ಶಾಲೆ ಉಳಿಸಿ ಧರಣಿ 6ನೇ ದಿನಕ್ಕೆ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 24
ಮಹಾರಾಣಿ ಮಾದರಿ ಕನ್ನಡ ಶಾಲೆಯ (ಎನ್‌ಟಿಎಂಎಸ್) ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸುವ ಸರ್ಕಾರದ ಆದೇಶವನ್ನು ವಿರೋಧಿಸಿ ನಗರದ ನಾರಾಯಣಶಾಸ್ತ್ರಿ ರಸ್ತೆಯಲ್ಲಿರುವ ಶಾಲೆ ಎದುರು ಕನ್ನಡ ಕ್ರಿಯಾ ಸಮಿತಿ ನಡೆಸುತ್ತಿರುವ ಧರಣಿ ಸತ್ಯಾಗ್ರಹವು 6 ದಿನವಾದ ಶನಿವಾರ ಸಹ ಮುಂದುವರೆಯಿತು.
ಈ ಹೋರಾಟವನ್ನು ಬೆಂಬಲಿಸಿ ನಾಯಕ ಜನಾಂಗದ ಹಿತರಕ್ಷಣಾ ವೇದಿಕೆಯವರು ಪ್ರತಿಭಟಿಸಿ, ಎನ್‌ಟಿಎಂ ಶಾಲೆ ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸುವ ನಿರ್ಧಾರವನ್ನು ಸರ್ಕಾರ ಕೈಬಿಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆಯುವವರೆಗೂ ನಿರಂತರ ಹೋರಾಟ ನಡೆಸುವುದಾಗಿ ಸಮಿತಿಯವರು ಎಚ್ಚರಿಸಿದರು.
ನಿರಂಜನ ಮಠಕ್ಕೆ ಭೇಟಿ: ಸಾಹಿತಿ ದೇವನೂರ ಮಹಾದೇವ ಅವರು ಎನ್‌ಟಿಎಂ ಶಾಲೆ ಉಳಿಸಿ ಹೋರಾಟದಲ್ಲಿ ಭಾಗವಹಿಸಿ ತಮ್ಮ ಬೆಂಬಲ ಸೂಚಿಸಿದರು. ಬಳಿಕ ಶಾಲೆ ಪಕ್ಕದಲ್ಲಿರುವ ನಿರಂಜನ ಮಠಕ್ಕೆ ಭೇಟಿ ನೀಡಿ, ಮಠದ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ಕನ್ನಡ ಕ್ರಿಯಾ ಸಮಿತಿಯ ಸ.ರ. ಸುದರ್ಶನ, ಎಂ.ಬಿ. ವಿಶ್ವನಾಥ್, ಸಂಸ್ಕೃತಿ ಸುಬ್ರಹ್ಮಣ್ಯ, ಕೊ.ಸು. ನರಸಿಂಹಮೂರ್ತಿ, ಪತ್ರಿಕೋದ್ಯಮಿ ರಾಜಶೇಖರ ಕೋಟಿ, ನಾಯಕ ಜನಾಂಗದ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ದ್ಯಾವಪ್ಪನಾಯಕ, ಶ್ರೀಧರ್ ಬೆಟ್ಟ, ವಿವಿಧ ಸಂಘಟನೆಗಳ ಮುಖಂಡರಾದ ಮೂಗುರು ನಂಜುಂಡಸ್ವಾಮಿ, ತಾಯೂರು ವಿಠಲಮೂರ್ತಿ, ಡಾ.ವಿ. ಲಕ್ಷ್ಮಿನಾರಾಯಣ, ಧನಂಜಯ್, ದ್ಯಾವಪ್ಪನಾಯಕ, ಗೋ.ಹ. ಶೆಟ್ಟಿ, ಚಂದ್ರ, ಅಶ್ವತ್ಥನಾರಾಯಣರಾಜೇ ಅರಸ್, ಬಸವರಾಜು ಇದ್ದರು.
ಪ್ರತಿ ಪ್ರತಿಭಟನೆ: ಎನ್‌ಟಿಎಂ ಶಾಲೆ ನಾಮಫಲಕದ ಮೇಲೆ ವಿವೇಕ ಸ್ಮಾರಕ, ಉದ್ದೇಶಿತ ಸ್ವಾಮಿ ವಿವೇಕಾನಂದ ಸಾಂಸ್ಕೃತಿಕ ಯುವಕೇಂದ್ರ ಎಂಬ ನಾಮಫಲಕನ್ನು ರಾಮಕೃಷ್ಣ ಆಶ್ರಮದ ಪರವಾಗಿರುವವರು ಹಾಕಲಿದ್ದಾರೆಂಬ ಸುದ್ದಿ ಹರಡಿತ್ತು. ಇದಕ್ಕೆ ಕನ್ನಡ ಕ್ರಿಯಾ ಸಮಿತಿಯವರು ಕಪ್ಪು ಪಟ್ಟಿ ಧರಿಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.