ವಿವೇಕ ಸ್ಮಾರಕ ನಿರ್ಮಾಣ ಶತಸಿದ್ಧ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 24
ನಗರದ ನಾರಾಯಣಶಾಸ್ತ್ರಿ ರಸ್ತೆಯ ನಿರಂಜನ ಮಠ ಮತ್ತು ಅದಕ್ಕೆ ಹೊಂದಿಕೊಂಡ ಎನ್ಟಿಎಂ ಶಾಲಾ ಆವರಣದಲ್ಲಿ ಸ್ವಾಮಿ ವಿವೇಕಾನಂದರ ಸಾಂಸ್ಕೃತಿಕ ಯುವ ಕೇಂದ್ರ ತೆರೆಯುವುದು ಶತಸಿದ್ಧ, ಈ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೆ ಇಲ್ಲ ಎಂದು ಮಾಜಿ ಶಾಸಕ ಡಿ. ಮಾದೇಗೌಡ ಹೇಳಿದರು.
2013, ಮಾ. 15 ರಂದು ನಿರಂಜನ ಮಠ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಎನ್ಟಿಎಂ ಶಾಲಾ ಆವರಣವನ್ನು ಶ್ರೀ ರಾಮಕೃಷ್ಣ ಆಶ್ರಮಕ್ಕೆ ಸರ್ಕಾರ ಹಸ್ತಾಂತರಿಸಿದೆ. ಈ ಸಂಬಂಧ ನಗರ ಪಾಲಿಕೆಯಲ್ಲಿ ಖಾತೆಯೂ ಆಗಿದೆ. ಅಲ್ಲದೆ ಆಶ್ರಮವು ನಿಯಮಿತವಾಗಿ ಕಂದಾಯವನ್ನೂ ಪಾವತಿಸುತ್ತಿದೆ. ಆದರೆ ಅಲ್ಲಿನ ಶಾಲೆಗೆ ದಾಖಲಾಗಿದ್ದ ಮಕ್ಕಳ ಹಿತದೃಷ್ಟಿಯಿಂದ ಈವರೆಗೆ ಸುಮ್ಮನಿದ್ದೆವು. ಆದರೆ ಈಗ ಶಾಲೆಗೆ ರಜೆ ಇರುವುದರಿಂದ ವಿವೇಕಾನಂದ ಸ್ಫೂರ್ತಿ ಕೇಂದ್ರ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಈ ವಿಷಯದಲ್ಲಿ ಹಿಂದೆ ಸರಿಯುವ ಪ್ರಶ್ನೆಯೆ ಇಲ್ಲ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅನುದಾನ ಬಿಡುಗಡೆ: ಪ್ರಧಾನಿ ಡಾ. ಮನಮೋಹನ ಸಿಂಗ್ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯ ತೀರ್ಮಾನದಂತೆ ಸ್ವಾಮಿ ವಿವೇಕಾನಂದರ 150ನೇ ಜನ್ಮ ಶತಾಬ್ದಿಯ ಅಂಗವಾಗಿ ಅವರು ತಂಗಿದ್ದ ಸ್ಥಳಗಳನ್ನು ಸ್ಮಾರಕವನ್ನಾಗಿ ರೂಪಿಸುವ ಉದ್ದೇಶದಿಂದ ಕೈಗೊಂಡ ತೀರ್ಮಾನ ಇದು. ಇದರಲ್ಲಿ ಯಾವುದೇ ದುರುದ್ದೇಶ ಇಲ್ಲ. ಕೇಂದ್ರದಲ್ಲಿ ಯುವಕರನ್ನು ಪ್ರೋತ್ಸಾಹಿಸುವ ಮತ್ತು ಸನ್ಮಾರ್ಗದತ್ತ ಕೊಂಡೊಯ್ಯುವ ಕೆಲಸ ಮಾಡಲಾಗುವುದು. ಇದಕ್ಕಾಗಿ ಅಂದಿನ ಕೇಂದ್ರ ಸರ್ಕಾರ ರು. 5 ಕೋಟಿ ಮತ್ತು ರಾಜ್ಯ ಸರ್ಕಾರ ರು. 5 ಕೋಟಿ ನೀಡಿದೆ. ಅಲ್ಲದೆ ಪ್ರಾರಂಭಿಕ ಅನುದಾನವಾಗಿ ರು. 25 ಲಕ್ಷ ಬಿಡುಗಡೆ ಆಗಿದೆ ಎಂದು ಅವರು ವಿವರಿಸಿದರು.
ಪತ್ರ ರವಾನೆ: ಎನ್ಟಿಎಂಎಸ್ ಶಾಲೆಯ ಭೌತಿಕ ಸ್ವಾಧೀನತೆಯನ್ನು ಶ್ರೀ ರಾಮಕೃಷ್ಣ ಆಶ್ರಮಕ್ಕೆ ನೀಡಬೇಕಿರುವುದರಿಂದ ಕೂಡಲೇ ಕ್ರಮ ಕೈಗೊಳ್ಳಲು ಡಿಡಿಪಿಐ, ಬಿಇಒ ಮತ್ತು ಸಂಬಂಧಿಸಿದ ಶಾಲೆಯ ಮುಖ್ಯೋಪಾಧ್ಯಾಯರಿಗೆ ಸರ್ಕಾರದಿಂದ ಪತ್ರ ರವಾನೆಯಾಗಿದೆ. ಆದ್ದರಿಂದ ಸಾರ್ವಜನಿಕರು ತಮ್ಮ ಮಕ್ಕಳನ್ನು ಎನ್ಟಿಎಂ ಶಾಲೆಗೆ ಸೇರಿಸುವ ದುಸ್ಸಾಹಸಕ್ಕೆ ಕೈ ಹಾಕಬಾರದು. ಅಲ್ಲದೆ ಕೆಲವರು ಶಾಲೆಯ ಹಸ್ತಾಂತರದ ವಿಷಯದಲ್ಲಿ ಸಾರ್ವಜನಿಕರನ್ನು ಕೆರಳಿಸುವ, ದಾರಿತಪ್ಪಿಸುವ ಸಮಾಜದ ಶಾಂತಿಗೆ ಭಂಗವನ್ನುಂಟು ಮಾಡುವ ವಿವಾದಾತ್ಮಕ ಹೇಳಿಕೆಗಳನ್ನು ಉಪೇಕ್ಷಿಸಬೇಕು ಎಂದು ಅವರು ಮನವಿ ಮಾಡಿದರು.
ಲಿಖಿತ ಆದೇಶ ನೀಡಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿದ್ಯಾರ್ಥಿಗಳನ್ನು ಶಾಲೆಗೆ ದಾಖಲಾತಿ ಮಾಡಿಕೊಳ್ಳುವಂತೆ ಹೇಳಿರಬಹುದು. ಆದರೆ ಲಿಖಿತ ಆದೇಶ ನೀಡಿಲ್ಲ. ನೀಡುವುದೂ ಇಲ್ಲ ಎಂಬ ನಂಬಿಕೆ ಇದೆ. ರಾಮಕೃಷ್ಣ ಆಶ್ರಮದಿಂದ ಕುವೆಂಪು ಮತ್ತು ಜಿ.ಎಸ್. ಶಿವರುದ್ರಪ್ಪ ಅವರು ಪ್ರೇರಣೆ ಆದಂತೆ, ಮನೆ ಮನೆಯಲ್ಲೂ ಒಬ್ಬ ಕುವೆಂಪು ಮತ್ತು ಜಿಎಸ್ಎಸ್ ಹುಟ್ಟಬೇಕು ಎಂಬುದು ನಮ್ಮ ಬಯಕೆ. ವಿವೇಕಾನಂದರ ಸಾಂಸ್ಕೃತಿಕ ಕೇಂದ್ರ ತೆರೆಯುವ ನಿಟ್ಟಿನಲ್ಲಿ ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈಗ ಎನ್ಟಿಎಂಎಸ್ ಶಾಲೆಯಲ್ಲಿ ಇರುವವರು ತಮ್ಮ ವಸ್ತುಗಳನ್ನು ತೆರೆವುಗೊಳಿಸಿ, ಕೇಂದ್ರದ ಮುಂದಿನ ಕೆಲಸಕ್ಕೆ ಅನುವು ಮಾಡಿಕೊಡಬೇಕು ಎಂದರು.
