ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಮೈಸೂರು

ಆಸ್ತಿ ವಿವರ ಸಲ್ಲಿಸದಿದ್ರೆ ಧರಣಿ

Mainashree
Updated On : 26 May 2014, 9:45 am

ಮೈಸೂರು: ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಆಸ್ತಿ ವಿವರವನ್ನು 15 ದಿನಗಳಲ್ಲಿ ಪಾಲಿಕೆ ಅಧಿಕಾರಿ ಮತ್ತು ಸಿಬ್ಬಂದಿ ಸಂಗ್ರಹಿಸದಿದ್ದರೆ ಪ್ರತಿಭಟಿಸುವುದಾಗಿ ತೆರಿಗೆ ಹಣಕಾಸು ಮತ್ತು ಅಪೀಲು ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಲ್. ಬೈರಪ್ಪ ಎಚ್ಚರಿಸಿದ್ದಾರೆ. ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಆಸ್ತಿ ವಿವರದ ಮಾಹಿತಿ ನೀಡದ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಸಹನೆ ಕಳೆದುಕೊಂಡ ಸಮಿತಿ ಸದಸ್ಯರು, ಸರಿಯಾದ ಮಾಹಿತಿ ನೀಡದಿದ್ದರೆ ಪ್ರತಿಭಟಿಸಬೇಕಾಗುತ್ತದೆ. ಕಳೆದ ಐದು ವರ್ಷಗಳಿಂದ ನೀವು ಹೇಳುವ ಕತೆ ಕೇಳಿ ಸಾಕಾಗಿದೆ. ಪಾಲಿಕೆಗೆ ಕೋಟ್ಯಂತರ ಅನುದಾನ ಬಿಡುಗಡೆ ಆದರೂ ಸದುಪಯೋಗ ಮಾಡಿಕೊಳ್ಳದ ಹೇಡಿಗಳಾಗಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರ ಅಕ್ರಮ- ಸಕ್ರಮ ಯೋಜನೆ ಜಾರಿಗೊಳಿಸುತ್ತಿದೆ. ಆದರೆ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ್ಯ ಹೆಚ್ಚಾಗಿದೆ. ಪಾಲಿಕೆ ತನ್ನ ವ್ಯಾಪ್ತಿಯ ಆಸ್ತಿ ವಿವರ ಸಂಗ್ರಹಿಸಿಟ್ಟರೆ ಮುಂದೆ ತೆರಿಗೆ ಸಂಗ್ರಹಿಸಲು ಸುಲಭವಾಗುತ್ತದೆ. ಆದ್ದರಿಂದ ಅಧಿಕಾರಿಗಳು ಸರ್ವೆ ನಡೆಸಿ ಎಂದರು. ಸಹಾಯಕ ಆಯುಕ್ತರಿಂದ ಆಸ್ತಿ ವಿವರ ಪಡೆದ ಕಂದಾಯ ಉಪ ಆಯುಕ್ತ ಜಗದೀಶ್, ನಿಗದಿತ ಅವಧಿಯೊಳಗೆ ಮಾಹಿತಿ ಸಂಗ್ರಹಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡರು. ನಗರದ 9 ವಲಯ ಕಚೇರಿಗಳಿಂದ ಶೇ. 60 ರಷ್ಟು ಸಂಗ್ರಹವಾಗಿದೆ. ಉಳಿದಂತೆ ಪಾಲಿಕೆ ವ್ಯಾಪ್ತಿಯ ವಲಯ ಕಚೇರಿ 1, 5 ಮತ್ತು 8 ರಲ್ಲಿ ಸರಿಯಾಗಿ ಮಾಹಿತಿ ಸಂಗ್ರಹವಾಗಿಲ್ಲ ಎಂದು ಸಭೆಗೆ ತಿಳಿಸಿದರು. ಕನಿಷ್ಠ ಶೇ. 3 ರಷ್ಟು ಆಸ್ತಿ ತೆರಿಗೆ ಹೆಚ್ಚಳಗೊಳಿಸುವ ಶಿಫಾರಸ್ಸಿಗೆ ಸಮಿತಿ ಅನುಮೋದಿಸಿ, ಕೌನ್ಸಿಲ್‌ಗೆ ಒಪ್ಪಿಗೆ ಸಲ್ಲಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement