ಎನ್‌ಟಿಎಂ ಶಾಲೆ ಹಸ್ತಾಂತರ ರದ್ದು ಸಾಧ್ಯತೆ
ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 27
ಎನ್‌ಟಿಎಂ ಶಾಲೆ ಹಸ್ತಾಂತರ ಪ್ರಕ್ರಿಯೆ ರದ್ದುಗೊಳ್ಳುವ ಸಾಧ್ಯತೆಯ ಸುಳಿವು ದೊರೆತ ಹಿನ್ನೆಲೆಯಲ್ಲಿ ಶಾಲೆ ಉಳಿವಿಗೆ ಒತ್ತಾಯಿಸಿ ಕನ್ನಡ ಪರ, ದಲಿತ, ರೈತ ಮತ್ತು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಡಿಡಿಪಿಐ ಕಚೇರಿ ಎದುರು ನಡೆಸುತ್ತಿದ್ದ ಪ್ರತಿಭಟನೆ ದಿನದ ಮಟ್ಟಿಗೆ ಅಂತ್ಯಗೊಂಡಿದೆ.
ಡಿಡಿಪಿಐ ಎಚ್.ಆರ್. ಬಸಪ್ಪ ನೀಡಿದ ಮಾಹಿತಿ ಅನ್ವಯ ದಿನದ ಮಟ್ಟಿಗೆ ಪ್ರತಿಭಟನೆ ಕೈಬಿಟ್ಟ ವಿವಿಧ ಸಂಘಟನೆ ಪದಾಧಿಕಾರಿಗಳು ಸಮಸ್ಯೆ ಇತ್ಯರ್ಥ ಆಗದಿದ್ದರೆ ಬುಧವಾರ ಮತ್ತೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಎನ್‌ಟಿಎಂ ಶಾಲೆಯನ್ನು ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರಿಸಬಾರದು ಎಂದು ಆಗ್ರಹಿಸಿ ಕಳೆದ 8 ದಿನಗಳಿಂದ ಶಾಲೆ ಎದುರು ನಡೆಸುತ್ತಿದ್ದ ಪ್ರತಿಭಟನೆ ಮಂಗಳವಾರ ಡಿಡಿಪಿಐ ಕಚೇರಿ ಮುಂದಕ್ಕೆ ಸ್ಥಳಾಂತರವಾಯಿತು.
ಡಿಡಿಪಿಐ ಕಚೇರಿ ಬಳಿಗೆ ಬರುತ್ತಿದ್ದಂತೆಯೆ ಪೊಲೀಸರು ಗೇಟ್ ಹಾಕಿ ಒಳಗೆ ಪ್ರವೇಶಿಸಲು ಅಡ್ಡಿ ಪಡಿಸಿದರು. ಈ ವೇಳೆ ರೈತರು ಮತ್ತು ದಲಿತ ಸಂಘಟನೆಗಳ ಪದಾಧಿಕಾರಿಗಳು ಪೊಲೀಸರ ವಿರುದ್ಧ ಧಿಕ್ಕಾರ ಕೂಗಿದರು. ಬಳಿಕ ಹೋರಾಟಕ್ಕೆ ಮಣಿದ ಪೊಲೀಸರು ಕಚೇರಿ ಆವರಣದಲ್ಲಿ ಕುಳಿತು ಪ್ರತಿಭಟಿಸಲು ಅವಕಾಶ ಕಲ್ಪಿಸಿದರು.
ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ, ರಂಗಾಯಣ ನಿರ್ದೇಶಕ ಎಚ್. ಜನಾರ್ಧನ್, ಪ್ರಗತಿಪರ ಹೋರಾಟಗಾರ ಪ. ಮಲ್ಲೇಶ್, ಪ್ರೊ.ಪಿ.ವಿ. ನಂಜರಾಜ ಅರಸ್ ಅವರು ಸರ್ಕಾರ ಮತ್ತು ಇಲಾಖೆ ಅಧಿಕಾರಿಗಳ ನಿಲುವನ್ನು ಖಂಡಿಸಿದರು. ಬಳಿಕ ಎಚ್. ಜನಾರ್ಧನ್ ಮತ್ತು ಕೆಲವು ದಲಿತ ಮುಖಂಡರು ಕ್ರಾಂತಿಗೀತೆಗಳನ್ನು ಹಾಡಿ ಪ್ರತಿಭಟನೆಗೆ ಹೊಸ ರೂಪ ಕೊಟ್ಟರು. ಈ ವೇಳೆ ಡಿಡಿಪಿಐ ಎಚ್.ಆರ್. ಬಸಪ್ಪ ಅವರು ತಮ್ಮ ಸಹಾಯಕರನ್ನು ಪ್ರತಿಭಟನಾ ಸ್ಥಳಕ್ಕೆ ಕಳುಹಿಸಿದರು. ಇದಕ್ಕೆ ಮಣಿಯದಿದ್ದಾಗ ಜಿಲ್ಲಾ ಪಂಚಾಯಿತಿ ಸಭೆಯಲ್ಲಿದ್ದ ಬಸಪ್ಪ ಅವರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಸಪ್ಪ ಅವರು, ನಿಮ್ಮ ಪ್ರತಿಭಟನೆಗೆ ನಮ್ಮ ಬೆಂಬಲವೂ ಇದೆ. ಐದು ನಿಮಿಷಗಳ ಹಿಂದಷ್ಟೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರನ್ನು ಸಂಪರ್ಕಿಸಿ ಮಾಹಿತಿ ಪಡೆದಿದ್ದೇನೆ. ಶಾಲೆ ಹಸ್ತಾಂತರ ಪ್ರಕ್ರಿಯೆ ಸಂಬಂಧ ಸೂಕ್ತ ನಿರ್ಧಾರ ಕೈಗೊಳ್ಳುವಂತೆ ಶಿಫಾರಸ್ಸು ಪತ್ರವನ್ನು ಮುಖ್ಯಮಂತ್ರಿಗಳಿಗೆ ರವಾನಿಸಿದ್ದಾರೆ. ಯಾವುದೆ ಕ್ಷಣದಲ್ಲಿ ಮುಖ್ಯಮಂತ್ರಿಗಳು ಶಾಲೆಯ ಹಸ್ತಾಂತರ ರದ್ದುಗೊಳಿಸುವ ತೀರ್ಮಾನ ಕೈಗೊಳ್ಳಬಹುದು. ಅಲ್ಲದೆ ಶಾಲಾ ದಾಖಲಾತಿಗೂ ಅವಕಾಶ ಕಲ್ಪಿಸುತ್ತೇನೆ. ಇಂದು ಈ ಸಮಸ್ಯೆ ಬಗೆಹರಿಯದಿದ್ದರೆ ನಾಳೆ ನಾನೇ ಖುದ್ದು ಬೆಂಗಳೂರಿಗೆ ತೆರಳುತ್ತೇನೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಪ. ಮಲ್ಲೇಶ್, ಸರ್ಕಾರ ಶಾಲೆಯ ವಿರುದ್ಧ ನಿರ್ಣಯ ಕೈಗೊಂಡರೆ ನಮ್ಮ ಪ್ರತಿಭಟನೆಯನ್ನು ಮುಂದುವರೆಸುತ್ತೇವೆ. ಯಾವುದೆ ಕಾರಣಕ್ಕೂ ಶಾಲೆ ಮುಚ್ಚಲು ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಪ್ರೊ.ಪಿ.ವಿ. ನಂಜರಾಜಅರಸ್, ಬೆಟ್ಟಯ್ಯಕೋಟೆ, ಸಾ.ರಾ. ಸುದರ್ಶನ್, ಎಂ.ಬಿ. ವಿಶ್ವನಾಥ್, ತಾಯೂರು ವಿಠಲಮೂರ್ತಿ, ಆಲಗೂಡು ಶಿವಕುಮಾರ್ ಇದ್ದರು.
ಜನ ಸಾಮಾನ್ಯರ ಕುತ್ತಿಗೆ ಹಿಚುಕುವ ಕೆಲಸ ಆಗಬಾರದು
ಜನಪರ ಆಲೋಚನೆ ಇದ್ದ ವಿವೇಕಾನಂದರ ಹೆಸರು ಹೇಳೆ ಜನ ಸಾಮಾನ್ಯರ ಕುತ್ತಿಗೆ ಹಿಚುಕುವ ಕೆಲಸ ಆಗಬಾರದು. ಆಶ್ರಮ ನಿರ್ಮಿಸಲು ಸರ್ಕಾರ ರು. 5 ಕೋಟಿ ನೀಡಿದೆ. ಅದೇ ಅನುದಾನವನ್ನು ಶಾಲೆಗೆ ನೀಡಿದ್ದರೆ ಅತ್ಯುತ್ತಮ ಶಾಲೆಯಾಗಿ ರೂಪಿಸಬಹುದಿತ್ತು. ಸರ್ಕಾರ ಉಳ್ಳವರ ಪರ ನಿಲ್ಲಬಾರದು. ಹಿರಿಯ ಸಾಹಿತಿಗಳು ಮತ್ತು ನಮ್ಮ ಗುರುಗಳೂ ಆದವರು ಕನ್ನಡ ಶಾಲೆಯ ವಿರುದ್ಧ ಹೋರಾಟ ನಡೆಸುತ್ತಿರುವುದು ವಿಪರ್ಯಾಸ. ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ ಎಂಬ ಕುವೆಂಪು ಮಾತಿಗಾದರೂ ಅವರು ಕನ್ನಡ ಶಾಲೆಯ ಪರ ಕೈ ಎತ್ತಬೇಕು ಎಂದು ಹೇಳಿದರು.
ಯಾರು ಏನು ಹೇಳಿದರು
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಾಹಿತಿ ಪ್ರೊ. ಅರವಿಂದ ಮಾಲಗತ್ತಿ, ಕನ್ನಡ ಶಾಲೆ ಬೀಗ ಹಾಕಿದರೆ ಕನ್ನಡಿಗರ ಬಾಯಿಗೆ ಬೀಗ ಹಾಕಿದಂತೆ. ಮೊದಲು ಶಾಲೆಯ ಬೀಗ ತೆಗೆದು ಮಕ್ಕಳ ಪ್ರವೇಶಾತಿಗೆ ಅವಕಾಶ ನೀಡಬೇಕು. ಕನ್ನಡ ಶಾಲೆಗೆ ಗೋರಿ ಕಟ್ಟಿ, ಮಠಕ್ಕೆ ಕಳಸ ಹಾಕಬೇಕಿಲ್ಲ. ಆಶ್ರಮದ ಪರ ಪ್ರತಿಭಟಿಸುವವರು ಅವರ ಆಲೋಚನೆಯನ್ನು ಪರಿಷ್ಕರಿಸಿಕೊಳ್ಳಬೇಕು. ಇಂದು ಮುಚ್ಚುವ ಒಂದು ಕನ್ನಡ ಶಾಲೆಯೆ ನಾಳೆ ನೂರು ಶಾಲೆಗೆ ಮಾದರಿ ಆಗಬಾರದು. ಬಡವರ ಶಾಲೆ, ಬಡ ಮಕ್ಕಳು ಓದುವ ಶಾಲೆಯ ಮೇಲೆ ಕಲ್ಲು ಚಪ್ಪಡಿ ಎಳೆಯುವ ಕೆಲಸ ಬೇಡ. ಇಂತಹ ಹತ್ತಾರು ಶಾಲೆ ತೆರೆಯಬೇಕಾದ ಸರ್ಕಾರ ಈ ಕೆಲಸಕ್ಕೆ ಕೈ ಹಾಕಬಾರದು. ಸ್ವಾಮಿ ವಿವೇಕಾನಂದರೆ ಇದ್ದರೆ ಶಾಲೆ ಮುಚ್ಚಲು ಒಪ್ಪಿಗೆ ನೀಡುತ್ತಿರಲಿಲ್ಲ ಎಂದರು.