ನ್ಯಾಯಾಲಯ ಸಮಯ ವ್ಯರ್ಥ: ವಕೀಲ ಅರುಣ್ಕುಮಾರ್ ಮಾತನಾಡಿ, ಎನ್ಟಿಎಂ ಶಾಲೆಯನ್ನು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಬಾರದು ಎಂದು ನ್ಯಾಯಾಲಯಕ್ಕೆ ಪಿಐಎಲ್ ಸಲ್ಲಿಸಿದ್ದ ಹೊಯ್ಸಳ ಎಂಬವರಿಗೆ ಅನಗತ್ಯ ಪ್ರಕರಣ ದಾಖಲಿಸಿ ನ್ಯಾಯಾಲಯ ಸಮಯ ವ್ಯರ್ಥ ಮಾಡಿದರು ಎಂಬ ಕಾರಣಕ್ಕೆ ರು. 5 ಸಾವಿರ ದಂಡ ವಿಧಿಸಿದೆ. ಆದರೆ ಮೀರಾನಾಯಕ್, ದೇವನೂರ ಮಹಾದೇವ, ಪಿ.ವಿ. ನಂಜರಾಜ್ ಅರಸ್, ಪ. ಮಲ್ಲೇಶ್, ಸ.ರಾ. ಸುದರ್ಶನ್ ಅವರು ಸಲ್ಲಿಸಿದ್ದ ಪಿಐಎಲ್ನ್ನು ಏಕಾಏಕಿ ಹಿಂದಕ್ಕೆ ತೆಗೆದುಕೊಂಡಿದ್ದಾರೆ. ಆದರೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿ ಏಕಾಏಕಿ ತಮ್ಮ ನಿರ್ಧಾರ ಬದಲಿಸಿದ್ದು ಏಕೆ ಎಂಬುದು ತಿಳಿಯುತ್ತಿಲ್ಲ. ಬಹುಶ- ಸರ್ಕಾರವೆ ತೀರ್ಮಾನಿಸಿದ ಮೇಲೆ ನಮ್ಮದೇನು ಎಂದು ಹಿಂದಕ್ಕೆ ಪಡೆದಿರಬಹುದು ಎಂದು ಹೇಳಿದರು.
ಸಾಹಿತಿ ಡಾ. ಸಿಪಿಕೆ ಮಾತನಾಡಿ, ಎನ್ಟಿಎಂಎಸ್ ಶಾಲೆಯ ವಿವಾದಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡುತ್ತಿರುವವರು ಮತ್ತು ನಮ್ಮ ಉದ್ದೇಶ ಒಂದೆ ಆಗಿದೆ. ಅದು ಕನ್ನಡದ ಅಭಿವೃದ್ಧಿಯ ಕೆಲಸ. ಆದರೆ ಇಬ್ಬರು ಎದುರು ಬಂದಿದ್ದೇವೆ. ಕನ್ನಡದ ಅಳಿವು ಉಳಿವು ಎನ್ಟಿಎಂಎಸ್ ಶಾಲೆಗೆ ಸೀಮಿತವಾಗಿಲ್ಲ. ಅಲ್ಲದೆ ಸ್ಮಾರಕ ನಿರ್ಮಾಣದಿಂದ ಕನ್ನಡ ಸರ್ವತೋಮುಖ ಅಭಿವೃದ್ಧಿ ಹೊಂದುತ್ತದೆ ಎಂದೂ ಅಲ್ಲ. ಶಾಲೆ ಮುಚ್ಚಿದರೆ ಅದರ ಕನ್ನಡದ ಅಧ-ಪತನವಾಗುತ್ತದೆ ಎಂದೂ ಅಲ್ಲ. ಇಲ್ಲಿ ಭಾಷೆ ದೃಷ್ಟಿಯಿಂದ ಮಾತ್ರ ನೋಡದೆ, ಸರ್ವೋದಯ ದೃಷ್ಟಿಯಿಂದ ನೋಡಬೇಕು. ರಾಮಕೃಷ್ಣ ಆಶ್ರಮವೂ ಕನ್ನಡದ ಕೆಲಸವನ್ನೆ ಮಾಡಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ನಿವೃತ್ತ ಕಾರ್ಯದರ್ಶಿ ಎನ್.ಎಸ್. ಚಕ್ರವರ್ತಿ ಮತ್ತು ವಕೀಲ ಬಸಪ್ಪ ಇದ್ದರು.