಧಕ ಎನ್. ನರೇಂದ್ರಬಾಬು ಹೇಳಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊ.8095227713, ದೂ. 2591267 ಸಂಪರ್ಕಿಸಬಹುದು.

ಕಳ್ಳನ ಸೆರೆ: 8 ಬೈಕ್ ವಶ ಬಾಲಕ ನಾಪತ್ತೆ
ಮೈಸೂರು: ಮಂಡಿ ಠಾಣೆ ಪೊಲೀಸರು ಕಳ್ಳನನ್ನು ಬಂಧಿಸಿ 8 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಟಿ. ನರಸೀಪುರ ತಾಲೂಕು ಬನ್ನೂರು ಮೂಲದ ಕುತ್ಬುದ್ದೀನ್ ಅಲಿಯಾಸ್ ಕುದ್ದು ಬಂಧಿತ. ಈ ಹಿಂದೆ ಕೆಂಗೇರಿ ಹಾಗೂ ಕನಕಪುರ ವ್ಯಾಪ್ತಿಯಲ್ಲಿ ಬೈಕ್ ಕಳವು ಮಾಡಿ ಸಿಕ್ಕಿಬಿದ್ದಿದ್ದ ಕುತ್ಬುದ್ದೀನ್, ಜಾಮೀನಿನ ಮೇಲೆ ಹೊರಬಂದು ಮತ್ತೆ ತನ್ನ ಹಳೆ ಚಾಳಿ ಮುಂದುವರಿಸಿದ್ದ. ಮಂಡಿ ಠಾಣೆ ಇನ್ಸ್ಪೆಕ್ಟರ್ ನಿರಂಜನರಾಜೇ ಅರಸ್, ಎಸ್ಐಗಳಾದ ಕೇಶವಮೂರ್ತಿ, ತಿಪ್ಪಯ್ಯಸ್ವಾಮಿ ಮತ್ತು ಸಿಬ್ಬಂದಿ ಶಂಕರ್, ಹರೀಶ್, ಸತೀಶ್, ಚಂದ್ರೇಗೌಡ ಈ ಪತ್ತೆ ಮಾಡಿದ್ದಾರೆ.
ಬಾಲಕನ ಶವ ಪತ್ತೆ: ಮೈಸೂರಿನ ಮಂಡಿ ಠಾಣೆ ವ್ಯಾಪ್ತಿಯಲ್ಲಿ 3 ವರ್ಷದ ಅಪರಿಚಿತ ಬಾಲಕನ ಮೃತ ದೇಹ ಪತ್ತೆಯಾಗಿದೆ. ಬಾಲಕನ ಸಾವಿನ ಬಗ್ಗೆ ಅನುಮಾನ ಮೂಡಿದೆ. ಚಹರೆ- 3 ಅಡಿ ಎತ್ತರ, ಮೃತ ದೇಹವನ್ನು ಯಾವುದೋ ಪ್ರಾಣಿಗಳು ತಿಂದಿವೆ. ತಲೆ ಬುರುಡೆ ಮೇಲೆ ಹೊಲಿಗೆ ಹಾಕಲಾಗಿದೆ. ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಬಿಳಿ ಟೀ- ಶರ್ಟ್ ಧರಿಸಿದ್ದಾನೆ. ಬಾಲಕನ ವಾರಸುದಾರರು ಇದ್ದಲ್ಲಿ ದೂ.0821- 2418313 ಸಂಪರ್ಕಿಸಲು ಮಂಡಿ ಠಾಣೆಯ ಎಎಸ್ಐ ನಾಗಮ್ಮ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement